ನದಿಗೆ ಮಲ ಎಸೆದ ಕಿಡಿಗೇಡಿಗಳು!

Posted on April 12, 2011

0


ಬಂಟ್ವಾಳ: ಇಲ್ಲಿನ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಶೌಚಾಲಯ ಗುಂಡಿಯ ಮಲ ಗೊಬ್ಬರವನ್ನು ಎಸೆದ ಕಿಡಿಗೇಡಿಗಳು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಕರಾವಳಿ ಜನರ ಜೀವ ನದಿ ನೇತ್ರಾವತಿ ಕಿಡಿಗೇಡಿಗಳ ಮನೆ ಹಾಳು ಕೃತ್ಯದಿಂದ ಪ್ರತಿದಿನ ಮಲಿನಗೊಳ್ಳುತ್ತಿದ್ದು, ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿದೆ. ಜನರ ಇಷ್ಟಾರ್ಥಗಳನ್ನು ಪೂರೈಸಲು ಶುದ್ಧ ಜಲವನ್ನು ಪೂರೈಸುವ ನೇತ್ರಾವತಿ ಈಗ ಅಶುದ್ಧಳಾಗಿ ಅಸಹ್ಯ ಹುಟ್ಟಿ ಸುವಂತೆ ಕಾಣಲು ಈ ಕಿಡಿಗೇಡಿ ಕೃತ್ಯಗಳೇ ಕಾರಣ. ಪ್ರವಾಸಿಗರ ನೈಸರ್ಗಿಕ ತಾಣ ಎಂದೇ ಗುರುತಿಸಿಕೊಂಡ ಜಕ್ರಿಬೆಟ್ಟು ನದಿ ತೀರ ಕಳೆದ ಕೆಲವೊಂದು ದಿನಗಳಿಂದ ಗಲೀಜು ಪ್ರದೇಶ ವಾಗಿ ಪರಿಗಣಿಸಿದೆ. ಒಂದು ಕಾಲದಲ್ಲಿ ಸ್ವಚ್ಛ ವಾಗಿದ್ದ ಸ್ಥಳದಲ್ಲೀಗ ಬಿಯರ್ ಬಾಟಲಿಗಳು, ಗುಟ್ಕಾ ಪ್ಯಾಕೇಟುಗಳು, ಚಿಂದಿ ಬಟ್ಟೆ, ಕೋಳಿ, ಮೀನು, ಮಾಂಸದ ತ್ಯಾಜ್ಯಗಳೇ ಕಾಣ ಸಿಗುತ್ತವೆ. ಕುರುಡು ಕಾಂಚಣದಲ್ಲಿ ಮುಳುಗಿದ ಪುರಸಭೆಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ಇಲಾಖಾಧಿಕಾರಿಗಳಿಗೆ ನೇತ್ರಾವ ತಿಯ ಮಡಿಲಿನ ಮಲಿನ ಕಾಣುತ್ತಿಲ್ಲ.

ಕಳೆದ ಎರಡು ದಿನಗಳ ಹಿಂದೆ ನದಿಯ ತಪ್ಪಲಿಗೆ ಟೆಂಪೋದಲ್ಲಿ ಸಾಗಿಸಿ ತಂದು ಮಲವನ್ನು ಎಸೆದ ಸ್ಥಳೀಯ ಪುಂಡ ಯುವ ಕರ ತಂಡವೊಂದು, ಯಾರ ಗಮನಕ್ಕೂ ಬಾರದಂತೆ ಪರಾರಿಯಾಗಿತ್ತು. ಯುವಕರ ಕುಕೃತ್ಯವನ್ನು ನೋಡಿದ ಸ್ಥಳೀಯರು ಅವರ ಮೇಲೆ ಪುರಸಭೆಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದ್ದಾರೆಂದು ತಿಳಿದುಬಂದಿದೆ. ನದಿ ಪರಿಸರವನ್ನು ಮಲಿನ ಮಾಡಬಾರದೆಂಬ ಕಟ್ಟೆಚ್ಚರ ಇದ್ದರೂ ಎಲ್ಲರಿಗೂ ಕಾಣುವಂತೆ, ಸಾರ್ವಜನಿಕ ಸ್ಥಳದಲ್ಲಿ ತೆರೆದ ರೀತಿಯಲ್ಲಿ ಒಂದು ಲೋಡು ಮಲವನ್ನು ಎಸೆದಿದ್ದಾರೆ. ಗುಡ್ಡದಂತಿರುವ ಮಲದ ರಾಶಿ ಪರಿಸರದಲ್ಲಿ ದುರ್ನಾತ ಬೀರತೊಡಗಿದೆ. ಮಲ ಗೊಬ್ಬರ ಕ್ರಮೇಣ ಹರಿಯುವ ನೀರಿಗೆ ಸೇರುವುದರಿಂದ ಬಂಟ್ವಾಳ ಪುರಸಭೆ, ಮಂಗಳೂರು ಮಹಾ ನಗರದ ಜನರು ಇದೇ ನೀರು ಕುಡಿಯುತ್ತಾರೆ. ಸಾರ್ವಜನಿಕರ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವ ಇಂಥವರ ವಿರುದ್ಧ ಸ್ಥಳೀಯ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕಾಗಿದೆ. ನದಿ ನೀರಿಗೆ ಮಲಿನ, ತ್ಯಾಜ್ಯ ವಸ್ತಗಳನ್ನು ಎಸೆಯುವ ಪರಿಸರದ ಸ್ವಾಭಾವಿಕ ಆರೋಗ್ಯವನ್ನು ಕೆಡಿಸುತ್ತಿರುವ ಕಿಡಿಗೇಡಿಗಳಿಗೆ ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮ ನದಿಯ ಸ್ವಚ್ಛತೆಯನ್ನು ಕೆಡಿಸುವ ಮಂದಿಗೆ ತಕ್ಕ ಪಾಠ ಕಲಿಸಬೇಕೆಂಬುದು ಸಾರ್ವಜನಿಕರ ಒತ್ತಾಯ.

Advertisements
Posted in: Crime News