ಕಿಡ್ನಿ ದಂಧೆ: ಆರೋಪಿ ಮನೆಯಲ್ಲಿ ಮಾರಾಮಾರಿ

Posted on April 16, 2011

0


ಮಂಗಳೂರು: ಕಿಡ್ನಿಯನ್ನು ಒದಗಿಸಿ ಕೊಡುವುದಾಗಿ ಹೇಳಿ ರೋಗಿಯೊಬ್ಬರ ಕುಟುಂಬಿಕರಿಗೆ ವಂಚಿಸಿದ್ದನ್ನು ಪ್ರಶ್ನಿಸಲು ಹೋದ ವರ ಮೇಲೆ ಆರೋಪಿ ಹಾಗೂ ಆತನ ಚೇಲಾಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಮೂಡಬಿದರೆ ಸಮೀಪದ ದುಗ್ಗೋಡಿಯ ಉಸ್ಮಾನ್ ಎಂಬಾತನೇ ಕಿಡ್ನಿ ದಂಧೆಯ ಕೇಂದ್ರ ಬಿಂದುವಾ ಗಿದ್ದಾನೆ. ಈತನಿಗೆ ಏರೋಇಂಡಿಯಾ ಎಂಬ ಬಸ್ಸುಗಳಿದ್ದು ಆರು ವರ್ಷದ ಹಿಂದೆ ಈತನ ಕಿಡ್ನಿ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ಈತ ಚೆನ್ನೈಗೆ ಹೋಗಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಿಸಿಕೊಂಡು ಬಂದಿದ್ದ. ಇದರಿಂದಾಗಿ ಕಿಡ್ನಿಯನ್ನು ರೋಗಿಗಳಿಗೆ ಮಾರುವ ದಂಧೆಯನ್ನು ಕಣ್ಣಾರೆ ನೋಡಿದ್ದ. ಕಿಡ್ನಿಯನ್ನು ಯಾರಾದರೂ ದಾನ ಮಾಡುವುದಿದ್ದರೆ ಕೋರ್ಟ್ ಮುಖಾಂತರ ಅನುಮತಿ ತರಬೇಕಾಗುತ್ತದೆ. ಆದರೆ ಈ ಎಲ್ಲಾ ನಿಯಮಾವಳಿಯನ್ನು ಸರಳ ಗೊಳಿಸುವುದಾಗಿ ಹೇಳಿ ಉಸ್ಮಾನ್ ಹಲವರಿಗೆ ವಂಚನೆ ಮಾಡಿದ್ದ ಎನ್ನಲಾ ಗಿದೆ.

ಕಿಡ್ನಿ ಹೋದ ರೋಗಿಗಳು ಈತ ನನ್ನು ಸಂಪರ್ಕಿಸಿದರೆ ಅವರಿಂದ ಲಕ್ಷಾಂ ತರ ರುಪಾಯಿ ಪಡೆದು ಕಿಡ್ನಿಯನ್ನು ತಮಿಳುನಾಡಿನಿಂದಲೋ ಅಥವಾ ಇನ್ನೆಲ್ಲಿಂದಲೋ ಸೆಟ್ ಮಾಡುತ್ತಿದ್ದ ಎನ್ನಲಾಗಿದೆ. ನಾಲ್ಕು ವರ್ಷದ ಹಿಂದೆ ಬಜಪೆಯ ಕುಟುಂಬವೊಂದರ ಹುಡುಗನಿಗೆ ಕಿಡ್ನಿ ನಿಷ್ಕ್ರಿಯವಾಗಿತ್ತು. ಉಸ್ಮಾನನ ವಿಳಾಸವನ್ನು ಯಾರಿಂ ದಲೋ ಪಡೆದ ಈ ಕುಟುಂಬ ತಮ್ಮ ಕುಟುಂಬದ ಹುಡುಗನಿಗೆ ಹೇಗಾ ದರೂ ಮಾಡಿ ಕಿಡ್ನಿ ಕೊಡುವಂತೆ ವಿನಂತಿಸಿಕೊಂಡಿತ್ತು.

ಉಸ್ಮಾನ್ ಈ ಕುಟುಂಬದಿಂದ ನಾಲ್ಕುವರೆ ಲಕ್ಷ ಪಡೆದು ಕಿಡ್ನಿಯನ್ನು ಕೊಡುತ್ತೇನೆ ಎಂದು ಆಶ್ವಾಸನೆ ನೀಡಿದ್ದ. ಆದರೆ ಸಮಯಕ್ಕೆ ಸರಿಯಾಗಿ ಕಿಡ್ನಿ ಸಿಗಲಿಲ್ಲ. ಕೊನೆಗೆ ಹುಡುಗನ ಕಡೆಯವರು ಬೇರೆ ಮೂಲದಿಂದ ಕಿಡ್ನಿಯ ವ್ಯವಸ್ಥೆ ಮಾಡಿದರು.

ಕೊನೆಯ ತನಕವೂ ಕಿಡ್ನಿಯ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದ ಉಸ್ಮಾನ್ ಹಣವನ್ನೂ ಹಿಂತಿರುಗಿಸದೆ ತಲೆ ತಪ್ಪಿಸಿಕೊಂಡು ಓಡಾಡತೊಡಗಿದ.

ಹಲವು ಬಾರಿ ಈ ಸಂಬಂಧ ಮಾತುಕತೆ ನಡೆದರೂ ಉಸ್ಮಾನ್ ಇಂದು ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ನಿನ್ನೆ ಬಜಪೆಯ ಮಂದಿ ನೇರ ಉಸ್ಮಾನ್ ಮನೆಗೆ ಬಂದು ಮಾತುಕತೆಗೆ ಕೂತರು. ಇದೇ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆಯಿತು. ಬಜಪೆಯ ಕಡೆಯವರಿಗೆ ಉಸ್ಮಾನ್ ಹಾಗೂ ಆತನ ಮಗ ತದುಕಿ ಕಳಿಸಿದರು. ಬಂದವರು ತಮ್ಮ ಸ್ಕಾರ್ಪಿಯೋ ಗಾಡಿ ಹತ್ತಿ ಅರ್ಧ ಕಿಲೋ ಮೀಟರ್ ಹೋಗಿಲ್ಲ. ಅಷ್ಟರಲ್ಲಾಗಲೇ ಉಸ್ಮಾನ್ ಮತ್ತೆ ಜನ ತರಿಸಿಕೊಂಡು ವಾಹನಕ್ಕೆ ಅಡ್ಡ ಹಾಕಿ ಹಲ್ಲೆ ಮಾಡಿದರು.

ಹಣ ಕೊಟ್ಟವರಿಗೆ ವಿಷಯ ಗೊತ್ತಿಲ್ಲದೆ ಸ್ಥಳೀಯರೂ ಹಲ್ಲೆ ಮಾಡಿದ್ದಾರೆ. ಈ ನಡುವೆ ೫೦ಕ್ಕೂ ಹೆಚ್ಚು ಹಲ್ಲೆಕೋರರಿಂದ ಪೆಟ್ಟು ತಿಂದು ಹೈರಾಣವಾಗಿದ್ದ ಬಜಪೆಯ ಕಡೆಯವರಲ್ಲೊಬ್ಬನಿಗೆ ಸ್ಥಳೀಯ ವ್ಯಕ್ತಿಯ ಪರಿಚಯವಿತ್ತು. ಆತ ಮನವಿ ಮಾಡಿಕೊಂಡ ಪರಿಣಾಮವಾಗಿ ಬಜಪೆಯ ಕಡೆಯವರೂ ಹಾಗೂ, ಹೀಗೂ ಊರು ದಾಟಿದರು. ಹಲ್ಲೆಯ ಸಮಯದಲ್ಲಿ ಸ್ಕಾರ್ಪಿಯೋ ವಾಹನ ಕೂಡಾ ಹಾನಿಗೊಳಗಾಯಿತು.ಹಲ್ಲೆಗೊಳಗಾದವರು ಕಾಂಗ್ರೆಸ್ ಮುಖಂಡ ಮೊಯ್ದಿನ್‌ರ ಹತ್ತಿರದ ಸಂಬಂಧಿಕರು. ಹೀಗಾಗಿ ವಿಷಯ ಗಂಭೀರವಾಯಿತು. ಪೊಲೀಸ್ ಠಾಣೆ ಹತ್ತುವ ಬದಲು ಪಂಚಾಯತಿ ಕಟ್ಟೆ ಹತ್ತಿತು. ಸದ್ಯ ಉಸ್ಮಾನ್ ನಾಲ್ಕುವರೆ ಲಕ್ಷ ಪ್ಲಸ್ ವಾಹನದ ಹಾನಿ ವೆಚ್ಚ ಎಂದೆಲ್ಲಾ ೫೦ಸಾವಿರವನ್ನು ಹೆಚ್ಚುವರಿಯಾಗಿ ಕೊಡಲು ಒಪ್ಪಿದ್ದಾನೆ ಎನ್ನುವ ಸುದ್ದಿ ಇದೆ. ಸ್ಥಳೀಯ ಮಸೀದಿಯ ಅಧ್ಯಕ್ಷನೂ ಆಗಿರುವ ಉಸ್ಮಾನ್ ಸೋದರ ಈ ಹಿಂದೆ ದರೋಡೆ ಪ್ರಕರಣದಲ್ಲಿದ್ದ ಎನ್ನಲಾಗಿದೆ.

Posted in: Crime News