ಆಚಾರ್ಯರ ಮೆದುಳೇ ಕಪ್ಪು: ಎನ್.ಜೆ.ಎಸ್.

Posted on April 12, 2011

0


ಮಂಗಳೂರು: ವಿವಾದಾತ್ಮಕ ಯುಪಿಸಿಎಲ್ ಪರ ಒಲವು ಹೊಂದಿರುವ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ನಿನ್ನೆ ಉಡುಪಿಯಲ್ಲಿ ನೀಡಿದ್ದ ಯುಪಿಸಿಎಲ್ ಪರ ಹೇಳಿಕೆಯನ್ನು ಯೋಜನೆಯ ವಿರುದ್ಧ ಪ್ರಬಲ ನ್ಯಾಯಾಂಗ ಹೋರಾಟ ಮುಂದುವರಿಸು ತ್ತಿರುವ ನಂದಿಕೂರು ಜನಜಾಗೃತಿ ಸಮಿತಿ ಕಟು ಶಬ್ದಗಳಲ್ಲಿ ಖಂಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದೆ.

ಯುಪಿಸಿಎಲ್ ಸ್ಥಾವರಕ್ಕೆ ತಾನು ಭೇಟಿ ನೀಡಿ ಮೂರು ತಾಸು ಕಳೆದು ಬಳಿಕ ರಾಜ್ಯಾದ್ಯಂತ ಸುತ್ತಾಡಿದರೂ ತನ್ನ ತಲೆಗೂದಲು, ಬಿಳಿ ಪ್ಯಾಂಟು ಶರ್ಟು ಕಪ್ಪಾಗಿಲ್ಲ ಎಂದು ಸಚಿವರು ನೀಡಿದ ಹೇಳಿಕೆಗೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಂತ್ ಕುಮಾರ್, ಇದರಲ್ಲೇನೂ ವಿಶೇಷವಿಲ್ಲ. ಡಾ. ಆಚಾರ್ಯರ ಮೆದುಳೇ ಕಪ್ಪಾಗಿರುವುದು ಅವರ ಗಮನಕ್ಕೆ ಬಾರದಿರುವುದೇ ಈ ಹೇಳಿಕೆ ನೀಡಲು ಮುಖ್ಯ ಕಾರಣ ಎಂದು ಹೇಳಿದ್ದಾರೆ. ನಿಮ್ಹಾನ್ಸ್‌ನಲ್ಲಿರಬೇಕಾದ ವ್ಯಕ್ತಿ ವಿಧಾನಸೌಧ ದಲ್ಲಿರುವುದು ಈ ನಾಡ ಜನರ ಮತ್ತು ಪ್ರಜಾಪ್ರಭುತ್ವದ ದುರಂತ ಎಂದಿರುವ ಜಯಂತ್ ಕುಮಾರ್, ಹೆಲ್ಮೆಟ್ ಧರಿಸಿ ಸ್ಥಾವರದ ಕೆಲಸ ನಿಲ್ಲಿಸಿ ಒಳಗಡೆ ಭದ್ರತೆಯಲ್ಲಿ ಸುತ್ತಾಡಿದ್ದ ಡಾ. ಆಚಾರ್ಯ, ಹೆಲ್ಮೆಟ್ ತೆಗೆದು ಬಿರು ಬಿಸಿಲಲ್ಲಿ ಸ್ಥಾವರದ ಸುತ್ತಮುತ್ತ ಸುತ್ತಾಡಬೇಕಿತ್ತು ಎಂದು ಹೇಳಿದ್ದಾರೆ.

ಕಂಪೆನಿ ನಿಲುಗಡೆ ಮಾಡಲು ಅದೇನು ಮಾವನ ಮನೆಯೇ? ಪ್ರಶ್ನಿಸಿದ್ದ ಡಾ. ಆಚಾರ್ಯರನ್ನು ಲೇವಡಿ ಮಾಡಿರುವ ಸಮಿತಿಯ ಕಾರ್ಯದರ್ಶಿ, ಸ್ಥಾವರ ಡಾ. ಆಚಾರ್ಯರ ಮಾವನ ಮನೆಯಾಗಿದ್ದೀತು. ಹಾಗಾಗಿ ಅವರು ಅಲ್ಲಿ ಠಿಕಾಣಿಯೂ ಹೂಡಿರಬಹುದು. ಅಂದ ಮಾತ್ರಕ್ಕೆ ಡಾ. ಆಚಾರ್ಯರು ಮತ್ತವರ ಮಾವನ ಮನೆ ನೆರೆಕರೆಯವರಿಗೆ ಕಿರಿಕಿರಿಯುಂಟು ಮಾಡಿದರೆ ಮನೆ ಬಿಡಿಸಿ ಓಡಿಸಲೂ ಸ್ಥಳೀಯರಿಗೆ ಗೊತ್ತು ಎಂದೂ ಜಯಂತ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಂದೊಮ್ಮೆ ಡಾ. ಆಚಾರ್ಯ ಮತ್ತವರ ಮಿತ್ರ ಮಂಡಳಿ ಎಲ್ಲೂರು ಸಾಂತೂರು ಪರಿಸರದಲ್ಲಿ ಒಂದೇ ಒಂದು ದಿನ ಸ್ವಚ್ಛಂದವಾಗಿ ತಿರುಗಾಡಿ ವಾಸ್ತವ್ಯ ಹೂಡಿ (ಲವಣಯುಕ್ತ) ನೀರಿನ ಭೋಜನ ಸವಿದು ವಿರಮಿಸುವುದಾದರೆ ಅದಕ್ಕೆ ತನ್ನ ಮನೆಯಲ್ಲೇ ಅವಕಾಶ ಏರ್ಪಡಿಸಲು ಸಿದ್ಧನಿದ್ದೇನೆ ಎಂದೂ ಜಯಂತ್ ಕುಮಾರ್ ಸವಾಲು ಎಸೆದಿದ್ದಾರೆ.

Advertisements