ಕ್ಲೀನ್‌ಸ್ವೀಪ್ ಸಾಧಿಸಿದ ಆಸೀಸ್

Posted on April 14, 2011

0


ಮಿರ‍್ಪುರ್: ಮೈಕ್ ಹಸ್ಸಿ ದಾಖಲಿಸಿದ ಶತಕ ಹಾಗೂ ಶೇನ್ ವಾಟ್ಸನ್‌ರ ಸ್ಫೋಟಕ ಅರ್ಧಶತಕದ ನೆರವಿನಿಂದ ಬಾಂಗ್ಲಾ ವಿರುದ್ಧ ಆತಿಥೇಯ ಆಸ್ಟ್ರೇಲಿಯಾ ೬೬ ರನ್‌ಗಳ ಜಯ ದಾಖಲಿಸುವ ಮೂಲಕ ಮೂರನೇ ಹಾಗೂ ಅಂತಿಮ ಪಂದ್ಯದಲ್ಲೂ ವಿಜಯ ಸಾಧಿಸಿ ಸರಣಿಯನ್ನು ೩-೦ಯಿಂದ ಕ್ಲೀನ್‌ಸ್ವೀಪ್‌ಗೈದಿದೆ.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ನಿರ್ಧಾರವನ್ನು ದಾಂಡಿಗರು ಸಮರ್ಥಿಸಿಕೊಂಡರು. ನಿಗದಿತ ೫೦ ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ ೩೬೧ ರನ್‌ಗಳ ಬೃಹತ್ ಮೊತ್ತವನ್ನೇ ಪೇರಿಸಿತು. ಮೈಕ್ ಹಸ್ಸಿ (೧೦೮) ಶತಕ ದಾಖಲಿಸಿ ಸಂಭ್ರಮಿಸಿದರು. ಹಸ್ಸಿ ತನ್ನ ಶತಕದ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸ್ ಸಿಡಿಸಿದ್ದರು. ಎರಡನೇ ಪಂದ್ಯದ ಹೀರೋ ಶೇನ್ ವಾಟ್ಸನ್ ಈ ಪಂದ್ಯದಲ್ಲೂ ಮಿಂಚಿದರು. ಕೇವಲ ೪೦ ಎಸೆತಗಳಲ್ಲಿ ೧೧ ಬೌಂಡರಿ ಹಾಗೂ ಮೂರು ಸಿಕ್ಸ್ ನೆರವಿನಿಂದ ಬರೊಬ್ಬರಿ ೭೨ ರನ್ ಸ್ಫೋಟಿಸಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಪಾಂಟಿಂಗ್ (೪೭) ಹಾಗೂ ಕ್ಲಾರ್ಕ್ (೪೭) ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರು. ಆದರೆ ಅಂತಿಮ ಹಂತದಲ್ಲಿ ಮಿಚ್ಚೆಲ್ ಜಾನ್ಸನ್ (೪೧) ಹಾಗೂ ಹೇಸ್ಟಿಂಗ್ (೨೧) ವೇಗವಾಗಿ ರನ್ ಕಲೆಹಾಕಿದ ಪರಿಣಾಮ ತಂಡದ ಮೊತ್ತ ೩೬೦ರ ಗಡಿ ದಾಟುವಂತಾಯಿತು. ಅಬ್ದುರ್ ರಜಾಕ್ ಹಾಗೂ ಮೊರ್ತಾಜಾ ತಲಾ ಮೂರು ವಿಕೆಟ್ ಕಬಳಿಸಿದರು.

ಗುರಿ ಬೆನ್ನತ್ತಿದ್ದ ಬಾಂಗ್ಲಾ ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ ೨೯೫ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಇಮ್ರುಲ್ ಕೈಸ್ ೯೩ ರನ್‌ಗೆ ನಿರ್ಗಮಿಸಿ ಶತಕ ವಂಚಿತರಾ ದರು. ನಫೀಸ್ (೬೦) ಹಾಗೂ ಮೊಹ್ಮದುಲ್ಲಾ (೬೮) ಉತ್ತಮವಾಗಿ ಆಡಿದರೂ ತಂಡಕ್ಕೆ ಜಯ ದಕ್ಕಿಸಿಕೊಡಲು ಸಾಧ್ಯವಾಗಲಿಲ್ಲ. ವೇಗದ ಆಟಕ್ಕೆ ಒತ್ತು ಕೊಟ್ಟು ಆಡುತ್ತಿದ್ದ ತಮೀಮ್ ಇಕ್ಬಾಲ್ (೩೨) ತನ್ನ ವಿಕೆಟ್ ಕಳೆದುಕೊಂಡ ನಂತರ ಕೈಸ್ ಹಾಗೂ ನಫೀಸ್ ಎರಡನೇ ವಿಕೆಟ್‌ಗೆ ೧೩೬ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ಶಕಿಬುಲ್ ಹಸನ್ (೯) ಹಾಗೂ ಮುಷ್ಫಿಕುರ್ ರೆಹ್ಮಾನ್ (೧) ಬ್ಯಾಟಿಂಗ್‌ನಲ್ಲಿ ವಿಫಲಗೊಂಡಿದ್ದು ಅದಕ್ಕೆ ಹಿನ್ನಡೆಯಾಯಿತು. ಜಾನ್ಸನ್ ಮೂರು ವಿಕೆಟ್ ಪಡೆದರು.

Advertisements
Posted in: Sports News