ಮಲ್ಲಿಕಾ ಕೊಲೆಗೆ ಸಂಚು: ೨ ಬಂಧನ

Posted on April 14, 2011

0


ಮುಂಬೈ: ಬಾಲಿವುಡ್ ಬೆಡಗಿ ಮಲ್ಲಿಕಾ ಶೆರಾವತ್ ಮೇಲೆ ಗುಂಡಿನ ದಾಳಿ ಮಾಡಲು ಸಂಚು ರೂಪಿಸಿದ್ದ ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ೧೩ ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಜೇಶ್ ದಲಾಲ್ (೩೫) ಹಾಗೂ ರಾಜೀವ್ (೨೮) ಎಂಬ ಬಂಧಿತ ಆರೋಪಿಗಳಿಂದ ೯ ಎಂಎಂ ಪಿಸ್ತೂಲ್ ಅನ್ನು ವಶ ಪಡಿಸಿ ಕೊಳ್ಳಲಾಗಿದೆ.

ಬಂಧಿತ ಆರೋಪಿ ದಲಾಲ್ ಪದವೀಧರನಾಗಿದ್ದು ಈತನ ತಂದೆ ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವನು ವಿವೇಕ್ ವಿಹಾರ ಪ್ರದೇಶದಲ್ಲಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಯಿತು. ಅಕ್ಟೋಬರ್ ೨೦೦೬ರಲ್ಲಿ ಮಲ್ಲಿಕಾ ಶೆರಾವತ್ ಅವರು ಜಾಟ್ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದಲಾಲ್ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದ ಎಂಬ ಅಂಶಗಳು ವಿಚಾರಣೆ ವೇಳೆ ಬಯಲಾಗಲಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನ ಬಾಂದ್ರಾ ಬಳಿಯ ಮಲ್ಲಿಕಾಳ ಫ್ಲಾಟ್‌ನಲ್ಲಿ ದಾಳಿ ಮಾಡಲು ಸಂಚು ರೂಪಿಸಿದ್ದ. ಆದರೆ ನವೆಂಬರ್ ೨೦೦೬ರಲ್ಲಿ ಮುಂಬೈ ಪೊಲೀಸರಿಗೆ ಕೊಲ್ಲಾಪುರದಲ್ಲಿ ಸಿಕ್ಕಿಬೀಳುವ ಮೂಲಕ ಈತನ ಪ್ಲಾನ್‌ಗಳೆಲ್ಲವೂ ಉಲ್ಟಾ ಆಗಿದ್ದವು. ಈತನ ಮೇಲಿದ್ದ ೧೩ ಅಪರಾಧ ಪ್ರಕರಣ ವಿಚಾರಣೆಗಾಗಿ ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಮೂರು ವರ್ಷ ತಿಹಾರ ಜೈಲೂಟ ತಿಂದ ದಲಾಲ್ ಬಳಿಕ ಪೆರೋಲ್ ಮೇಲೆ ಹೊರಬಂದು ಪೊಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡು ಅಲೆಯುತ್ತಿದ್ದ.ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಮಲ್ಲಿಕಾ ಶೆರಾವತ್ ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

Advertisements
Posted in: National News