ಕಟೀಲು ಆಡಳಿತ ವಾಸುದೇವ ಅಸ್ರಣ್ಣರಿಗೆ: ನ್ಯಾಯಾಲ ಯ ನಿರ್ದೇಶನ

Posted on April 16, 2011

0


ಮಂಗಳೂರು: ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತವನ್ನು ಈ ಹಿಂದೆ ಹಿರಿಯ ಅಸ್ರಣ್ಣರಾಗಿದ್ದ ಗೋಪಾಲಕೃಷ್ಣ ಅಸ್ರಣ್ಣರ ಬಳಿಕ ಇದೀಗ ವಾಸುದೇವ ಅಸ್ರಣ್ಣರಿಗೆ ಹಸ್ತಾಂತರಿಸುವಂತೆ ರಾಜ್ಯ ಹೈಕೋರ್ಟ್ ದೇಗುಲದ ಆಡಳಿತಾಧಿಕಾರಿ ರೋಹಿಣಿ ಸಿಂಧೂರಿಯವರಿಗೆ ನಿರ್ದೇಶನ ನೀಡಿದೆ.

ಹಿಂದೆ ದೇವಸ್ಥಾನದ ಹಿರಿಯ ಅಸ್ರಣ್ಣರಾಗಿದ್ದ ಗೋಪಾಲಕೃಷ್ಣ ಅಸ್ರಣ್ಣ ನಿಧನರಾದ ಬಳಿಕ ಅವರ ಮಗ ಲಕ್ಷ್ಮೀ ನಾರಾಯಣ ಅಸ್ರಣ್ಣರನ್ನು ದೇವಳದ ಅನುವಂಶಿಕ ಟ್ರಸ್ಟಿಯನ್ನಾಗಿ ಮಾಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಅವರ ಮೇಲೆ ಅವ್ಯವಹಾರದ ಆರೋಪ ಇದ್ದ ಕಾರಣ ಅವರನ್ನು ಹುದ್ದೆಯಿಂದ ತೆರವುಗೊಳಿಸಿ ನಂತರ ಅದೇ ಕುಟುಂಬದ ವಾಸುದೇವ ಅಸ್ರಣ್ಣಗೆ ಟ್ರಸ್ಟಿ ಸ್ಥಾನ ನೀಡುವಂತೆ ಇವರು ಕೆ.ಎ,ಟಿ ಮೊರೆ ಹೋಗಿದ್ದರು. ಕೆ.ಎ.ಟಿ. ಕೂಡಾ ಇದನ್ನು ಅನುಮೋದಿಸಿತ್ತು. ಇದೇ ಸಂದಭದಲ್ಲಿ ಇಲ್ಲಿ ಆಡಳಿತ ಮೊಕ್ತೇಸರರಾಗಿದ್ದ ಕೊಡೆತ್ತೂರು ಗುತ್ತು ದಯಾನಂದ ಶೆಟ್ಟಿ ಅವ್ಯಾವಹರಾದ ಆರೋಪ ಇದ್ದ ಕಾರಣ ಅವರನ್ನೂ ಹುದ್ದೆಯಿಂದ ತೆರವುಗೊಳಿಸಲಾಗಿತ್ತು.

ಈ ಕೆ.ಎ.ಟಿ.ಯ ತೀರ್ಪನ್ನು ಪ್ರಶ್ನಿಸಿ ಲಕ್ಷ್ಮೀ ನಾರಾಯಣ ಅಸ್ರಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು. ನಂತರ ೨೦೦೨ ರಲ್ಲಿ ಹೈಕೋರ್ಟ್ ಕೆಎಟಿ ತೀರ್ಪನ್ನು ಎತ್ತಿ ಹಿಡಿಯಿತು. ಮಾತ್ರವಲ್ಲದೆ ಮೂರು ತಿಂಗಳೊಳಗೆ ವಿವಾದವನ್ನು ಬಗೆ ಹರಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಆದರೆ ಜಿಲ್ಲಾಧಿಕಾರಿಗಳು ಈ ಬಗ್ಗೆ ಆಸಕ್ತಿ ತೋರದ ಹಿನ್ನಲೆಯಲ್ಲಿ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಮತ್ತೆ ವಾಸುದೇವ ಅಸ್ರಣ್ಣರು ಹೈಕೋರ್ಟ್ ಮೊರೆ ಹೋದ ಪರಿಣಾಮ ಎ.೧೨ ರಂದು ವಾಸುದೇವರನ್ನು ಅನುವಂಶಿಕ ಟ್ರಸ್ಟಿಯಾಗಿ ನೇಮಿಸುವಂತೆ ಆದೇಶ ನೀಡಿದೆ. ಆದರೆ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ರೋಹಿಣಿ ಸಿಂಧೂರಿಯವರು ಹೈಕೋರ್ಟ್ ಆದೇಶದ ಪ್ರತಿ ಕೈಗೆ ಸಿಗುವವರೆಗೆ ಅಧಿಕಾರ ಬಿಟ್ಟುಕೊಡಲಾಗದು ಎಂದು ತಿಳಿಸಿದ್ದಾರೆ. ಅಲ್ಲದೆ ಕೊಡೆತ್ತೂರು ಗುತ್ತುವಿನ ಆಡಳಿತ ಮೊಕ್ತೇಸರ ವಿವಾದ ಇನ್ನೂ ಬಗೆಹರಿಯದ ಕಾರಣ ಅದು ಇತ್ಯರ್ಥವಾಗುವವರೆಗೆ ಕೋರ್ಟ್ ಆದೇಶವನ್ನು ತಡೆ ಹಿಡಿಯಲಾಗುತ್ತದೆ ಎಂದು ಹೇಳಿದ್ದಾರೆ.

ಇದರಿಂದಾಗಿ ದೇವಳದ ಅರ್ಚಕ ವೃಂದ ಆಡಳಿತಾಧಿಕಾರಿಯ ಕ್ರಮದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದು, ಕೊಡೆತ್ತೂರು ಗುತ್ತು ಹಾಗೂ ಈ ವಿವಾದಕ್ಕೆ ಯಾವುದೇ ಸಂಬಂದವೇ ಇಲ್ಲ ಎಂದು ತಿಳಿಸಿದ್ದಾರೆ.

Advertisements