ಗೆಲುವಿನಬ್ಬರದಲ್ಲಿ ಕೊಚ್ಚಿದ ಮುಂಬೈ

Posted on April 16, 2011

0


ಮುಂಬಯಿ: ಐಪಿಎಲ್‌ನಲ್ಲಿ ಮೊದಲ ಶತಕ ಸಿಡಿಸಿದ ಸಚಿನ್ ತೆಂಡುಲ್ಕರ್ ಅಮೋಘ ಆಟದ ನಡುವೆಯೂ ಕೊಚ್ಚಿ ಟಸ್ಕರ‍್ಸ್ ತಂಡದ ಆರಂಭಿಕರು ಪ್ರದರ್ಶಿಸಿದ ಸ್ಫೋಟಕ ಬ್ಯಾಟಿಂಗ್ ಎದುರು ಮುಂಬೈ ಇಂಡಿಯನ್ಸ್ ಕೊಚ್ಚಿ ಹೋಯಿತು.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಮುಂಬೈ ಉತ್ತಮ ಪ್ರದರ್ಶನ ನೀಡಿ ನಿಗದಿತ ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ ೧೮೨ ರನ್ ದಾಖಲಿಸಿತು. ಭರ್ಜರಿ ಬ್ಯಾಟಿಂಗ್ ನಡೆಸಿದ ಸಚಿನ್ (೧೦೦) ಐಪಿಎಲ್‌ನಲ್ಲಿ ತನ್ನ ಪ್ರಥಮ ಶತಕ ಸಿಡಿಸಿದರು.

ಗುರಿ ಬೆನ್ನತ್ತಿದ್ದ ಕೊಚ್ಚಿ ೧೯ ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ೧೮೪ ರನ್ ಗಳಿಸಿ ಅನಿರೀಕ್ಷಿತ ಜಯ ದಾಖಲಿಸಿತು. ಆರಂಭಿಕನಾಗಿ ಭಡ್ತಿ ಪಡೆದುಕೊಂಡು ಆಡಿದ ಜಯವರ್ಧನೆ ಹಾಗೂ ಮೆಕ್‌ಕಲಮ್ ಭರ್ಜರಿ ಆಟ ಪ್ರದರ್ಶಿಸಿದರು. ತಂಡಕ್ಕೆ ಜಯ ತಂದುಕೊಡ ಲೆಂದೇ ಬಂದಂತೆ ಆಡಿದ ಆರಂಭಿಕರು ಸಚಿನ್ ಪಡೆಯ ಬೌಲಿಂಗ್ ಲೆಕ್ಕಾಚಾರಕ್ಕೆ ತಣ್ಣೀರೆರಚಿದರು. ಕೇವಲ ೧೩.೫ ಓವರ್‌ಗಳಲ್ಲಿ ೧೨೮ ರನ್ ಕಲೆಹಾಕಿದಾಗ ತಂಡದ ಜಯ ಆಗಲೇ ನಿರ್ಧಾರವಾಗಿತ್ತು. ಈ ಸಂದರ್ಭ ಉತ್ತಮ ಇನ್ನಿಂಗ್ಸ್ ಕಟ್ಟಿದ್ದ ಜಯವರ್ಧನೆ (೫೬) ವಿಕೆಟ್ ಕಳೆದು ಕೊಂಡರು. ಆದರೆ ಮೆಕ್‌ಕಲಮ್ ಇನ್ನೊಂದು ಬದಿಯಲ್ಲಿ ರನ್ ಗಳಿಸುತ್ತಾ ಸಾಗಿದರು. ಜಡೇಜಾ ಜೊತ ೨೮ ರನ್ ಕಲೆ ಹಾಕಿ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಆದರೆ ಮಲಿಂಗಾ ಎಸೆತವನ್ನು ಸ್ಕೂಬ್ ಮಾಡುವ ಭರದಲ್ಲಿ ಮೆಕ್‌ಕಲಮ್ ವಿಕೆಟ್ ಕಳೆದುಕೊಂಡಾಗ ಪಂದ್ಯ ಮತ್ತೆ ಸಮಬಲ ತೋರಿತು. ಮೆಕ್‌ಕಲಮ್ (೮೧) ತನ್ನ ಇನ್ನಿಂಗ್ಸ್ ನಲ್ಲಿ ಹತ್ತು ಬೌಂಡರಿ ಹಾಗೂ ಎರಡು ಸಿಕ್ಸ್ ಸಿಡಿಸಿದ್ದರು. ಆದರೆ ಈ ವೇಳೆ ಆಗಮಿಸಿದ ಹಾಡ್ಜ್ (೧೧) ಮಲಿಂಗಾ ಓವರ್‌ನಲ್ಲಿ ಎರಡು ಬೌಂಡರಿ ದಾಖಲಿಸಿದಾಗ ಪಂದ್ಯ ಕೊಚ್ಚಿಯ ಕಡೆ ವಾಲಿತು. ಅಂತಿಮ ಹಂತದಲ್ಲಿ ಜಡೇಜಾ (೨೫) ಸತತ ಎರಡು ಸಿಕ್ಸ್ ಸಿಡಿಸಿ ಗೆಲುವಿನ ರನ್ ಬಾರಿ ಸಿದಾಗ ಕೊಚ್ಚಿ ತಂಡದ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಲಿಂಗಾ ಎರಡು ವಿಕೆಟ್ ಪಡೆದರು.

ಮೊದಲು ಬ್ಯಾಟಿಂಗ್ ನಡೆಸಿದ್ದ ಮುಂಬೈ ಸ್ಫೋಟಕ ಆಟಗಾರ ಡೇವಿ ಜೇಕಬ್ಸ್ (೧೨) ತನ್ನ ವಿಕೆಟ್ ಅನ್ನು ಅಗ್ಗಕ್ಕೆ ಒಪ್ಪಿಸಿದರು. ನಂತರ ನಡೆದದ್ದೇ ಸಚಿನ್-ರಾಯುಡು ಜುಗಲ್‌ಬಂಧಿ ಆಟ. ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಒತ್ತು ನೀಡಿದ ಜೋಡಿ ನಂತರ ರನ್ ಗತಿಯನ್ನು ಏರಿಸಲು ಆರಂಭಿಸಿತ್ತು. ಜಯವರ್ಧನೆ ಬಳಗದ ಬೌಲಿಂಗನ್ನು ಧ್ವಂಸ ಮಾಡಿದ ಜೋಡಿ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದರು. ಆದರೆ ರನ್ ಗಳಿಸುವ ಆತುರದಲ್ಲಿ ರಾಯುಡು ತನ್ನ ವಿಕೆಟ್ ಕಳೆದುಕೊಂಡರೂ ಆ ವೇಳೆಗೆ ಅದ್ಬುತ ಅರ್ಧಶತಕವನ್ನು ದಾಖಲಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸ್ ಹಾಗೂ ಮೂರು ಬೌಂಡರಿಗಳು ಸೇರಿತ್ತು. ಆದರೆ ಸಚಿನ್ ಇನ್ನಿಂಗ್ಸ್‌ನ ಕೊನೆಯ ಹಾಗೂ ತನ್ನ ೬೬ನೇ ಎಸೆತದಲ್ಲಿ ಶತಕವನ್ನು ಪೂರೈಸಿದರು.

Advertisements
Posted in: Sports News