ನಿಮಗೆ ಹಣ ಬೇಕಿದ್ದರೆ ನಮ್ಮ ಕಿಡ್ನಿ ತೆಗೆಯಿರಿ

Posted on April 12, 2011

0


ಮಂಗಳೂರು: ಬಜರಂಗಿಗಳೇ ನಿಮಗೆ ಹಣ ಬೇಕಾಗಿದ್ದರೆ ಅನಾಥ-ಬಡ ಮಕ್ಕಳನ್ನು ಕೊಲ್ಲುವ ಹಾಗೂ ಕಿಡ್ನಿ ತೆಗೆಯುವ ಬೆದರಿಕೆ ಯಾಕೆ ಹಾಕುತ್ತೀರಿ? ನಮ್ಮ ಕಿಡ್ನಿಯನ್ನೇ ಕೊಡ್ತೇವೆ. ಮಾರಿ ಹಣ ಮಾಡಿಕೊಳ್ಳಿ. ಇದು ಬಜರಂಗದಳಕ್ಕೆ ಕ್ರೈಸ್ತ ಮುಖಂಡ ವಿನ್ಸೆಂಟ್ ಆಳ್ವ ಹಾಕಿದ ಬಹಿರಂಗ ಸವಾಲ್.
ಇತ್ತೀಚೆಗೆ ಮಂಗಳೂರಿನಲ್ಲಿ ಕ್ರೈಸ್ತ ಸಂಸ್ಥೆಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ ನಿನ್ನೆ ಸಮಾನ ಮನಸ್ಕ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಆಳ್ವ ಮಾತನಾಡಿದರು. ಕ್ರೈಸ್ತ ಸಂಸ್ಥೆಗಳು ಅನಾಥ ಮತ್ತು ಬಡ ಮಕ್ಕಳಿಗೆ ಶಿಕ್ಷಣ, ಉತ್ತಮ ಆಹಾರವನ್ನು ನೀಡುವ ಉದ್ದೇಶ ಹೊಂದಿದೆಯೇ ಹೊರತು ಮತಾಂತರ ಮಾಡುವ ಉದ್ದೇಶ ಹೊಂದಿಲ್ಲ. ಕೋಟೆ ಕಾರಿನ ಸ್ಟೆಲ್ಲಾ ಮೇರಿಸ್ ಸಂಸ್ಥೆ ೧೯೩೮ರಲ್ಲಿ ಸ್ಥಾಪಿಸಲಾಗಿದ್ದು ಇಲ್ಲಿ ಮತಾಂತರ ನಡೆ ಯುತ್ತಿದ್ದರೆ ಮಂಗಳೂರಿನ ಎಲ್ಲಾ ಜನರೂ ಕ್ರೈಸ್ತರಾಗಿರುತ್ತಿದ್ದರು ಎಂದು ಅವರು ಪ್ರತಿ ಪಾದಿಸಿದರು.
ಚರ್ಚ್ ಮೇಲೆ ನಡೆದ ದಾಳಿಯ ವರದಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಬಳಿಕ ನೆಮ್ಮದಿ ಕಾಣುವ ಹೊತ್ತಿಗೆ ಮತ್ತೆ ವ್ಯವಸ್ಥಿತ ರೀತಿಯಲ್ಲಿ ಕೋಮುವಾದಿಗಳು ಕ್ರೈಸ್ತ ಸಂಸ್ಥೆಗಳ ಮೇಲೆ ದಾಳಿ ಆರಂಭಿಸಿದ್ದಾರೆ. ಇದಕ್ಕೆ ಪೊಲೀಸರು ನಿಷ್ಕ್ರಿಯರಾಗಿರುವುದೇ ಕಾರಣ ಎಂದು ಲೇವಡಿ ಮಾಡಿದ ಆಳ್ವ, ಲಾಠಿಯನ್ನು ನಮಗೆ ನೀಡಿದರೆ ನಿಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದು ಪೊಲೀಸ್ ವ್ಯವಸ್ಥೆಯನ್ನು ಲೇವಡಿ ಮಾಡಿದರು.
ಕೆಲಸವಿಲ್ಲದವರಿಗೆ, ಅರ್ಧದಲ್ಲಿ ಶಾಲೆ ತೊರೆದವರಿಗೆ ರಾಜಕಾರಣಿಗಳು ಸಂಬಳ ನೀಡುವ ಮೂಲಕ ಬಜರಂಗಿ ಕೋಮುವಾದಿಗಳನ್ನು ಪೋಷಿಸುತ್ತಿದ್ದರೆ, ಪೊಲೀಸರು ಕೋಮುವಾದಿಗಳ ಕರೆ ಬಂದ ಕೂಡಲೇ ಸ್ಪಂದಿಸುತ್ತಾರೆ. ಇದನ್ನು ನಿಲ್ಲಿಸಿ ನಮ್ಮನ್ನು ಬದುಕಲು ಬಿಡಿ ಎಂದು ಆಗ್ರಹಿಸಿದ ಆಳ್ವ ನಾವು ನಿಮ್ಮಲ್ಲಿ ಭಿಕ್ಷೆ ಬೇಡುತ್ತಿಲ್ಲ ಎಂದು ಕಟಕಿಯಾಡಿದರು.
ಮಹಾತ್ಮ ಜ್ಯೋತಿ ಬಾಪುಲೆ ಅವರ ಶಿಕ್ಷಣಕ್ಕೆ ಆರ್‌ಎಸ್‌ಎಸ್ ಆಗಲೀ ಮಠಾಧಿಪತಿಗಳಾಗಲೀ ಸಹಕಾರ ನೀಡಿಲ್ಲ. ಅವರಿಗೆ ಕ್ರೈಸ್ತ ಪಾದ್ರಿಯೊಬ್ಬರು ನೆರವು ನೀಡಿದ್ದು ಅವರಿಲ್ಲದಿದ್ದರೆ ಬಾಪುಲೆ ದೇಶದ ಪ್ರಥಮ ಅಕ್ಷರಸ್ಥೆ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗುತ್ತಿರಲಿಲ್ಲ. ದ.ಕ.ದಲ್ಲಿ ಕುದ್ಮುಲ್ ರಂಗರಾವ್ ಅವರ ಶಿಕ್ಷಣಕ್ಕೂ ಕ್ರೈಸ್ತ ಪಾದ್ರಿಯೊಬ್ಬರು ಪ್ರೋತ್ಸಾಹ ನೀಡಿದ್ದರು. ಇಂದು ದಲಿತ ಮಕ್ಕಳಿಗೆ ದೀಕ್ಷೆಯನ್ನು ನೀಡುವ ಮೂಲಕ ಮತ್ತೆ ಗುಲಾಮಗಿರಿಗೆ ತಳ್ಳಲಾಗುತ್ತಿದ್ದು ಇದರ ಅಗತ್ಯ ನಮಗಿಲ್ಲ. ನಮಗೆ ಬೇಕಾಗಿರುವುದು ಶಿಕ್ಷಣ ಮತ್ತು ಉತ್ತಮ ಜೀವನ ಮಾತ್ರವಾಗಿದೆ ಎಂದು ದ.ಸಂ.ಸ. (ಕೃಷ್ಣಪ್ಪ ವಾದ) ಇದರ ಸಂಚಾಲಕ ಕೃಷ್ಣಾನಂದ ಹೇಳಿದರು.
ಅನಧಿಕೃತ ಆಶ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ವಿ.ಹಿಂ.ಪ.-ಬಜರಂಗದಳ ಒತ್ತಾಯ
ದ.ಕ. ಜಿಲ್ಲೆಯಲ್ಲಿ ಕೆಲವು ಕ್ರೈಸ್ತ ಸಂಘಟನೆಗಳು ಅನಧಿಕೃತವಾಗಿ ಅನಾಥಾ ಶ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಇದರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಒತ್ತಾಯಿಸಿದೆ.
ಅನಧಿಕೃತವಾಗಿ ಅನಾಥಾಶ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಸುಳಿವನ್ನು ಅರಿತ ಬಜರಂಗದಳದ ಕಾರ‍್ಯಕರ್ತರು ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖೆಯವರು ಬಂದು ಅಕ್ರಮವಾಗಿ ಸಂಸ್ಥೆ ನಡೆಸುತ್ತಿದ್ದ ಕಾರ್ಪೊರೇಟರ್ ಲ್ಯಾನ್ಸಿಲಾಟ್ ಪಿಂಟೊ ಎಂಬವರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಆದರೆ ಅವರನ್ನು ಈವರೆಗೂ ಬಂಧಿಸಲಾಗಿಲ್ಲ. ತಕ್ಷಣ ಲ್ಯಾನ್ಸಿಲಾಟ್ ಪಿಂಟೊ ಅವರನ್ನು ಬಂಧಿಸಬೇಕೆಂದು ಬಜರಂಗದಳ ಆಗ್ರಹಿಸಿದೆ. ಬಜರಂಗದಳದ ಕಾರ‍್ಯಕರ್ತರು ಕೇವಲ ಮಾಹಿತಿ ನೀಡಿದ್ದಾರೆಯೇ ಹೊರತು ಧಾಳಿ ನಡೆಸಿಲ್ಲ ಎಂಬುದನ್ನು ಈ ಮೂಲಕ ಸ್ಟಷ್ಟಪಡಿಸುತ್ತಿದ್ದೇವೆ. ಹೊರಜಿಲ್ಲೆಗಳಿಂದ ಹಿಂದೂ ಹೆಣ್ಣು ಮಕ್ಕಳನ್ನು ಜಿಲ್ಲೆಗೆ ಕರೆತಂದು ಅನಧಿಕೃತವಾಗಿ ಆಶ್ರಮಗಳಲ್ಲಿ ಕೂಡಿ ಹಾಕಿ ಸೇವೆಯ ಹೆಸರಿನಲ್ಲಿ ಮತಾಂತರ ಮಾಡುವುದನ್ನು ವಿಶ್ವ ಹಿಂದೂ ಪರಿ ಷತ್ ಹಾಗೂ ಬಜರಂಗದಳ ತೀವ್ರವಾಗಿ ಖಂಡಿಸಿದೆ. ಇಂತಹ ಅನಧಿಕೃತ ಆಶ್ರಮಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದೆ.
ಇಲಾಖೆಯ ಮೊರೆ ಹೋಗುತ್ತಿರುವ ಕ್ರೈಸ್ತ ಸನ್ಯಾಸಿನಿಯರು
ಕಳೆದ ವಾರ ನಡೆದ ಮತಾಂತರ ವಿವಾದದಿಂ ದಾಗಿ ಗಾಬರಿಗೊಂಡಿರುವ ಕ್ರೈಸ್ತ ಆಶ್ರಮದ ಸನ್ಯಾಸಿನಿಯರು ಅಲ್ಲಿನ ಮಕ್ಕಳನ್ನು ಊರಿಗೆ ಕಳುಹಿಸಲು ರಕ್ಷಣೆ ನೀಡುವಂತೆ ಇಲಾಖೆಯ ಮೊರೆ ಹೋಗುತ್ತಿರುವುದಾಗಿ ತಿಳಿದು ಬಂದಿದೆ.
ಕಳೆದ ವಾರ ಬಿಜೈ ಆನೆಗುಂಡಿಯಲ್ಲಿರುವ ಲ್ಯಾನ್ಸ್ ಲಾಟ್ ಪಿಂಟೋ ಅವರ ಕುಟುಂಬಸ್ಥರು ನಡೆಸುತ್ತಿರುವ ಆಶ್ರಯ ಅನಾ ಥಾಲಯದ ಮಕ್ಕಳು ತಮ್ಮ ಊರಾದ ಬೀದರ್‌ಗೆ ತೆರಳುತ್ತಿದ್ದ ವೇಳೆ ಅವರನ್ನು ಮತಾಂತರ ಮಾಡಲಾಗಿದೆ ಎಂದು ಬಜರಂಗದಳ ಆರೋಪಿಸಿತ್ತು. ಇಲ್ಲಿಂದ ಹುಟ್ಟಿಕೊಂಡ ವಿವಾದ ಬಳಿಕ ಕೋಟೆ ಕಾರಿನ ಸೈಂಟ್ ಮೆರೀಸ್ ಸಂಸ್ಥೆಗೂ ತಟ್ಟಿತ್ತು. ಇದು ಜಿಲ್ಲೆಯಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದರಿಂದ ಕಂಗಾಲಾಗಿರುವ ಆಶ್ರಮದ ಆಡಳಿತಗಾರರು ಅಲ್ಲಿನ ಮಕ್ಕಳನ್ನು ಊರಿಗೆ ಕಳುಹಿಸಲು ಇಲಾಖೆಯ ಮೊರೆ ಹೋಗುತ್ತಿದ್ದಾರೆ. ನಿನ್ನೆ ಕುಲಶೇಖರದಲ್ಲಿರುವ ಸೈಂಟ್ ಮೆರೀಸ್ ಕಾನ್ವೆಂಟಿನ ಸನ್ಯಾಸಿನಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತೆರಳಿ ತಮ್ಮ ಸಂಸ್ಥೆಯಲ್ಲಿರುವ ೧೫ ಮಕ್ಕಳನ್ನು ಊರಿಗೆ ಕಳುಹಿಸಿ ಕೊಡಲು ರಕ್ಷಣೆ ಕೋರಿದ್ದರು. ಅವರ ಕೋರಿಕೆ ಯಂತೆ ಮಕ್ಕಳನ್ನು ಬೊಂದೆಲ್‌ನಲ್ಲಿರುವ ರಿಮಾಂಡ್ ಹೋಮಿಗೆ ಕಳುಹಿಸ ಲಾಗಿದ್ದು ಅಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

Advertisements