ಡೆಕ್ಕನ್ ಮೇಲೆ ನೈಟ್ ರೈಡ್

Posted on April 12, 2011

0


ಕೋಲ್ಕತ್ತಾ: ಗೆಲ್ಲಲೆಂದೇ ಮೈದಾನಕ್ಕಿಳಿದಂತಿದ್ದ ಕೋಲ್ಕತ್ತಾ ನೈಟ್ ರೈಡರ‍್ಸ್ ಡೆಕ್ಕನ್ ಚಾರ್ಜರ‍್ಸ್ ತಂಡವನ್ನು ೯ರನ್‌ಗಳಿಂದ ಸೋಲಿಸುವ ಮೂಲಕ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಐಪಿಎಲ್ ಸರಣಿಯ ಮೊದಲ ಜಯವನ್ನು ದಾಖಲಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನೈಟ್ ರೈಡರ‍್ಸ್ ನಾಯಕ ಗೌತಮ್ ಗಂಭೀರ್ ನಿರ್ಧಾರವನ್ನು ತಂಡದ ಪ್ರಮುಖ ಆಟಗಾರ ಜ್ಯಾಕ್ ಕಾಲಿಸ್ ಸಮರ್ಥಿಸಿಕೊಂಡರು. ೪೫ಬಾಲ್‌ನಿಂದ ಅಮೂಲ್ಯ೫೨ರನ್ ಮಾಡಿದ ಕ್ಯಾಲಿಸ್‌ಗೆ ಇತರ ಆಟಗಾರರು ಅಷ್ಟೇನೂ ಬೆಂಬಲ ನೀಡಲಿಲ್ಲ. ಆದರೆ ತಂಡದ ಮನೋಜ್ ತಿವಾರಿ(೩೦ನಾಟೌಟ್) ಯೂಸುಫ್ ಪಠಾಣ್ (೨೨) ಗೌತಮ್ ಗಂಭೀರ್(೨೯) ತಂಡದ ಮೊತ್ತವನ್ನು ಏರಿಸುವಲ್ಲಿ ನೆರವಾದರು. ಆರಂಭದಲ್ಲಿ ಉತ್ತಮ ರನ್‌ರೇಟ್ ಕಾಯ್ದುಕೊಂಡಿದ್ದ ಕೋಲ್ಕತ್ತಾ ಆನಂತರ ರನ್ ಗಳಿಸಲು ಒದ್ದಾಡಿತು. ಅಂತಿಮವಾಗಿ ೪ವಿಕೆಟ್ ಕಳೆದುಕೊಂಡು ೧೬೩ರನ್ ಮಾಡಿದ ಕೋಲ್ಕತ್ತಾ ನೈಟ್‌ರೈಡರ‍್ಸ್ ಡೆಕ್ಕನ್‌ಗೆ ಗೆಲ್ಲಲು ದೊಡ್ಡ ಮೊತ್ತದ ಗುರಿ ಇಟ್ಟಿತು. ಆದರೆ ಡೆಕ್ಕನ್ ಲೆಕ್ಕಾಚಾರ ಆರಂಭದಿಂದಲೇ ಎಡವಿತು.

ರನ್ ಗಳಿಸುವ ಆತುರದಲ್ಲಿ ತಂಡದ ಪ್ರಮುಖ ಆಟಗಾರರು ರನೌಟ್‌ಗೆ ಬಲಿಯಾದರು. ಡೆಕ್ಕನ್ ರೈಡರ‍್ಸ್‌ನ ಕಪ್ತಾನ ಕುಮಾರ ಸಂಗಕ್ಕಾರ ಈ ಪಂದ್ಯದಲ್ಲೂ ಬ್ಯಾಟಿಂಗ್‌ನಲ್ಲಿ ಲಯಕಂಡುಕೊಳ್ಳಲು ವಿಫಲರಾದರು.

೧೫ಬಾಲ್‌ನಲ್ಲಿ ೧೬ ರನ್ ಮಾಡಿ ತಂಡವನ್ನು ಗೆಲ್ಲಿಸಲು ಪಣ ತೊಟ್ಟಿದ್ದ ಸಂಗಕ್ಕಾರ ಜಾಕ್ ಕ್ಯಾಲಿಸ್‌ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.

ಆದರೆ ತಂಡದ ಮತ್ತೊಬ್ಬ ಆಟಗಾರ, ಕರ್ನಾಟಕದ ಭರತ್ ಚಿಪ್ಲಿ ೪೮ರನ್ ಗಳಿಸುವ ಮೂಲಕ ಡೆಕ್ಕನ್ ಚಾರ್ಜರ‍್ಸ್ ಗೆಲ್ಲುವ ಆಸೆಗೆ ಜೀವ ತುಂಬುವ ಕೆಲಸ ಮಾಡಿದರು. ಆದರೆ ಡೇನಿಯಲ್ ಕ್ರಿಶ್ಚಿಯನ್ ಬಿಟ್ಟರೆ ಇತರ ಆಟಗಾರರು ಗೆಲ್ಲುವ ಛಾತಿ ತೋರಲಿಲ್ಲ. ೧೩ಬಾಲ್‌ನಲ್ಲಿ ಎರಡು ಸಿಕ್ಸ್ ಸಹಿತ ೨೫ರನ್ ಗಳಿಸಿದ ಡೇನಿಯಲ್ ಎಡಗೈ ಸ್ಪಿನ್ನರ್ ಇಕ್ಬಾಲ್ ಅಬ್ದುಲ್‌ಗೆ ವಿಕೆಟ್ ಒಪ್ಪಿಸಿ ಡೆಕ್ಕನ್ ಚಾರ್ಜರ್‌ನ ಹೋರಾಟವನ್ನು ಕೊನೆ ಗೊಳಿಸಿದರು. ನಡುವೆ ಪಾರ್ಟ್‌ಟೈಮ್ ಬ್ಯಾಟ್ಸ್‌ಮ್ಯಾನ್‌ಗಳ ಹೋರಾಟ ಡೆಕ್ಕನ್ ಚಾರ್ಜರ‍್ಸ್ ಅನ್ನು ಗೆಲ್ಲುವ ಹಂತಕ್ಕೆ ತರುತ್ತದೆ ಅನ್ನಿಸುವ ಹೊತ್ತಿನಲ್ಲೇ ವಿಕೆಟ್ ಉರುಳುತ್ತಿದ್ದವು. ಅಂತಿಮ ಓವರ್‌ನಲ್ಲಿ ಗೆಲ್ಲಲು ೨೦ರನ್‌ಗಳ ಗುರಿ ಇತ್ತಾದರೂ ಉನಾದ್‌ಕತ್ ಅವರ ಕರಾರುವಕ್ಕು ಬೌಲಿಂಗ್‌ನಲ್ಲಿ ೧೧ರನ್‌ಗಳಷ್ಟೇ ಬಂತು.

ಕೋಲ್ಕೊತ್ತಾ ನೈಟ್ ರೈಡರ‍್ಸ್‌ನ ಜ್ಯಾಕ್ ಕಾಲಿಸ್ ಮ್ಯಾನ್‌ಅಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

Advertisements
Posted in: Sports News