ಪರೋಕ್ಷ ಸಮ್ಮತಿಯೋ…? ಕೊನೆಯ ಪುಟದಿಂದ

Posted on May 10, 2011

0


ಈ ಸ್ಥಾವರ ಮತ್ತು ಅದು ಹೊರ ಚೆಲ್ಲುವ ಬೂದಿ, ಹೊಗೆ, ಕಡಲ ಮಾಲಿನ್ಯ ಜನಜೀವನ ಕಂಗೆಟ್ಟಿರುವ ಬಗ್ಗೆ ವಿರೋಧಿಸುತ್ತಿರುವುದರ ಬಗ್ಗೆ ಹೆಚ್ಚಿನ ವಿವರಣೆ ಇಲ್ಲಿ ಮತ್ತೊಮ್ಮೆ ಅಪ್ರಸ್ತುತವೆನಿಸುತ್ತದೆ.

ಯಾವಾಗ ಅತಿರುದ್ರಯಾಗದ ಪೂರ್ಣಾಹುತಿ ನೀಡಲೆಂದು ಮುಖ್ಯ ಮಂತ್ರಿ ಆಗಮಿಸಲಿರುವರೆಂಬ ಸುದ್ದಿ ಹೊರಬಿತ್ತೋ ಅಂದಿನಿಂದಲೇ ಈ ಭಾಗದ ಸಂತ್ರಸ್ತರು, ವಿರೋಧಿ ಸಮಿತಿಯ ಮುಖಂಡರೆಲ್ಲಾ ಆ ಘಳಿಗೆಗಾಗಿ ಕಾದಿದ್ದೇ ಕಾದಿದ್ದು. ಮುಖ್ಯಮಂತ್ರಿ, ರೈತನ ಮಗನೆಂದು ಕರೆಸಿಕೊಳ್ಳುವ ಯಡ್ಯೂರಪ್ಪರ ಮುಂದೆ ನಿಂತು, ಸಮಸ್ಯೆಯೆನ್ನೆಲ್ಲಾ ನಿವೇದಿಸಿ ವಿಷಯದ ಮನವರಿಕೆ ಮಾಡಿ ಸಂಕಷ್ಟದಿಂದ ಪಾರಾಗುವ ಬಗ್ಗೆ ವಿಶ್ವಾಸವನ್ನು ಹೊಂದಿದ್ದರು. ಆದರೆ ಆಗಿದ್ದೇನು? ನಿಗದಿತ ಸಮಯಕ್ಕೇ ಮುಖ್ಯಮಂತ್ರಿಗಳು ಬಂದರು. ಕುತ್ಯಾರಿನ ಅತಿರುದ್ರಯಾಗಕುಂಡದ ಮುಂದೆ ತನ್ನ ಮಂದಿ ಮಾಗಧರೊಂದಿಗೆ ನಿಂತರು… ಲೋಕೋದ್ಧಾರದ ಹೆಸರಿನಲ್ಲಿ ನಡೆದ ಯಾಗದ ಕುಂಡಕ್ಕೆ ಪೂರ್ಣಾಹುತಿ ನೀಡಿ ಕೃತಾರ್ಥರಾದರು! ಪ್ರಾರ್ಥನೆ ನೆರವೇರಿಸಿದರು.

ಆದರೆ ಆ ಯಾಗ ಕುಂಡದ ಅನತಿ ದೂರದಲ್ಲಿದ್ದ, ಎಲ್ಲೂರಿನ ಯುಪಿಸಿ ಎಲ್‌ನ ಚಿಮಿಣಿ ಹೊರ ಸೂಸುತ್ತಿದ್ದ ಸಲ್ಪರ್ ಡೈ ಆಕ್ಸೈಡ್‌ನ ಬಿಳಿ ಹೊಗೆಯ ಮಬ್ಬಿನಲ್ಲಿ ನಿಂತಿದ್ದ ಸಂತ್ರಸ್ತ ಮಂದಿ ಮುಖ್ಯಮಂತ್ರಿಯವರ ದಿವ್ಯ ದೃಷ್ಟಿಗೆ ಗೋಚರವಾಗಲೇ ಇಲ್ಲ. ಏಕೆಂದರೆ ಮುಖ್ಯಮಂತ್ರಿ ಯಡ್ಯೂರಪ್ಪರವರೇ ಬಿಜೆಪಿ ಯುಪಿಸಿಎಲ್ ಪ್ರಾಯೋಜಿತ ಅತಿರುದ್ರಯಾಗದ ಗಂಧಚಂದನ ಬೆಣ್ಣೆ ತುಪ್ಪಗಳ ಸುಮಧುರ, ಸುವಾಸಿತ ಹೊಗೆಯ ನಡುವೆ ಕಣ್ಣಿದ್ದೂ ಕುರುಡರಾಗಿ ಹೋಗಿದ್ದರು! ಒಂದರ್ಥದಲ್ಲಿ ಪೂರ್ಣಾಹುತಿಯ ಹೆಸರಿನಲ್ಲಿ ಯುಪಿಸಿಎಲ್‌ಗೆ ಪರೋಕ್ಷ ಸಮ್ಮತಿಯನ್ನು ವ್ಯಕ್ತಪಡಿಸಿದಂತೆ ನಡೆದುಕೊಂಡರೆನ್ನಬಹುದೇ?

Advertisements
Posted in: Special Report