೪೦ ಲಕ್ಷ ಹವಾಲಾ ಹಣ ವಶ

Posted on May 12, 2011

0


ಮಂಗಳೂರು: ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ೪೦ಲಕ್ಷ ರೂ.ಗಳನ್ನು ಕಾಸರಗೋಡಿನ ಕಲ್ಪಟ್ಟದಲ್ಲಿ ವಶಪಡಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಜಾಫರ್, ಮುಹಮ್ಮದ್, ಮುಹಮ್ಮದ್ ಉನೈನ್, ಸುಹೈಬ್ ಬಂಧಿತ ಆರೋಪಿಗಳಾಗಿದ್ದಾರೆ. ಮೈಸೂರಿನಿಂದ ಕೋಯಿಕ್ಕೋಡ್‌ಗೆ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಹಣ ಸಹಿತ ಬರುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಹೈಬ್ ಮತ್ತು ಉನೈನ್ ಬಳಿಯಿಂದ ೨೧.೬ಲಕ್ಷ ರೂ. ಹಾಗೂ ಮತ್ತಿಬ್ಬರ ಬಳಿಯಿಂದ ೧೫ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಕಳ್ಳಭಟ್ಟಿ ಸೇವಿಸಿ ಮೃತ್ಯು

ಕಳ್ಳಬಟ್ಚಿ ಸಾರಾಯಿ ಸೇವಿಸಿದ ವೃದ್ಧರೋರ್ವರು ಮೃತಪಟ್ಟ ಘಟನೆ ಕಾಞಿಂಗಾಡ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳತ್ತೂರು ರಾಮನಡ್ಕ ಎಂಬಲ್ಲಿ ಸಂಭವಿಸಿದೆ.

ಮೃತರನ್ನು ಸ್ಥಳೀಯ ಪರಿಶಿಷ್ಟ ಕಾಲನಿ ನಿವಾಸಿ ಕಣ್ಣನ್(೬೫)ಎಂದು ಗುರುತಿಸಲಾಗಿದೆ. ಎರಡು ದಿನಗಳಿಂದ ಕಾಣೆಯಾಗಿದ್ದ ಇವರನ್ನು ಮನೆಮಂದಿ ಹುಡುಕಾಟ ನಡೆಸಿದಾಗ ಮಾಂಙನಡ್ಕದ ವ್ಯಕ್ತಿಯೋರ್ವರ ಮನೆಯ ಹಿತ್ತಲಿನಲ್ಲಿ ಅವರ ಮೃತದೇಹ ಪತ್ತೆಯಾಯಿತು ಎಂದು ಹೇಳಲಾಗಿದೆ. ಕಳ್ಳಭಟ್ಟಿ ಸಾರಾಯಿ ಸೇವಿಸಿದ್ದೇ ಇವರ ಮೃತ್ಯುವಿಗೆ ಕಾರಣ ಎಂದು ಶಂಕಿಸಲಾಗಿದೆ.

ರಿಸಲ್ಟ್ ನೋಡಲು ತೆರಳಿದ್ದ ವಿದ್ಯಾರ್ಥಿನಿ ನಾಪತ್ತೆ

ಮಂಗಳೂರು: ನಿನ್ನೆ ಪ್ರಕಟಗೊಳ್ಳಲಿದ್ದ ಪಿಯುಸಿ ರಿಸಲ್ಟ್ ಅನ್ನು ನೋಡಿ ಬರುತ್ತೇನೆ ಎಂದು ಸೈಬರ್‌ಗೆ ತೆರಳಿದ್ದ ವಿದ್ಯಾರ್ಥಿನಿ ನಾಪತ್ತೆಯಾದ ಘಟನೆ ನಿನ್ನೆ ನಡೆದಿದೆ. ನಾಪತ್ತೆಯಾದಾಕೆಯನ್ನು ಬಿಜೈ ಚರ್ಚ್ ಹಿಂಬದಿ ನಿವಾಸಿ ಲಿಯೋರಾ ಡಿಕುನ್ಹ(೧೭) ಎಂದು ಗುರುತಿಸಲಾಗಿದೆ. ಈಕೆ ಮನೆಯಿಂದ ತೆರಳಿದವಳು ಎಲ್ಲಿಗೆ ಹೋದಳೆಂಬುದು ನಿಗೂಢವಾಗಿದ್ದು, ತಾಯಿ ಗ್ರೆಟ್ಟಾ ಡಿಕುನ್ಹ ನೀಡಿದ ದೂರಿನಂತೆ ಕದ್ರಿ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪುತ್ತೂರು: ಚಿಟ್‌ಫಂಡ್ ವಂಚನೆ

ಮಂಗಳೂರು: ಚಿಟ್‌ಫಂಡ್ ಮಾಡಿ ಹಣ ನೀಡದೆ ವಂಚಿಸಿರುವ ಪ್ರಕರಣದ ದೂರು ಪುತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪುತ್ತೂರು ಶಾಂತಿಗೋಡು ಗ್ರಾಮದ ರೇಖಾ ಎಂಬವರು ಮಂಗಳೂರಿನ ವಿನೋದ ಎಂಬಾತನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿನೋದ ಆರಂಭಿಸಿದ ಚಿಟ್‌ಫಂಡ್‌ನಲ್ಲಿ ತಾನು ಐವತ್ತು ಸಾವಿರ ರೂ. ಹೂಡಿದ್ದು ಅದನ್ನು ಆತ ಹಿಂದಿರುಗಿಸದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisements
Posted in: Local News