ಕಲ್ಲಬೆಟ್ಟಿನಲ್ಲಿ ತಾಯಿ-ಮಗನ ಜಾಗದ ವಿವಾದ

Posted on May 7, 2011

0


ಮೂಡುಬಿದಿರೆ: ತಾಯಿ-ಮಗನ ನಡುವೆ ಜಾಗದ ವಿವಾದವು ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ನ್ಯಾಯಾಲಯದ ಮತ್ತು ಮೂಡುಬಿದ್ರೆ ಪುರಸಭೆಯ ಆದೇಶವನ್ನು ಧಿಕ್ಕರಿಸಿ ಪುರಸಭಾ ಸದಸ್ಯೆಯೋರ್ವರ ಕುಮ್ಮಕ್ಕಿನಲ್ಲಿ ಬಲಾತ್ಕಾರದಿಂದ ಕಟ್ಟಡ ನಿರ್ಮಿಸುತ್ತಿರುವ ಮಗನ ಬಗ್ಗೆ ತಾಯಿ ಮೂಡುಬಿದ್ರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ವಿವಾದ ನಡೆಯುತ್ತಿರುವ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಗ್ರಾಮದಲ್ಲಿ ರಾಧಾ ಎಂಬವರು ತನ್ನ ಮಗ ಕೃಷ್ಣ ಸೇರಿಗಾರನ ವಿರುದ್ಧ ಮೂಡುಬಿದ್ರೆ ಠಾಣೆಗೆ ದೂರು ನೀಡಿದ್ದಾರೆ. ಕಲ್ಲಬೆಟ್ಟು ಗ್ರಾಮದ ನೀರಲ್ಲಕೆ ಎಂಬಲ್ಲಿ ರಾಧಾರವರು ವಾಸಿಸುತ್ತಿದ್ದು ಅವರಿಗೆ ಒಂದಿಷ್ಟು ಕೃಷಿ ಜಮೀನು ಇದೆ. ಈ ಪೈಕಿ ಕೃಷ್ಣ ಸೇರಿಗಾರ ಜಾಗದ ವಿವಾದಕ್ಕೆ ಸಂಬಂಧಿಸಿ ರಾಧಾರವರ ವಿರುದ್ಧ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದ್ದರು. ಈ ದಾವೆಯನ್ನು ತನಿಖೆ ನಡೆಸಿದ ನ್ಯಾಯಾಧೀಶರು ಕೃಷ್ಣ ಸೇರಿಗಾರರಿಗೆ ಈ ಜಮೀನಿನಲ್ಲಿ ಯಾವುದೇ ಹಕ್ಕು ಇರುವುದಿಲ್ಲವೆಂದು ತೀರ್ಪು ನೀಡಿದ್ದರು. ಇದೀಗ ಕೃಷ್ಣ ಸೇರಿಗಾರ ಮತ್ತೊಮ್ಮೆ ಅದೇ ದಾವೆಯನ್ನು ನ್ಯಾಯಾಲಯದಲ್ಲಿ ದಾಖಲು ಮಾಡಿದ್ದು, ಅದು ಇನ್ನಷ್ಟೇ ತನಿಖೆಗೆ ಬರಬೇಕಾಗಿದೆ.

ವ್ಯಾಜ್ಯವು ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಪುರಸಭೆಯಿಂದ ಯಾವುದೇ ಪರವಾನಿಗೆ ಪಡೆಯದೆ ತನ್ನ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾನೆಂದು ರಾಧಾರವರು ದೂರಿದ್ದಾರೆ. ಈ ಬಗ್ಗೆ ಮೂಡಬಿದ್ರೆ ಪುರಸಭಾಧಿಕಾರಿಗಳಿಗೂ ದೂರು ನೀಡಿದ್ದು ಪುರಸಭಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೃಷ್ಣ ಶೇರಿಗಾರರಿಗೆ ಕಟ್ಟಡ ನಿರ್ಮಾಣ ಮಾಡಬಾರದೆಂದು ಆದೇಶಿಸಿದ್ದಾರೆ.
[catergory cri]

Advertisements
Posted in: Special Report