ಧೋನಿ ಅದೃಷ್ಟಕ್ಕೆ ಅಡ್ಡಿಯಾದ ವಲ್ಥಟಿ

Posted on April 14, 2011

0


ಮೊಹಾಲಿ: ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಈ ಬಾರಿಯ ಐಪಿಎಲ್‌ನ ಮೊದಲ ಶತಕ ಸಿಡಿಸಿದ ಪಾಲ್ ವಲ್ಥಟಿಯ ಅದ್ಬುತ ಇನ್ನಿಂಗ್ಸ್‌ನ ಫಲವಾಗಿ ಚೆನೈ ಸೂಪರ್ ಕಿಂಗ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಆರು ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಗಿಲ್ಲಿ ಪಡೆ ಟೂರ್ನಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು.

ಟಾಸ್ ಸೋತು ಬ್ಯಾಟಿಂಗಿಳಿದ ಚೆನೈ ನಿಗದಿತ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೧೮೮ ರನ್ ಪೇರಿಸಿತು. ಆರಂಭದಲ್ಲಿ ಪ್ರವೀಣ್ ಕುಮಾರ್ ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲೇ ಎರಡು ವಿಕೆಟ್ ಕಬಳಿಸಿ ಚೆನೈಗೆ ಆಘಾತ ನೀಡಿದ್ದರು. ಆದರೆ ಮುರಳಿ ವಿಜಯ್ ಕೇವಲ ೪೩ ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸ್ ನೆರವಿನಿಂದ ೭೪ ರನ್ ದಾಖಲಿಸಿದರು. ಎಸ್ ಬದ್ರಿನಾಥ್ (೬೬) ಕೂಡ ಅರ್ಧಶತಕ ಬಾರಿಸಿದ್ದರು. ಈ ಜೋಡಿ ಮೂರನೇ ವಿಕೆಟ್‌ಗೆ ಶತಕದ (೧೨೪) ಜೊತೆಯಾಟ ನಡೆಸಿ ತಂಡಕ್ಕೆ ಚೇತರಿಕೆ ನೀಡಿದ್ದರು. ಆದರೆ ಅಂತಿಮ ಹಂತದಲ್ಲಿ ನಾಯಕ ಧೋನಿ ಕೇವಲ ೨೦ ಎಸೆತಗಳಲ್ಲಿ ೪೩ ರನ್ ದಾಖಲಿಸುವ ಮೂಲಕ ತಂಡದ ಮೊತ್ತವನ್ನು ೧೮೦ರ ಗಡಿ ದಾಟುವಂತೆ ನೋಡಿಕೊಂಡರು. ಧೋನಿ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸ್ ಒಳಗೊಂಡಿತ್ತು. ಪ್ರವೀಣ್ ಕುಮಾರ್ ಎರಡು ವಿಕೆಟ್ ಕಬಳಿಸಿದರು.

ಗುರಿ ಬೆನ್ನತ್ತಿದ್ದ ಪಂಜಾಬ್ ಯಾವ ಹಂತದಲ್ಲೂ ಆಘಾತಕ್ಕೆ ಒಳಗಾಗದೆ ೧೯.೧ ಓವರ್‌ನಲ್ಲಿ ಕೇವಲ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ೧೯೩ ರನ್ ಗಳಿಸಿ ಭರ್ಜರಿಯಾಗಿ ಜಯ ಸಾಧಿಸಿತು. ಸ್ಫೋಟಕ ಶತಕ ಸಿಡಿಸಿದ ವಲ್ಥಟಿ ಏಕಾಂಗಿ ಹೋರಾಟ ನಡೆಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ತಾನೆದುರಿಸಿದ ಕೇವಲ ೬೩ ಎಸೆತಗಳಲ್ಲಿ ಬರೊಬ್ಬರಿ ೧೯ ಬೌಂಡರಿ ಹಾಗೂ ಎರಡು ಸಿಕ್ಸ್‌ಗಳ ನೆರವಿನಿಂದ ೧೨೦ ರನ್ ಸಿಡಿಸಿದರು. ಗಿಲ್‌ಕ್ರಿಸ್ಟ್ (೧೯), ಮಾರ್ಶ್ (೧೨) ಹಾಗೂ ಸನ್ನಿ (೨೦) ಕೂಡ ಕೆಲ ಹೊತ್ತು ಕ್ರೀಸ್‌ನಲ್ಲಿದ್ದರು. ನಾಯರ್ ಶೂನ್ಯಕ್ಕೆ ಮರಳಿದರು. ಅಂತಿಮವಾಗಿ ಕಾರ್ತಿಕ್ ಹಾಗೂ ವಲ್ತಟಿ ಕೇವಲ ಐದು ಓವರ್‌ಗಳಲ್ಲಿ ಅಜೇಯ ೫೭ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಜಯ ತಂದರು. ಸೂರಜ್ ರಾಂದೀವ್ ಒಂದು ವಿಕೆಟ್ ಪಡೆದರು.

Advertisements
Posted in: Sports News