ಜಾತಿ ದಾಖಲೆಯಲ್ಲಿ ಮತಾಂತರ

Posted on April 12, 2011

0


ಪುತ್ತೂರು: ಇವರು ಪುತ್ತೂರು ತಾಲ್ಲೂಕಿನ ಗೋಳಿತ್ತೊಟ್ಟು ಗ್ರಾಮದವರು. ಹೆಸರು ಸೋಮಪ್ಪ ಗೌಡ. ಹಿಂದೂ ಸಮುದಾಯಕ್ಕೆ ಸೇರಿದ ಹಿಂದುಳಿದ ವರ್ಗಗಳ ೨(ಬಿ) ಪ್ರವರ್ಗಕ್ಕೆ ಸೇರಿದವರು. ಆದರೆ ಪುತ್ತೂರಿನ ಕಂದಾಯ ಅಧಿಕಾರಿಗಳು ಇವರನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ಪ್ರಮಾಣೀಕರಿಸಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ಜಾತಿ ದಾಖಲೆಯ ಮತಾಂತರ ಮಾಡಿದ್ದಾರೆ. ಇದು ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೊಂದು ಸಾಕ್ಷಿಯಾಗಿದೆ.

ಸೋಮಪ್ಪ ಗೌಡರು ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕಾಗಿ ಉಪ್ಪಿನಂಗಡಿ ನೆಮ್ಮದಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿದ್ದರು.ಅವರಿಗೆ ತಾಲ್ಲೂಕು ಕಛೇರಿಯಲ್ಲಿ ನೀಡಲಾದ ಆದಾಯ ಮತ್ತು ಜಾತಿ ಪ್ರಮಾಣ ಪತ್ರದಲ್ಲಿ ಹಿಂದುಳಿದ ಪ್ರವರ್ಗ ೨(ಬಿ)ಯಲ್ಲಿ ಬರುವ ಮುಸ್ಲಿಂ ಜಾತಿಗೆ ಸೇರಿದವರಾಗಿ ದ್ದಾರೆಂದು ನಮೂದಿಸಿ ಧರ್ಮವನ್ನೇ ಅದಲು ಬದಲು ಮಾಡಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಇದು ಯಾರ ತಪ್ಪು. ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಎದುರಾಗಿದೆ.

ಈ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಕಳೆದ ವರ್ಷ ಏಪ್ರಿಲ್ ೧೫ ರಂದು ನೀಡಲಾಗಿತ್ತು. ಅದನ್ನು ಸರಿಪಡಿಸಿಕೊಡುವಂತೆ ತಾನು ಹಲವು ಬಾರಿ ತಾಲೂಕು ಕಛೇರಿಗೆ ಅಲೆದಾಡಿದರೂ ಈ ತನಕ ಪ್ರಯೋಜನವಾಗಿಲ್ಲ. ಇದರಿಂದಾಗಿ ತಾನು ಸಮಸ್ಯೆ ಅನುಭವಿಸುವಂತಾಯಿತು ಎಂಬುದು ಸೋಮಪ್ಪ ಗೌಡರ ಆರೋಪವಾಗಿದೆ.

ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ವ್ಯವಸ್ಥೆಯಲ್ಲಿ ಸಾಕಷ್ಟು ಅವ್ಯವಸ್ಥೆಗಳಾಗಿ ತಾಲ್ಲೂಕಿನ ಜನತೆ ಬಹಳಷ್ಟು ಸಮಸ್ಯೆ ಅನುಭವಿಸಿದ್ದಾರೆ. ಇದು ತಾಲ್ಲೂಕು ಮಟ್ಟದ ಅಧಿಕಾರಿಗಳ ವ್ಯಾಪ್ತಿ ಮೀರಿದ ವ್ಯವಸ್ಥೆಗಳಾಗಿತ್ತು. ಆದರೆ ತಾಲೂಕು ಮಟ್ಟದಲ್ಲೇ ವಿವಿಧ ಸ್ತರದಲ್ಲಿ ನಡೆಯುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರದಲ್ಲೂ ಜಾತಿಯೇ ಬದಲಾಗುತ್ತಿದೆ ಎಂದಾದರೆ ವ್ಯವಸ್ಥೆಯನ್ನು ಸರಿಪಡಿಸುವವರಾರು ಎಂಬ ಪ್ರಶ್ನೆ ಎದುರಾಗಿದೆ.

Advertisements