ಶಾಲಾರಂಭದ ಮುನ್ನಾದಿನ ಮಸಣ ಸೇರಿದ ಮಕ್ಕಳು!

Posted on May 30, 2011

0


ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ ಸಮೀಪದ ಕೆರೆಯೊಂದರಲ್ಲಿ ಮುಳುಗಿ ಇಬ್ಬರು ಪುಟಾಣಿಗಳು ಮೃತಪಟ್ಟ ದಾರುಣ ಘಟನೆ ನಿನ್ನೆ ನಡೆದಿದೆ. ಇಂದು ಶಾಲೆಗೆ ಸೇರಬೇಕಾಗಿದ್ದ ಇಬ್ಬರು ಮಕ್ಕಳು ಸಾವಿನ ಮನೆ ಸೇರಿದ್ದಾರೆ. ಸಂಭ್ರಮದ ಬೇಸಿಗೆ ರಜೆ ಈ ಮಕ್ಕಳ ಪಾಲಿಗೆ ದುರಂತದಲ್ಲೇ ಅಂತ್ಯ ಕಂಡದ್ದು ವಿಪರ್ಯಾಸ.

ಮೃತಪಟ್ಟ ದುರ್ದೈವಿಗಳನ್ನು ಶರಧಿ(೭) ಮತ್ತು ಆಕೆಯ ತಂಗಿ ಶರಣ್ಯ(೫) ಎಂದು ಗುರುತಿಸಲಾಗಿದೆ. ಮೃತರು ಇಲ್ಲಿನ ಬಂಟ್ವಾಳ- ಕಡೂರು ರಸ್ತೆಯ ಕಾರಿಂಜ ಕ್ರಾಸ್ ಬಳಿ ವಿನಾಯಕ ಕ್ಯಾಂಟೀನ್ ನಡೆಸುತ್ತಿರುವ ಜಯೇಂದ್ರ ರಾವ್ ಹಾಗೂ ಸುನಿತಾ ದಂಪತಿಯ ಮಕ್ಕಳು. ನಿನ್ನೆ ಮಧ್ಯಾಹ್ನ ಎರಡರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಕ್ಕಳಿಬ್ಬರು ಮನೆ ಬಳಿಯ ಕೆರೆಗೆ ಹೋಗಿದ್ದು, ಮನೆಯವರಿಗೆ ವಿಷಯ ಗೊತ್ತಿರಲಿಲ್ಲ. ಮಕ್ಕಳ ಸುಳಿವು ಕಾಣದೇ ಇದ್ದಾಗ ಹುಡುಕಾಡಿದ ಹೆತ್ತವರಿಗೆ ಕೆರೆ ಬಳಿ ಯಲ್ಲಿ ಮಕ್ಕಳ ಬಟ್ಟೆ, ಚಪ್ಪಲಿಗಳು ಪತ್ತೆಯಾಗಿದ್ದವು. ಕೆರೆಯಲ್ಲಿ ಆಟವಾ ಡಲು ಹೋಗಿದ್ದ ಮಕ್ಕಳು ಕಾಲು ಜಾರಿ ಮುಳುಗಿದ್ದರು. ಕೆರೆಯ ನೀರಿನಲ್ಲಿದ್ದ ಮೃತ ದೇಹಗಳನ್ನು ವಗ್ಗದ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದ್ದು, ಮರ ಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಆಗಮಿಸಿ ಮಹಜರು ನಡೆಸಿದ್ದಾರೆ.

Posted in: Special Report