ಬಸ್ನಲ್ಲಿ ಮಹಿಳೆಯ ಚಿನ್ನ, ನಗದು ಕಳವು

Posted on May 10, 2011

0


ಮಂಗಳೂರು: ನಗರದ ಮಹಿಳೆಯೊಬ್ಬರು ಬಸ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಆಕೆಯ ಬ್ಯಾಗ್‌ನಲ್ಲಿದ್ದ ಚಿನ್ನ ಹಾಗೂ ನಗದು ಕಳವುಗೈದ ಘಟನೆ ನಿನ್ನೆ ನಡೆದಿದೆ.

ಕುಲಶೇಖರ ನಿವಾಸಿ ಸುನಿತಾ ಶೆಟ್ಟಿ ಅವರ ಬ್ಯಾಗ್‌ನಿಂದ ಎರಡು ಪವನ್ ತೂಕದ ನೆಕ್ಲೆಸ್ ಹಾಗೂ ಎಂಟು ಸಾವಿರ ನಗದು ಹಣ ಕಳವುಗೈಯಲಾಗಿದೆ. ಬಿಕರ್ನಕಟ್ಟೆಯಲ್ಲಿ ಬಸ್ ಹತ್ತಿದ್ದ ಅವರು ಮಿಲಾಗ್ರಿಸ್ ಬಳಿ ಇಳಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಲಕನಿಗೆ ಕಾರು ಡಿಕ್ಕಿ

ಮಂಗಳೂರು: ಧರ್ಮಸ್ಥಳ ಅತಿಥಿಗೃಹದ ಬಳಿ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಿನ್ನೆ ನಡೆದಿದೆ. ಮೈಸೂರಿನ ಹೊನ್ನಯ್ಯ ಅವರ ಪುತ್ರ ಭಾರ್ಗವ್(೯) ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಸ್ಪಿರಿಟ್ ಸಾಗಿಸುತ್ತಿದ್ದ ಆರೋಪಿ ಖುಲಾಸೆ

ಮಂಗಳೂರು: ಕಾನೂನು ಬಾಹಿರವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ವೇಳೆ ಪೊಲೀಸರಿಂದ ಬಂಧನಕ್ಕೊಳಗಾಗಿ ಶಿಕ್ಷೆ ಅನುಭವಿಸುತ್ತಿದ್ದ ಕಾರವಾರ ನಿವಾಸಿ ಮನೋಜ್ ಗೋಕುಲ್‌ದಾಸ್ ಎಂಬಾತನನ್ನು ಉಡುಪಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ವಿಜಯ ಹಾಗೂ ನೌಶಾದ್ ಎಂಬವರು ಉಚ್ಚಿಲ-ಬಡಾ ಗ್ರಾಮದಲ್ಲಿ ಸ್ಪಿರಿಟ್ ಹೊಂದಿದ್ದ ವೇಳೆ ಅಬಕಾರಿ ಜಾರಿ ಹಾಗೂ ಲಾಟರಿ ನಿಷೇಧ ದಳದ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಈ ವೇಳೆ ಆರೋಪಿ ಮನೋಜ್ ಹೆಸರನ್ನು ಹೇಳಿದ್ದರು. ಆದರೆ ಮನೋಜ್‌ನಿಂದ ಸ್ಪಿರಿಟ್ ದೊರೆಯದ ಕಾರಣ ಆತನನ್ನು ಖುಲಾಸೆಗೊಳಿಸಲಾಗಿದೆ.

Advertisements
Posted in: Local News