ಕರಾಚಿಯಿಂದ ದಾವೂದ್ ಪರಾರಿ

Posted on May 7, 2011

0


ನವದೆಹಲಿ: ಪಾಕಿಸ್ತಾನದ ಅಡಗು ತಾಣದಲ್ಲಿ ಒಸಾಮಾ ಬಿನ್ ಲಾಡೆನ್‌ನ್ನು ಅಮೆರಿಕಾ ಸೇನೆ ಹತ್ಯೆಗೈದಿರುವುದರಿಂದ ವಿಚಲಿತನಾಗಿರುವ ಭಾರತದ ಮೋಸ್ಟ್ ವಾಟೆಂಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಕರಾಚಿಯಿಂದ ಓಡಿ ಹೋಗಿದ್ದಾನೆಂದು ತಿಳಿದುಬಂದಿದೆ.

ಮೇ ಒಂದರಂದು ರಾತ್ರಿ ಅಮೆರಿಕಾ ಸೇನೆ ಲಾಡೆನ್‌ನನ್ನು ಹತ್ಯೆಗೈದ ಬಳಿಕ ಭೀತಿ ಗೊಳಗಾಗಿರುವ ದಾವೂದ್ ಹಾಗೂ ನಿಕಟವರ್ತಿ ಛೋಟಾ ಶಕೀಲ್ ಐಎಸ್‌ಐ ನಿರ್ದೇಶನದ ಮೇರೆಗೆ ಕರಾಚಿಯಿಂದ ಪರಾರಿಯಾಗಿ ಸೌದಿ ಅರೇಬಿಯಾಕ್ಕೆ ಹೋಗಿದ್ದಾನೆಂದು ವರದಿಯೊಂದು ಹೇಳಿದೆ.

ದಾವೂದ್ ಮತ್ತು ಶಕೀಲ್ ಕರಾಚಿ ತೊರೆದಿದ್ದರೂ ಕೂಡ ದಾವೂದ್ ಕುಟುಂಬ ಮಾತ್ರ ಇನ್ನೂ ಕರಾಚಿಯಲ್ಲಿಯೇ ಇದೆ ಎಂದು ಭಾರತದ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿದೆ. ೧೯೯೩ರ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಯಾಗಿರುವ ದಾವೂದ್‌ನನ್ನು ಹಸ್ತಾಂತರಿಸುವಂತೆ ಭಾರತ ಹಲವಾರು ಬಾರಿ ಮನವಿ ಮಾಡಿಕೊಂಡಿತ್ತು. ಆದರೆ ಪಾಕಿಸ್ತಾನ ಮಾತ್ರ ನಿರಾಕರಿಸುತ್ತಲೇ ಬಂದಿತ್ತು. ಈಗ ಲಾಡೆನ್ ಪಾಕ್‌ನಲ್ಲಿ ಹತ್ಯೆಯಾದ ಬಳಿಕ ದಾವೂದ್ ಕೂಡ ಪಾಕಿನಲ್ಲೇ ಇರುವುದು ಸ್ಪಷ್ಟವಾಗಿದೆ. ಮುಂಬೈ ಬಾಂಬ್ ದಾಳಿಗೆ ಕೂಡ ದಾವೂದ್ ಬೆಂಬಲವಿತ್ತೆನ್ನುವ ವರದಿ ಕೂಡ ಇತ್ತು. ಇಂಟರ್‌ಪೋಲ್‌ನ ಮೋಸ್ಟ್ ವಾಟೆಂಡ್ ಪಟ್ಟಿಯಲ್ಲಿ ದಾವೂದ್ ಹೆಸರಿದ್ದು, ಆತ ಕರಾಚಿ ಮನೆ ತೊರೆದು ರಹಸ್ಯ ಸ್ಥಳಕ್ಕೆ ತೆರಳುವಂತೆ ಐಎಸ್‌ಐ ಸೂಚಿಸಿದೆಯಂತೆ. ಅಷ್ಟೇ ಅಲ್ಲದೆ ಮೊಬೈಲ್ ಬಳಸದಂತೆ ತಾಕೀತು ಮಾಡಿದೆ ಎಂದು ವರದಿ ಹೇಳಿದೆ.

Posted in: National News