ಡೆಕ್ಕನ್ಗೆ ಮಾರಕವಾದ ಮಾರ್ಶ್

Posted on May 11, 2011

0


ಹೈದರಾಬಾದ್: ಮಿಶೆಲ್ ಮಾರ್ಶ್ ಹಾಗೂ ಯುವರಾಜ್ ಸಿಂಗ್ ಪ್ರದರ್ಶಿಸಿದ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಪುಣೆ ವಾರಿಯರ‍್ಸ್ ಎದುರಾಳಿ ಡೆಕ್ಕನ್ ಚಾರ್ಜರ‍್ಸ್ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಪುಣೆ ಸತತ ಎರಡನೇ ಗೆಲುವು ಕಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಡೆಕ್ಕನ್ ನಿಗದಿತ ೨೦ ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ೧೩೬ ರನ್ ಪೇರಿಸಿತು. ಗುರಿ ಬೆನ್ನತ್ತಿದ್ದ ಪುಣೆ ೧೮.೨ ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ೧೩೭ ರನ್ ದಾಖಲಿಸಿ ಗೆಲುವಿನ ನಗೆ ಬೀರಿತು. ಆರಂಭಿಕರಾದ ಜೆಸ್ಸಿ ರೈಡರ್ ಹಾಗೂ ಮನೀಶ್ ಪಾಂಡೆ ಮೊದಲ ವಿಕೆಟ್‌ಗೆ ೫೫ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ರೈಡರ್ ಐದು ಬೌಂಡರಿ ಹಾಗೂ ಎರಡು ಸಿಕ್ಸ್ ನೆರವಿನಿಂದ ೩೫ ರನ್ ದಾಖಲಿಸಿದರು. ಆದರೆ ಪಾಂಡೆ ನಂತರ ಆಗಮಿಸಿದ ಗಂಗೂಲಿ ಜೊತೆ ಕೂಡ ೩೮ ರನ್‌ಗಳನ್ನು ಕಲೆಹಾಕಿದರು. ಪಾಂಡೆ (೪೯) ಕೇವಲ ಒಂದು ರನ್‌ನಿಂದ ಅರ್ಧಶತಕ ತಪ್ಪಿಸಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಉತ್ತಪ್ಪ (೧) ಹಾಗೂ ಯುವರಾಜ್ (೨) ವಿಫಲಗೊಂಡರೂ ಗಂಗೂಲಿ ಅಜೇಯ ೩೨ ರನ್ ದಾಖಲಿಸಿ ತಂಡಕ್ಕೆ ಬೆನ್ನೆಲುಬಾಗಿ ನಿಂತು ಜಯ ದಕ್ಕಿಸಿಕೊಟ್ಟರು. ಕ್ರಿಸ್ತಿಯಾನ್ ಎರಡು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಡೆಕ್ಕನ್‌ಗೆ ಧವನ್ ಹಾಗೂ ರವಿತೇಜಾ (೩೦) ೫೧ ರನ್‌ಗಳ ಉತ್ತಮ ಆರಂಭ ನೀಡಿದ್ದರೂ ನಂತರದ ಬ್ಯಾಟ್ಸ್‌ಮೆನ್‌ಗಳು ವೈಫಲ್ಯ ಕಂಡರು. ಧವನ್ ಎರಡು ಸಿಕ್ಸ್ ಹಾಗೂ ಒಂದು ಬೌಂಡರಿಗಳ ನೆರವಿನಿಂದ ವೇಗದ ೨೪ ರನ್ ಸಿಡಿಸಿದರು.

ಆದರೆ ನಾಯಕ ಸಂಗಕ್ಕರ (೧೨) ಹಾಗೂ ಕ್ರಿಸ್ತಿಯಾನ್ (೧೦) ವಿಫಲಗೊಂಡರು. ಆದರೆ ಡ್ಯುಮಿನಿ ೩೦ ರನ್ ದಾಖಲಿಸಿ ತಂಡಕ್ಕೆ ಆಧಾರವಾಗಿ ನಿಂತರು. ಚಿಪ್ಲಿ (೧೮) ಕೂಡ ಕೆಲ ಹೊತ್ತು ಕ್ರೀಸ್‌ನಲ್ಲಿದ್ದರು. ಮಾರ್ಶ್ ನಾಲ್ಕು ವಿಕೆಟ್ ಯುವರಾಜ್ ಎರಡು ವಿಕೆಟ್ ಪಡೆದರು.

Posted in: Special Report