ತೆಂಕ ಎಡಪದವು ಶಾಲಾ ಶಿಕ್ಷಕನ ‘ಕಾಮಪಾಠ’: ವ್ಯಾಪಕ ಜನಾಕ್ರೋಶ

Posted on April 11, 2011

0


ಮಂಗಳೂರು: ಶಾಲಾ ವಿದ್ಯಾರ್ಥಿನಿ ಯರ ಜತೆ ಅಸಭ್ಯ ವರ್ತನೆ ಪ್ರದರ್ಶಿಸುವ ಮೂಲಕ ಕುಖ್ಯಾತಿಯನ್ನು ಪಡೆದಿರುವ ತೆಂಕ ಎಡಪದವು ಪ್ರಾಥಮಿಕ ಶಾಲಾ ಶಿಕ್ಷಕನ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ.

ತೆಂಕ ಎಡಪದವಿನಲ್ಲಿರುವ ಜೈನ ಸಮು ದಾಯದ ಪ್ರಾಥಮಿಕ ಶಾಲೆಯಲ್ಲಿ ಆರು ಮತ್ತು ಏಳನೇ ಕ್ಲಾಸಿನ ಮಕ್ಕಳಿಗೆ ಪಾಠ ಮಾಡುವ ಹೊರಜಿಲ್ಲೆಯ ಕಾಮುಕ ಅಧ್ಯಾ ಪಕನ ವಿರುದ್ಧ ಅದೇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಶಾಲೆಯ ಪ್ರಾಂಶು ಪಾಲರಿಗೆ ಲಿಖಿತ ದೂರು ನೀಡಿದ್ದರಿಂದ ಈತನ ಕೃಷ್ಣಲೀಲೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಸ್ಥಳೀಯರ ಮಾಹಿತಿ ಸಂಗ್ರಹಿಸಿದ್ದ ಪತ್ರಿಕೆ ವರದಿಯನ್ನು ಪ್ರಕಟಿಸಿತ್ತು. ಆದರೆ ನಂತರದ ದಿನಗಳಲ್ಲಿ ಕಾಮುಕ ಅಧ್ಯಾಪಕನ ವಿರುದ್ಧ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಸಂಚಾಲಕರು ಹಾಗೂ ಆಡಳಿತ ಮಂಡಳಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಉತ್ತೇಜನ ಪಡೆದಿರುವ ಅಧ್ಯಾಪಕ, ವಿದ್ಯಾರ್ಥಿನಿಯರ ಜೊತೆ ತನ್ನ ಕಾಮಪಾಠವನ್ನು ಮುಂದುವರಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಮದುವೆಯಾಗಿ ಮಕ್ಕಳನ್ನು ಹೊಂದಿರುವ ಚಪಲ ಚೆನ್ನಿಗರಾಯ ತಾನು ದಲಿತ ಸಮುದಾಯಕ್ಕೆ ಸೇರಿರುವವನು, ಹೀಗಾಗಿ ತನ್ನನ್ನು ಯಾರೇನೂ ಮಾಡಲು ಸಾಧ್ಯವಿಲ್ಲ ಎಂಬ ಅಹಂಕಾರದಿಂದ ಮೆರೆಯುತ್ತಿದ್ದು, ಯಾರಾದರೂ ತನ್ನ ವಿರುದ್ಧ ಮಾತೆತ್ತಿದರೆ ಸಾಕು, ಅವರನ್ನು ಜಾತಿ ನಿಂದನೆ ಕೇಸ್ ಹಾಕಿ ಜೈಲಿಗಟ್ಟುವುದಾಗಿ ಬೆದರಿಸಿ ಬಾಯಿ ಮುಚ್ಚಿಸುವ ಈತನಿಗೆ ಸ್ಥಳೀಯ ಪಂಚಾಯತ್ ಸದಸ್ಯರು ಹಾಗೂ ಕೆಲವು ಮರಿ ಪುಡಾರಿಗಳು ಬೆಂಬಲಕ್ಕೆ ನಿಂತಿದ್ದಾರೆ ಎಂದು ಆರೋಪಿಸುತ್ತಾರೆ ಜನರು.

ಕಾಮುಕ ಶಿಕ್ಷಕ ತನ್ನ ಶಾಲೆಗೆ ಬರುವ ಅಪ್ರಾಪ್ತ ಹೆಣ್ಣುಮಕ್ಕಳ ಬಳಿ ಅಸಭ್ಯವಾಗಿ ವರ್ತಿಸುತ್ತಿರುವ ಘಟನೆಗಳು ಈ ಹಿಂದೆಯೂ ನಡೆದಿತ್ತು. ಈತ ವಾಸವಿರುವ ಮನೆಯ ಸಮೀಪದಲ್ಲೇ ನೆಲೆಸಿರುವ ಅಪ್ರಾಪ್ತ ಬಾಲಕಿಯ ಮೇಲೆ ಕಣ್ಣು ಹಾಕಿದ್ದ ಕಾಮುಕ ಅಧ್ಯಾಪಕ ವರ್ಷದ ಹಿಂದೆ ಆಕೆ ಆರನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ಆಕೆಗೆ ಕಾಮಪಾಠ ಕಲಿಸಲು ಮುಂದಾಗಿದ್ದ. ಸಮಯ ಸಿಕ್ಕಿದಾಗಲೆಲ್ಲಾ ಆಕೆಯನ್ನು ಏಕಾಂತದಲ್ಲಿ ಸ್ಟಾಪ್‌ರೂಂಗೆ ಆಹ್ವಾನಿಸಿ ಮೈ-ಕೈ ಮುಟ್ಟಿ ಮಾತಾಡುತ್ತಿದ್ದ. ಇಷ್ಟು ಮಾತ್ರವಲ್ಲದೆ ತರಗತಿ ಕೋಣೆಯಲ್ಲಿ ಬಾಗಿಲು ಹಾಕಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ವಿದ್ಯಾರ್ಥಿನಿಯೇ ದೂರಿದ್ದಳು.

ಈತನ ಕಾಮಪಾಠಕ್ಕೆ ಬೆದರಿದ ವಿದ್ಯಾರ್ಥಿನಿ ಆರನೇ ತರಗತಿಯಲ್ಲಿ ವಾರ್ಷಿಕ ಪರೀಕ್ಷೆಗೆ ಇನ್ನೂ ನಾಲ್ಕು ತಿಂಗಳು ಇರುವಾಗಲೇ ಶಾಲೆಯನ್ನು ತೊರೆದು ಮನೆಯಲ್ಲಿ ಉಳಿದಿದ್ದಳು. ಕೊನೆಗೆ ಶಾಲೆಯ ಶಿಕ್ಷಕಿಯರು ಆಕೆಗೆ ಧೈರ್ಯ ತುಂಬಿ ಪರೀಕ್ಷೆ ಬರೆಯುವಂತೆ ಮಾಡಿ ಪಾಸ್ ಮಾಡಿದ್ದರು ಎನ್ನಲಾಗಿದೆ. ಆ ನಂತರ ವಿದ್ಯಾರ್ಥಿನಿ ಮತ್ತೆ ಏಳನೇ ತರಗತಿ ಕಲಿಯಲೆಂದು ಶಾಲೆಗೆ ಬರತೊಡಗಿದ್ದು, ಅಧ್ಯಾಪಕ ಮತ್ತೆ ಆಕೆಗೆ ಕಿರುಕುಳ ನೀಡತೊಡಗಿದ್ದ ಎನ್ನಲಾಗಿದೆ. ಇದರಿಂದ ಬೆದರಿದ ವಿದ್ಯಾರ್ಥಿನಿ ಒಂದೂವರೆ ತಿಂಗಳು ಮಾತ್ರ ಶಾಲೆಗೆ ಬಂದಿದ್ದು, ಆ ಬಳಿಕ ಮನೆಯಲ್ಲೇ ಉಳಿದಿದ್ದಳು. ಈ ಬಗ್ಗೆ ಶಾಲಾ ಶಿಕ್ಷಕಿಯರು ವಿದ್ಯಾರ್ಥಿನಿಯನ್ನು ಭೇಟಿಯಾಗಿ ಕಾರಣ ಕೇಳಿದ್ದ ವೇಳೆ ಶಿಕ್ಷಕರ ದುರ್ನಡತೆಯ ಬಗ್ಗೆ ಪತ್ರವನ್ನು ಬರೆದು ವಿವರಿಸಿದ್ದಳು.

ಸಾರ್ವಜನಿಕವಾಗಿ ಸುಭಗನಂತೆ ಪೋಸ್ ಕೊಡುವ ಕಾಮುಕ ಅಧ್ಯಾಪಕನ ಮೇಲೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಒಕ್ಕೊರಲ ಅಭಿಪ್ರಾಯ. ಶಾಲಾಡಳಿತ ಸಮಿತಿ ಈ ಬಗ್ಗೆ ಕ್ರಮ ಕೈಗೊಂಡು ಕಾಮುಕ ಶಿಕ್ಷಕನ ನಡವಳಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿರುವ ಸಾರ್ವಜನಿಕರು, ಪೊಲೀಸ್ ಇಲಾಖೆ ಈ ಬಗ್ಗೆ ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ. ಶಿಕ್ಷಕನ ಹದ್ದುಮೀರಿದ ವರ್ತನೆಗೆ ಸ್ಥಳೀಯ ಪುಡಾರಿಗಳೂ ಬೆಂಬಲ ನೀಡುತ್ತಾ ಬಂದರೆ ಬಹಿರಂಗ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಸ್ಥಳೀಯರು ನೀಡಿದ್ದಾರೆ.

ದಲಿತ ಸಂಘಟನೆ ಯಾಕೆ ಮೌನ?

ತೆಂಕ ಎಡಪದವು ಶಾಲಾ ಶಿಕ್ಷಕ ದಲಿತ ಸಮುದಾಯಕ್ಕೆ ಸೇರಿದವನು ಮತ್ತು ಈತನಿಂದ ಕಿರುಕುಳಕ್ಕೆ ಈಡಾಗಿರುವ ಅಪ್ರಾಪ್ತ ಬಾಲಕಿಯೂ ಅದೇ ಸಮುದಾಯಕ್ಕೆ ಸೇರಿದವಳು. ಈ ಬಗ್ಗೆ ಗಮನ ಹರಿಸಬೇಕಾದ ದಲಿತ ಸಂಘಟನೆಗಳು ಮೌನವಾಗಿರು ವುದೇಕೆ? ಎಂದು ಪ್ರಶ್ನಿಸುತ್ತಿದ್ದಾರೆ ಜನರು ದಲಿತರಿಗೆ ಶೋಷಣೆಯಾದಾಗ ಹೋರಾಡುತ್ತಾ ಬಂದಿರುವ ಸಂಘಟನೆ ಇದೀಗ ತಮ್ಮದೇ ಸಮುದಾಯದ ಒಬ್ಬ ಬಡ ಅಪ್ರಾಪ್ತೆಗೆ ಕಿರುಕುಳ ನೀಡುತ್ತಾ, ಆಕೆಯ ವಿದ್ಯಾಭ್ಯಾಸಕ್ಕೆ ತೊಡಕಾಗಿರುವ ಕಾಮುಕ ಶಿಕ್ಷಕನ ವಿರುದ್ಧ ಯಾಕೆ ಮಾತಾಡುತ್ತಿಲ್ಲ ಎಂಬ ಜನರ ಪ್ರಶ್ನೆಗೆ ಸಂಘಟನೆಗಳ ನಾಯಕರೇ ಉತ್ತರಿ ಸಬೇಕಿದೆ. ಪ್ರಕರಣವನ್ನು ರಾಜಕೀಯ ಪುಡಾರಿಗಳು ಮುಚ್ಚಿಹಾಕುವ ಮುನ್ನ ಎಚ್ಚೆತ್ತುಕೊಂಡು ಬಾಲಕಿಗೆ ನ್ಯಾಯ ಒದಗಿಸಿಕೊಡುವ ಮೂಲಕ ಕಾಮುಕ ಶಿಕ್ಷಕನಿಗೆ ಮನೆಯ ದಾರಿ ತೋರಿಸಬೇಕಾದುದು ಸಂಘಟನೆಗಳ ಕರ್ತವ್ಯವೂ ಆಗಿದೆ.

ಕಾಮುಕನ ರಕ್ಷಣೆಗೆ ಮರಿಪುಡಾರಿಗಳು!

ತೆಂಕಎಡಪದವು ಪ್ರಾಥಮಿಕ ಶಾಲಾ ಶಿಕ್ಷಕನ ಲೈಂಗಿಕ ಕಿರುಕುಳ ಪ್ರಕರಣ ಪತ್ರಿಕೆಯಲ್ಲಿ ಪ್ರಕಟವಾಗುತ್ತಲೇ ಇದಕ್ಕೆ ಶಾಲಾ ಮುಖ್ಯ ಶಿಕ್ಷಕಿಯೇ ಕಾರಣ ಎಂದು ಬೊಬ್ಬಿರಿಯತೊಡಗಿರುವ ಶಿಕ್ಷಕನಿಗೆ ಸ್ಥಳೀಯ ಮರಿ ಪುಡಾರಿಗಳು ಸಾಥ್ ನೀಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನರು ಚುನಾವಣೆಗಳಲ್ಲಿ ಆರಿಸಿ ಜನಸೇವೆ ಮಾಡಲೆಂದು ಕಳುಹಿಸಿರುವ ಜನಪ್ರತಿನಿಧಿಗಳು, ಸಂತ್ರಸ್ತ ಬಾಲಕಿಯ ಮನೆಗೆ ಹೋಗಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವುದೂ ಗುಟ್ಟಾಗಿ ಉಳಿದಿಲ್ಲ. ಶಾಲೆಗೆ ವರ್ಷದಲ್ಲಿ ಒಂದೂವರೆ ತಿಂಗಳು ಮಾತ್ರ ಬಂದು ಇದೀಗ ಶಿಕ್ಷಕನ ಕಿರುಕುಳಕ್ಕೆ ಬೆದರಿ ಮನೆಯಲ್ಲೇ ಬಾಕಿಯಾಗಿರುವ ಬಾಲಕಿಗೆ ನ್ಯಾಯ ದೊರಕಿಸಿಕೊಡುವ ಬದಲು ಕಾಮುಕ ಶಿಕ್ಷಕನಿಗೆ ಬೆಂಗಾವಲಾಗಿ ನಿಂತು, ವಿದ್ಯಾರ್ಥಿನಿಯನ್ನು ಪಾಸ್ ಮಾಡಿಸಲು ಹರಸಾಹಸ ಪಡುತ್ತಿರುವ ಇವರನ್ನು ಜನರೇ ಗಮನಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ಇವರ ಪೂರ್ವಾಪರ ಬಲ್ಲವರು. ತಮ್ಮ ವೈಯಕ್ತಿಕ ಚಾರಿತ್ರ್ಯದ ಬಗ್ಗೆ ಸಾರ್ವಜನಿಕ ವಲಯಲ್ಲಿ ಎಳ್ಳಷ್ಟೂ ಒಳ್ಳೆಯ ಅಭಿಪ್ರಾಯವನ್ನು ಉಳಿಸಿಕೊಳ್ಳದೆ ರಾಷ್ಟ್ರೀಯ ಪಕ್ಷವೊಂದರ ಅಡಿಯಲ್ಲಿ ಚುನಾವಣೆ ನಿಂತು ಗೆದ್ದಿರುವ ಪುಡಾರಿಗಳು ಇನ್ನಾದರೂ ಆತ್ಮವಿಮರ್ಶೆ ಮಾಡಿಕೊಂಡು ಕಾಮುಕ ಶಿಕ್ಷಕನಿಗೆ ಬೆಂಬಲ ನೀಡುವುದನ್ನು ಬಿಟ್ಟು ತಮ್ಮ ಮಾನ-ಮರ್ಯಾದೆಯನ್ನು ಉಳಿಸಿಕೊಳ್ಳುವತ್ತ ಗಮನಕೊಡಲಿ ಎನ್ನುವುದು ಇವರ ಸರ್ವಗುಣಗಳನ್ನೂ ಬಲ್ಲವರ ಅಭಿ ಪ್ರಾಯವಾಗಿದೆ.

ಉಲ್ಟಾ ಹೊಡೆದ ವಿದ್ಯಾರ್ಥಿನಿ!

ಶಾಲೆಯ ಶಿಕ್ಷಕನಿಂದ ಕಿರುಕುಳಕ್ಕೆ ತುತ್ತಾಗಿರುವ ಬಾಲಕಿ ಘಟನೆಯ ಬಗ್ಗೆ ನೊಂದು ಶಾಲಾ ಶಿಕ್ಷಕಿಯರಿಗೆ ಪತ್ರ ಮುಖೇನ ವಿವರಿಸಿರುವ ಘಟನೆ ಸುದ್ದಿ ಯಾಗುತ್ತಿರುವಂತೆಯೇ ಸಂತ್ರಸ್ತೆ ವಿದ್ಯಾ ರ್ಥಿನಿ ಉಲ್ಟಾ ಹೊಡೆದಿದ್ದಾಳೆ. ತನಗೆ ಆತ ಕಿರುಕುಳ ನೀಡಿಲ್ಲ, ತಾನು ಕಳೆದ ೧೧ ತಿಂಗ ಳಿನಿಂದ ಬೇಕೆಂದೇ ಶಾಲೆಯನ್ನು ಬಿಟ್ಟಿ ದ್ದೇನೆ. ಶಾಲೆಯ ಮುಖ್ಯ ಶಿಕ್ಷಕಿ ಗದರಿಸಿ ಪತ್ರ ಬರೆಸಿಕೊಂಡರು ಎನ್ನುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ಈ ಬಗ್ಗೆ ಪತ್ರಿಕೆ ಶಾಲಾ ಮುಖ್ಯ ಶಿಕ್ಷಕಿ ಫ್ಲಾಸಿ ಮೇರಿ ಡಿಸೋಜಾರನ್ನು ಸಂಪರ್ಕಿಸಿದಾಗ, ಬಾಲಕಿ ತನ್ನ ಕೈಯಾರೆ ಸಹ ಶಿಕ್ಷಕಿಯರ ಎದುರು ಪತ್ರ ಬರೆದುಕೊಟ್ಟಿದ್ದು ನಿಜ. ಈ ಬಗ್ಗೆ ಎಲ್ಲಿ ಬೇಕಾದರೂ ಸತ್ಯಪ್ರಮಾಣ ಮಾಡಲು ಸಿದ್ಧ ಎಂದಿದ್ದಾರೆ. ವಿದ್ಯಾರ್ಥಿನಿ ಈ ಬಗ್ಗೆ ಪದೇ, ಪದೇ ಹೇಳಿಕೆ ಬದಲಿಸುತ್ತಿರುವುದು ಶಿಕ್ಷಕ ಹಾಗೂ ಆತನ ಹಿಂದಿರುವವರ ಪರಿಶ್ರಮದ ಫಲ ಎನ್ನಲಾಗುತ್ತಿದೆ!

Advertisements