ಆಂಧ್ರದಲ್ಲಿ ಬಾಲ‘ಬಾಬಾ’ ಕಾರುಬಾರು!

Posted on April 16, 2011

0


ಮಂಗಳೂರು: ದೇವಮಾನವ ಎಂದೇ ಭಕ್ತರಿಂದ ಕರೆಸಿಕೊಂಡಿರುವ ಪುಟ್ಟಪರ್ತಿ ಸಾಯಿಬಾಬಾ ಅನಾರೋಗ್ಯ ಕಾರಣಗಳಿಂದ ಹಾಸಿಗೆ ಹಿಡಿದು ಸುದ್ದಿ ಮಾಡಿದ್ದರೆ, ಅತ್ತ ಆಂಧ್ರದೆಲ್ಲೆಡೆ ನಕಲಿ ಬಾಬಾಗಳದ್ದೇ ಕಾರುಬಾರು. ಬಾಬಾ ನಂತೆ ಗುಂಗುರು ಕೂದಲು ಬೆಳೆಸಿ ಕೊಂಡು ಅಲ್ಲಲ್ಲಿ ಡೇರೆಯನ್ನೋ, ಆಶ್ರ ಮವನ್ನೋ ಕಟ್ಟಿಕೊಂಡು ಸಮಾ ಜೋದ್ಧಾರಕರಂತೆ ಪೋಸ್ ಕೊಡುವ ಇವರ ಬಳಿ ಜನರು ಜಾತ್ರೋಪಾದಿಯಲ್ಲಿ ತೆರಳುತ್ತಾರೆ ಎನ್ನುತ್ತದೆ ಒಂದು ವರದಿ.

ಆಂಧ್ರಪ್ರದೇಶದ ಗ್ರಾಮೀಣ ಭಾಗವಾಗಿರುವ ಕರ್ನೂಲ್ ಹಾಗೂ ಮೇಧಕ್ ಎಂಬಲ್ಲಿ ಈ ಬಾಬಾಗಳು ನೆಲೆಸಿದ್ದು, ಇವರು ಸ್ವಯಂಘೋಷಿತ ದೇವಮಾನವ ರೆಂದು ತಮ್ಮನ್ನು ತಾವು ಕರೆಸಿಕೊಂಡಿದ್ದಾರೆ. ಕೂದಲು ಬಿಟ್ಟು ಥೇಟ್ ಬಾಬಾನಂತೆ ವೇಷ ಹಾಕಿ ಕೊಂಡಿರುವ ಇವರನ್ನು ಬಾಲಬಾಬಾ ಎಂದು ಕರೆಯುತ್ತಾರಂತೆ. ದೇವರ ಸ್ವರೂಪ ತಾವು, ಲೋಕ ಕಲ್ಯಾಣಾರ್ಥವಾಗಿ ಈ ವೇಷ ಧರಿಸಿದ್ದೇವೆ ಎನ್ನುವ ಬಾಬಾ ಸ್ವರೂಪಿಗಳು ಹಸಿವಾದಾಗ ಆಹಾರವನ್ನು ತಿನ್ನುವುದಿಲ್ಲ, ಬದಲಿಗೆ ನೀರು ಮತ್ತು ಜ್ಯೂಸ್ ಮಾತ್ರ ಇವರ ಆಹಾರ ಎನ್ನುತ್ತಾರೆ ಭಕ್ತರು.

ಮೇಧಕ್‌ನ ಸಾಕೋ ಚಾತ್ರಿಯಾ ಎಂಬವರ ಮಗ ಬಾಬಾನಂತೆ ವೇಷ ಧರಿಸಿ, ಆಶ್ರಮ ಕಟ್ಟಿದ್ದೂ ಅಲ್ಲದೆ ಅಲ್ಲಿ ಅನ್ನಾಹಾರ ತ್ಯಜಿಸಿ ಲೋಕ ಕಲ್ಯಾಣ ಕ್ಕಾಗಿ ಉಪವಾಸ ಕುಳಿತಿದ್ದಾನೆ. ಈತ ಪ್ರತಿನಿತ್ಯ ಊರಿನ ಜನರಿಗೆ ಆಶೀರ್ವಾದ ನೀಡುವುದೂ ಅಲ್ಲದೆ, ಅವರಿಗೆ ಭಕ್ತಿಯ ಬಗ್ಗೆ ಉಪನ್ಯಾಸವನ್ನು ನೀಡುತ್ತಿದ್ದಾನೆ ಎನ್ನಲಾಗುತ್ತಿದೆ. ಮೇಧಕ್‌ನ ಗೌತಂಪುರ ಎಂಬಲ್ಲಿ ನಿರ್ಮಾಣಗೊಂಡಿರುವ ಈತನ ಆಶ್ರಮದ ಮುಂದೆ ಪ್ರತಿನಿತ್ಯ ನೂರಾರು ಜನರು ಸೇರುತ್ತಾರೆ, ಬಾಬಾನಿಗೆ ಜಯವಾಗಲಿ ಎಂಬ ಉದ್ಘೋಷ ಮುಗಿಲು ಮುಟ್ಟುತ್ತದೆಯಂತೆ.

ಅಷ್ಟಕ್ಕೂ ಈತ ಬೇಕೆಂದೇ ಈ ವೇಷ ತೊಟ್ಟಿಲ್ಲ. ಈತ ಅಲೆಮಾರಿ ಕುರಿ ಸಾಕುವ ಕುಟುಂಬದಿಂದ ಬಂದವನು. ಚಿಕ್ಕಂದಿನಲ್ಲಿ ಮನೆಯಲ್ಲಿ ಕುರಿಯನ್ನು ಕಡಿದು ಹತ್ಯೆ ಮಾಡಿದ ಘಟನೆಯ ಬಳಿಕ ಮನೆಬಿಟ್ಟು ಹೋದವನು ಬಳಿಕ ಊರಿನಿಂದ ಹೊರಗಿನ ಸ್ಥಳದಲ್ಲಿ ಕಾವಿಧಾರಿಯಾಗಿ ಕಾಣಿಸಿಕೊಂಡ ಎಂದು ನೆನಪಿಸಿಕೊಳ್ಳುತ್ತಾರೆ ಜನರು. ಸದ್ಯ ಆಶ್ರಮದಲ್ಲಿ ಪ್ರೇತ ಉಚ್ಛಾಟನೆಯಿಂದ ಹಿಡಿದು ಮಂತ್ರಿಸಿದ ನಿಂಬೆಹಣ್ಣು ಕೊಡುವ ತನಕ ಪ್ರಖ್ಯಾತಿಯನ್ನು ಪಡೆದಿರುವ ಬಾಲಬಾಬಾ ತಾನು ದೇವರ ಸ್ವರೂಪ ಎಂದು ಜನರನ್ನು ಯಾಮಾರಿಸುತ್ತಿದ್ದಾನೆ ಎಂಬ ದೂರುಗಳೂ ಕೇಳಿ ಬರತೊಡಗಿವೆ.

ಈತನಂತೆಯೇ ಮೇಧಕ್‌ನಲ್ಲಿಯೂ ಯುವಕನೊಬ್ಬ ಕಾವಿ ಬಟ್ಟೆ ಧರಿಸಿ ಜನರಿಗೆ ಮಂಕುಬೂದಿ ಎರಚುತ್ತಿದ್ದಾನೆ ಎನ್ನಲಾಗುತ್ತಿದೆ. ಬಾಲಬಾಬಾ ಎಂದು ತನ್ನನ್ನು ತಾನು ಕರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ಆಶ್ರಮದಿಂದ ಹೊರಗೆ ಕಾವಿ ಬಟ್ಟೆಯುಟ್ಟು ಥೇಟ್ ಸಾಯಿಬಾಬಾ ಸೀರಿಯಲ್‌ನಲ್ಲಿ ಬರುವ ಹಾಗೆ ಕೋಲನ್ನು ಊರಿ ಬಂದರೆ ಜನರು ಪಾದಕ್ಕೆರಗಿ ಆಶೀರ್ವಾದ ಪಡೆಯುತ್ತಾರಂತೆ. ಮಂತ್ರಿಸಿದ ನಿಂಬೆಹಣ್ಣನ್ನು ಕೊಟ್ಟು ಎಂತಹ ರೋಗವನ್ನೂ ವಾಸಿ ಮಾಡುತ್ತಾನೆ ಎಂದು ಜನರು ನಂಬಿರುವ ಈ ಬಾಬಾನ ಬಗ್ಗೆಯೂ ಅನೇಕ ಕಥೆಗಳು ಚಾಲ್ತಿಯಲ್ಲಿವೆ.

ಸಮಾಜ ಎಷ್ಟೊಂದು ಮುಂದುವರಿದರೂ ಜನರು ಮಾತ್ರ ಮೂಢನಂಬಿಕೆಗಳಿಂದ ಇನ್ನೂ ಹೊರಬಂದಿಲ್ಲ ಎನ್ನುವುದಕ್ಕೆ ಇಂತಹ ನಕಲಿ ದೇವರ ಅವತಾರಗಳನ್ನು ಎತ್ತಿರುವ ಸ್ವಯಂಘೋಷಿತ ದೇವಮಾನವರ ಕಾಲಿಗೆ ಜನರು ಬಿದ್ದು ಕೃತಾರ್ಥರಾಗುತ್ತಿರುವ ಘಟನೆಗಳೇ ಸಾಕ್ಷಿ. ದೇವರನ್ನು ಪೂಜಿಸದ ಮಂದಿಯೂ ಕಾವಿಧಾರಿಗಳ, ವಾಮಾಚಾರಿಗಳ ಸಖ್ಯ ಬೆಳೆಸಿಕೊಂಡಿರುತ್ತಾರೆ. ಜನರಲ್ಲಿನ ಮೂಢತ್ವವನ್ನೇ ಬಂಡವಾಳ ಮಾಡಿಕೊಂಡು ಬಿಡುವ ನಕಲಿ ದೇವಮಾನವರು ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಜನರು ಎಚ್ಚೆತ್ತುಕೊಳ್ಳಬೇಕಾದ್ದು ಅತ್ಯಗತ್ಯ.

Advertisements