ಪುತ್ತೂರಿನಲ್ಲಿ ಮುಂದುವರಿದ ಸುನ್ನಿ-ಸಲಫಿ ಆಧ್ಯ ಾತ್ಮಿಕ ಸಂಘರ್ಷ; ಗೊಂದಲದಲ್ಲಿ ಸಮುದಾಯ

Posted on April 14, 2011

0


ಪುತ್ತೂರು: ಪುತ್ತೂರಿನಲ್ಲಿ ಸುನ್ನಿ -ಸಲಫಿ ಗುಂಪುಗಳ ನಡುವೆ ಆಧ್ಯಾತ್ಮಿಕ ವಿಚಾರಕ್ಕೆ ಸಂಬಂಧಿಸಿದ ಸಂಘರ್ಷ ಮುಂದುವರಿದಿದ್ದು, ಇಲ್ಲಿ ಸಮಾವೇಶಗಳ ಭರಾಟೆ ವಿಜೃಂಭಿಸುತ್ತಿವೆ.

ಒಂದು ಕಡೆ ಸುನ್ನೀ ಸಮಾವೇಶ ನಡೆದರೆ ಮತ್ತೊಂದು ಕಡೆ ಅದಕ್ಕೆ ವಿರುದ್ದವಾಗಿ ಸಲಫಿ ಸಮಾವೇಶ ನಡೆಯುತ್ತಿದೆ. ಸಲಫಿಗಳ ವಾದಕ್ಕೆ ಸುನ್ನಿಗಳು ಉತ್ತರಿಸುವ ಮತ್ತು ಸುನ್ನಿಗಳ ವಾದವನ್ನು ಸಲಫಿಗಳು ಅಲ್ಲಗಳೆಯುವ ಪ್ರಕ್ರಿಯೆ ಪುತ್ತೂರಿನಲ್ಲಿ ಜೋರಾಗಿ ನಡೆಯಲಾರಂಭಿಸಿದೆ. ಇದರಿಂದಾಗಿ ಒಟ್ಟು ಮುಸ್ಲಿಂ ಸಮುದಾಯದಲ್ಲಿ ಗೊಂದಲ ಸೃಷಿಯಾಗುತ್ತಿದೆ.

ಪುತ್ತೂರಿನಲ್ಲಿ ಸುನ್ನೀ ಪಂಗಡಕ್ಕೆ ಸೇರಿದ ಮಂದಿಯೇ ಜಾಸ್ತಿ. ಆದ್ದರಿಂದ ಇಲ್ಲಿ ಸುನ್ನಿ ಸಮ್ಮೇಳನಗಳು ಹೆಚ್ಚು ವಿಜೃಂಭಿಸುತ್ತಿವೆ. ಸಲಫಿಗಳು ಅಲ್ಲಲ್ಲಿ ಸಮ್ಮೇಳನ ನಡೆಸುತ್ತಿದ್ದರೂ ಇಲ್ಲಿ ಸುನ್ನಿ ಗುಂಪಿನವರೇ ಅಧಿಕವಾಗಿರುವುದರಿಂದ ಹೆಚ್ಚಿನ ಮಹತ್ವ ಇಲ್ಲದಾಗಿದೆ. ಪುತ್ತ್ತೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಉರೂಸ್ ಸಮಾರಂಭವೊಂದರ ಕುರಿತು ಸಲಫಿಗಳು ಅವಹೇಳನಕಾರಿ ಹೇಳಿಕೆ ನೀಡಿ ಮತ್ತೆ ಸುನ್ನಿಗಳನ್ನು ಉದ್ರೇಕಿಸುವ ಯತ್ನ ನಡೆಸಿದ್ದರು ಎಂಬ ಸುದ್ದಿಯೂ ಪ್ರಚಲಿತದಲ್ಲಿದೆ. ಈ ಎರಡು ಗುಂಪುಗಳ ಕಚ್ಚಾಟದಿಂದಾಗಿ ಗೊಂದಲ ಹೆಚ್ಚಾ ಗುತ್ತಲೇ ಸಾಗಿದೆ.

ಕಳೆದ ಕೆಲ ಸಮಯದ ಹಿಂದೆ ಪುತ್ತೂರಿನ ಸಂಪ್ಯದಲ್ಲಿ ಬೃಹತ್ ಸುನ್ನೀ ಸಮ್ಮೇಳನ ನಡೆದಿತ್ತು. ಅದಾದ ಬೆನ್ನಲ್ಲೇ ಸಲಫಿಗಳು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಅದ್ದೂರಿ ಸಮಾವೇಶ ನಡೆಸಿದ್ದರು. ಇದೀಗ ಮತ್ತೆ ಸಮಾವೇಶದ ಭರಾಟೆ ಆರಂಭಗೊಂಡಿದೆ. ವಿವಾದವನ್ನು ಮತ್ತಷ್ಟು ಬೃಹದಾಗಿಸುವ ಕೆಲಸ ನಡೆಯುತ್ತಿದೆ.

ಇದೀಗ ಸಲಫಿಗಳು ಕೇರಳದ ಮರ್ಕಝ್ ನಲ್ಲಿರುವ ಪ್ರವಾದಿ ಅವರ ಪವಿತ್ರ ಕೂದಲಿನ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ .

ಪ್ರವಾದಿ ಅವರ ಕೂದಲು ವ್ಯಾಪಾರದ ಸರಕಲ್ಲ” ಎಂಬ ಧ್ಯೇಯ ವಾಕ್ಯದೊಂದಿಗೆ ಪುತ್ತೂರಿನ ಬನ್ನೂರಿನಲ್ಲಿ ಸಲಫಿ ಸಮಾವೇಶ ನಡೆಸಲು ಸಿದ್ದತೆ ನಡೆಸುತ್ತಿದ್ದಾರೆ. ಎ.೧೮ರಂದು ಸಂಜೆ ೪ ಗಂಟೆಗೆ ಸಮಾವೇಶ ನಡೆಸಲು ದಿನ ನಿಗದಿ ಪಡಿಸಿದ್ದಾರೆ. ಮುಸ್ಲಿಂ ಧರ್ಮದ ಪುರೋಹಿತರು ತಾವೇ ನೈಜ ಅಹ್ಲುಸ್ಸುನ್ನಃ ವಲ್ ಜಮಾಅತ್ತಿನ ವಕ್ತಾರರು , ತಾವೇ ಪ್ರವಾದಿ ಅವರ ನೈಜ ಅನುಯಾಯಿಗಳು, ತಾವೇ ಪ್ರವಾದಿ ಅವರನ್ನು ಅತಿಯಾಗಿ ಪ್ರೀತಿಸುವವರು ಎಂದು ಘೋಷಿಸುತ್ತಿರುವ ಪುರೋಹಿತರು ಮಾಡುತ್ತಿರುವುದಾದರೂ ಏನು ? ಎಂಬುದು ಸಲಫಿಗಳ ಪ್ರಶ್ನೆ. ಯಾರದೋ ಕೂದಲನ್ನು ಪ್ರವಾದಿ ಅವರ ಕೂದಲೆನ್ನುತ್ತಾ ಅದನ್ನು ಮಾರಿ ಪುರೋಹಿತರು ಹಣ ಗಳಿಸುವ ನೀಚ ಕೃತ್ಯಕ್ಕಿಳಿದಿದ್ದಾರೆ . ಆ ಮೂಲಕ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂಬುದು ಸಲಫಿಗಳ ಆರೋಪ.

ಈ ವಿಚಾರವನ್ನೇ ಮುಖ್ಯವಾಗಿರಿಸಿಕೊಂಡು, ಆಧ್ಯಾತ್ಮಿಕ ಹೆಸರಿನಲ್ಲಿ ಜನರ ಶೋಷಣೆ ಮಾಡುತ್ತಿರುವ ಪುರೋಹಿತರ ವಿರುದ್ದ ಸಿಡಿದೇಳಬೇಕಾಗಿದೆ ಎಂಬ ಕರೆಯೊಂದಿಗೆ ಬನ್ನೂರಿನಲ್ಲಿ ಸಲಫಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ . ಇದು ಪುತ್ತೂರಿನಲ್ಲಿ ಗೊಂದಲ ಮತ್ತಷ್ಟು ಉಲ್ಭಣಿಸಲು ಕಾರಣವಾಗುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ. ಆಡಂಬರದ ವಿರುದ್ದ ಮಾತನಾಡುತ್ತಿರುವ ಸಲಫಿಗಳು ಈ ಹಿಂದೆ ಪುತ್ತೂರಿನಲ್ಲಿ ದುಬಾರಿ ಖರ್ಚು ಮಾಡಿ ಸಮಾವೇಶ ನಡೆಸಿರುವುದಾದರೂ ಯಾಕೆ ? ಇದರಿಂದ ಯಾರಿಗೆ ಏನು ಪ್ರಯೋಜನವಾಗಿದೆ ಎಂದು ಪ್ರಶ್ನಿಸುವವರೂ ಇಲ್ಲಿದ್ದಾರೆ. ಹೊರಗಿಂದ ಜನ ಕರೆ ತಂದು ಇಲ್ಲಿ ಸಮಾವೇಶ ಮಾಡಿದರೆ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬುದು ಸುನ್ನಿ ಕಡೆಯವರ ವಾದವಾಗಿದೆ.

ಪ್ರವಾದಿಯವರ ಪವಿತ್ರ ಕೂದಲನ್ನು ಸುನ್ನಿಗಳು ವ್ಯಾಪಾರದ ವಸ್ತುವಾಗಿ ಬಳಸಿಕೊಂಡು ಮಾರಾಟ ಮಾಡಲು ಹೊರಟಿದ್ದಾರೆ ಎಂದು ಇದೀಗ ಸಲಫಿಗಳು ಆರೋಪಿಸಲು ಮುಂದಾಗಿರುವುದರಿಂದ ವಿವಾದ ಮತ್ತೆ ಬೆಳೆಯುವ ಸಾಧ್ಯತೆ ಕಂಡು ಬಂದಿದೆ. ಒಟ್ಟಿನಲ್ಲಿ ಸುನ್ನಿ- ಸಲಫಿ ನಡುವಿನ ಆಧ್ಯಾತ್ಮಿಕ ಸಂಘರ್ಷ ಪುತ್ತೂರಿನಲ್ಲಿ ಬಿರುಸುಗೊಂಡಿದೆ.

Advertisements