ವಾರಿಯರ‍್ಸ್ ಎದುರು ಮಂಡಿಯೂರಿದ ಗಿಲ್ಲಿ ಪಡೆ

Posted on April 11, 2011

0


ಮುಂಬಯಿ: ಶ್ರೀಕಾಂತ್ ಹಾಗೂ ಥೋಮಸ್ ನಡೆಸಿದ ಮಾರಕ ಬೌಲಿಂಗ್ ದಾಳಿಗೆ ಕಂಗೆಟ್ಟ ಪಂಜಾಬ್ ಕಿಂಗ್ಸ್ ಎದುರಾಳಿ ಪುಣೆ ವಾರಿಯರ‍್ಸ್ ವಿರುದ್ಧ ಏಳು ವಿಕೆಟ್‌ಗಳಿಂದ ಹೀನಾಯವಾಗಿ ಸೋಲುಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡ ಕಿಂಗ್ಸ್ ಪಂಜಾಬ್ ಆರಂಭದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡರೂ ನಿಗದಿತ ೨೦ ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ಕಳೆದುಕೊಂಡು ೧೧೨ ಗಳಿಸಲು ಶಕ್ತವಾಯಿತು. ಶ್ರೀಕಾಂತ್ ಮೂರು ವಿಕೆಟ್ ಪಡೆದರೆ ಥೋಮಸ್ ಎರಡು ವಿಕೆಟ್ ಪಡೆದು ಮಿಂಚಿದರು.

ಗುರಿ ಬೆನ್ನತ್ತಿದ್ದ ಪುಣೆ ೧೩.೧ ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ೧೧೩ ರನ್ ಮಾಡಿ ಸುಲಭ ಗೆಲುವು ದಾಖಲಿಸಿತು.

ಇನ್ನಿಂಗ್ಸ್‌ನ ಮೊದಲೇ ಎಸೆತದಲ್ಲೇ ಆರಂಭಿಕ ಸ್ಮಿತ್ (೦) ವಿಕೆಟ್ ಕಳೆದು ಕೊಂಡರೂ ಮನಾಸ್ (೩೫) ಹಾಗೂ ರೈಡರ್ ಎರಡನೇ ವಿಕೆಟ್‌ಗೆ ಕೇವಲ ೭.೪ ಓವರ್‌ನಲ್ಲಿ ೭.೮೨ ಸರಾಸರಿಯಂತೆ ೬೦ ರನ್ ಒಟ್ಟುಗೂಡಿಸಿ ತಂಡಕ್ಕೆ ಆರಂಭದ ಆಘಾತದಿಂದ ಚೇತರಿಕೆ ನೀಡಿದರು. ಆದರೆ ಮುಂದಿನ ಎಂಟು ರನ್‌ಗಳ ಅವಧಿಯಲ್ಲಿ ಈ ಇಬ್ಬರೂ ಆಟಗಾರರು ಕ್ರೀಸ್‌ನಿಂದ ನಿರ್ಗಮಿಸಿದರು. ರೈಡರ್ ಕೇವಲ ೧೭ ಎಸೆತ ಗಳಲ್ಲಿ ೩೧ ರನ್ ದಾಖಲಿಸಿದರು. ಅಂತಿ ಮವಾಗಿ ಯುವರಾಜ್ (೨೧) ಹಾಗೂ ಉತ್ತಪ್ಪ ನಾಲ್ಕನೇ ವಿಕೆಟ್‌ಗೆ ೪.೪ ಓವರ್‌ನಲ್ಲಿ ಅಜೇಯ ೪೫ ರನ್ ಗಳಿಸಿ ಪಂದ್ಯವನ್ನು ತಮ್ಮ ಕಡೆ ಒಲಿಸಿಕೊಂಡರು. ಉತ್ತಪ್ಪ ಎರಡು ಸಿಕ್ಸ್ ಹಾಗೂ ಒಂದು ಬೌಂಡರಿ ನೆರವಿನಿಂದ ೨೨ ರನ್ ದಾಖಲಿಸಿದರು. ನಾಯರ್ ಒಂದು ವಿಕೆಟ್ ಕಿತ್ತರು.

ಈ ಮೊದಲು ಬ್ಯಾಟಿಂಗ್ ನಡೆಸಿದ್ದ ಪಂಜಾಬ್ ಆರಂಭಿಕ ಆಘಾತವನ್ನು ಅನುಭವಿಸುತ್ತಾ ಸಾಗಿತ್ತು. ಸ್ಫೋಟಕ ಬ್ಯಾಟ್ಸ್‌ಮೆನ್ ಗಿಲ್‌ಕ್ರಿಸ್ಟ್‌ಗೆ (೧) ವೇಗಿ ಥೋಮಸ್ ಪೆವಿಲಿಯನ್ ದಾರಿ ತೋರಿಸಿದಾಗ ತಂಡದ ಬೃಹತ್ ಮೊತ್ತಕ್ಕೆ ಆರಂಭದಲ್ಲೇ ಬ್ರೇಕ್ ಬಿದ್ದಿತ್ತು. ಆದರೆ ಮುಂದಿನ ಏಳು ರನ್‌ಗಳ ಅಂತರದಲ್ಲಿ ಮಾಶ್ (೧), ವಲ್ತಟಿ (೬) ಹಾಗೂ ಕಾರ್ತಿಕ್ (೦) ಮುಂತಾದ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಾಗಲಂತೂ ತಂಡ ಐವತ್ತರ ಗಡಿ ದಾಟುವುದು ಅನುಮಾನ ಎಂಬಂತೆ ಗೋಚರಿಸಿತು. ಈ ನಡುವೆ ಸನ್ನಿ ಹಾಗೂ ನಾಯರ್ ಐದನೇ ವಿಕೆಟ್‌ಗೆ ವೇಗದ ೨೭ ರನ್‌ಗಳ ಜೊತೆಯಾಟ ನಡೆಸಿದರು. ಆದರೆ ಸನ್ನಿ (೧೨) ರನ್ ಗಳಿಸುವ ಆತುರದಲ್ಲಿ ರನೌಟ್ ಆದಾಗ ತಂಡಕ್ಕೆ ಮತ್ತೇ ಆಘಾತ. ಬಿನ್ನಿ ಹೋದ ಬೆನ್ನಲ್ಲೇ ನಾಯರ್ (೧೨) ಕೂಡ ಕ್ರೀಸ್ ತ್ಯಜಿಸಿದರು. ಆದರೆ ಈ ವೇಳೆ ಒಟ್ಟುಗೂಡಿದ ಚಾವ್ಲಾ (೧೫) ಹಾಗೂ ಮೆಕ್‌ಲ್ಯಾರೆನ್ ಏಳನೇ ವಿಕೆಟ್‌ಗೆ ೩೫ ರನ್ ಕಳೆಹಾಕಿದರು. ಅದರಲ್ಲೂ ಮೆಕ್‌ಲ್ಯಾರೆನ್ ಅಂತಿಮ ಹಂತದಲ್ಲಿ ವೇಗದ ಆಟಕ್ಕೆ ಮನ್ನಣೆ ನೀಡಿದರು. ಪ್ರವೀಣ್ ಕುಮಾರ್ ಜೊತೆ ಮೆಕ್‌ಲ್ಯಾರೆನ್ ವೇಗದ ೨೨ ರನ್ ಹಾಗೂ ರಮ್ಮಿಂಗ್ಟನ್‌ರೊಂದಿಗೆ ೧೦ ರನ್‌ಗಳನ್ನು ಒಟ್ಟು ಗೂಡಿಸಿದ ಪರಿಣಾಮ ತಂಡದ ಮೊತ್ತ ೧೦೦ರ ದಾಟು ವಂತಾಯಿತು.

ಅಂತಿಮ ಹಂತದವರೆಗೆ ಅಜೇಯರಾಗುಳಿದ ಮೆಕ್‌ಲ್ಯಾರೆನ್ (೫೧) ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಮೆಕ್‌ಲ್ಯಾರೆನ್ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಹಾಗೂ ಒಂದು ಭರ್ಜರಿಯಾದ ಸಿಕ್ಸ್ ಒಳಗೊಂಡಿತ್ತು.

Advertisements
Posted in: Sports News