ತಿಂಗಳಾಗುವ ಮೊದಲೇ ಮುರಿದ ಮದುವೆ!

Posted on April 11, 2011

0


ಮಂಗಳೂರು: ಆಕೆ ಬಿಎಸ್‌ಡಬ್ಲ್ಯು ವಿದ್ಯಾರ್ಥಿನಿ. ಪದವಿಯ ಪ್ರಾಜೆಕ್ಟ್ ವರ್ಕ್‌ಗಾಗಿ ಆಕೆಗೊಬ್ಬ ಕ್ಯಾಮರಾ ಮ್ಯಾನ್ ಬೇಕಿತ್ತು. ಪುಟ್ಟ ಡಾಕ್ಯುಮೆಂಟರಿಗಾಗಿ ಆಕೆಗೊಬ್ಬ ಕ್ಯಾಮರಾಮ್ಯಾನ್ ಸಿಕ್ಕ. ಡಾಕ್ಯುಮೆಂಟರಿ ಪೂರ್ತಿ ಯಾಯಿತು. ಅಷ್ಟೊತ್ತಿಗೆ ಕ್ಯಾಮರಾಮ್ಯಾನ್ ಮತ್ತು ಆಕೆಯ ನಡುವೆ ಪ್ರೀತಿಯ ಮೊಳಕೆಯೊಡೆದಿತ್ತು.

ಕೆಲ ತಿಂಗಳ ಹಿಂದೆಯಷ್ಟೇ ಬೇರೆ ಯಾರನ್ನೋ ಪ್ರೀತಿ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಅಥವಾ ಆಕೆಯ ಹಿಂದೆ ಹುಡುಗನೊಬ್ಬ ಬಿದ್ದಿದ್ದ ಎಂಬ ಕಾರಣಕ್ಕೆ ಆಕೆಯ ಮನೆಯಲ್ಲಿ ಮದುವೆ ಮಾಡುವ ತೀರ್ಮಾನ ಮಾಡಲಾಗಿತ್ತು. ಕಾಲೇಜಿಗೆ ಹೋಗಿ ಪದವಿ ಪಡೆಯು ವುದಕ್ಕಿಂತಲೂ ಮನೆತನದ ಮರ‍್ಯಾದೆ ಮುಖ್ಯವಾಗಿತ್ತು. ಜೊತೆಗೆ ಆಕೆಯ ಬೆನ್ನಿಗೆ ಹುಟ್ಟಿದ ತಂಗಿಯಿದ್ದಳು. ಆಕೆಯ ಭವಿಷ್ಯವೂ ಮುಖ್ಯವಾಗಿತ್ತು.

ಈ ಎಲ್ಲದರ ನಡುವೆ ಆಕೆಗೆ ಡಾಕ್ಯುಮೆಂಟರಿ ಮಾಡುವ ನೆಪದಲ್ಲಿ ಕ್ಯಾಮರಾಮ್ಯಾನ್ ಗೆಳೆಯ ಸಿಕ್ಕಿದ್ದ. ವೇಗವಾಗಿ ಪ್ರೀತಿ ಹುಟ್ಟಿದ್ದಷ್ಟೇ ಮದುವೆಗೂ ಅವಸರ ಮಾಡಿದರು. ನಾನಿಲ್ಲದೆ ನೀನಿಲ್ಲ ಎನ್ನುತ್ತಿದ್ದ ಗೆಳೆಯನ ವಿರಹ ವೇದನೆ ನೋಡಲಾಗದೆ ಕೆಲ ಮಾಧ್ಯಮದ ಗೆಳೆಯರು ಸೇರಿಕೊಂಡು ಪ್ರೇಮಿಗಳನ್ನು ಒಂದು ಮಾಡಲು ನಿರ್ಧರಿಸಿದರು.

ಅಷ್ಟರಲ್ಲಾಗಲೇ ಮನೆಯವರಿಗೆ ಸುದ್ದಿ ಮುಟ್ಟಿತ್ತು. ಜಾತಿ ಬೇರೆ ಬೇರೆಯಾದರೂ ಪರವಾಗಿಲ್ಲ ಮದುವೆ ಮಾಡಿಕೊಡುತ್ತೇವೆ. ನಮ್ಮ ಹುಡುಗಿ ಅನಾಹುತ ಮಾಡುವುದೇನು ಬೇಡ ಎಂದು ತಾಯಿ ಕೈಮುಗಿ ದರು. ಮದುವೆಯ ವಯಸ್ಸೇನೂ ಆಗಿರಲಿಲ್ಲ, ಅವಸರವೂ ಬೇಡ. ಸ್ವಲ್ಪ ದಿನ ಕಾಯಿರಿ ಎಂದು ತಾಯಿ ಮಗಳಿಗೂ ಆಕೆಯ ಪ್ರಿಯಕರನಿಗೂ ಬುದ್ದಿ ಹೇಳಿದರು. ಆದರೆ ಕಾಯುವ ವ್ಯವಧಾನ ಪ್ರೇಮಿಗಳಿಗೆ ಇರಲಿಲ್ಲ. ಮಾಧ್ಯಮದ ಕೆಲ ಗೆಳೆಯರು ಪ್ರೇಮಿಗಳು ಅಗಲಿಕೆ ತಾಳಲಾರದೆ ಮದುವೆ ಮಾಡಿದರು. ಪ್ರಕರಣ ಠಾಣೆಯ ಮೆಟ್ಟಲು ಹತ್ತಿದಾಗಲೂ ಈ ಗೆಳೆಯರು ಪ್ರೇಮಿಗಳನ್ನು ಕೈ ಬಿಡಲಿಲ್ಲ. ಮದುವೆ ಏನೋ ನಡೆಯಿತು. ಇನ್ನೂ ಒಂದು ತಿಂಗಳಾಗಿಲ್ಲ. ಅಷ್ಟರಲ್ಲಾಗಲೇ ಹುಡುಗಿ ವಾಪಾಸು ಮನೆಗೆ ಬಂದು ಬಿಟ್ಟಿದ್ದಾಳೆ. ಅಮ್ಮನಲ್ಲಿ ‘ತನ್ನನ್ನು ಕ್ಷಮಿಸಿ, ನಾನು ತಪ್ಪು ಮಾಡಿಬಿಟ್ಟೆ ಎಂದಿದ್ದಾಳಂತೆ

ಆಕರ್ಷಣೆಯ ಪ್ರೀತಿ ತುಂಬಾ ಸಮಯ ಇರುವುದಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿ ಕೊಳ್ಳುವಷ್ಟರಲ್ಲೇ ದೂರವಾಗಿದ್ದಾರೆ. ಪ್ರೀತಿಸುವ ಮೊದಲು ನಾಳಿನ ಬದುಕಿನ ಬಗ್ಗೆ ಯೋಚಿಸದ ಪ್ರೇಮಿಗಳು ಮಾಡಿರುವ ತಪ್ಪನ್ನೇ ಅವರಿಗೆ ಮುತುವರ್ಜಿಯಿಂದ ಮದುವೆ ಮಾಡಿಸಿದವರೂ ಮಾಡಿದ್ದಾರೆ.

ಪ್ರೀತಿಗೆ ಬಿದ್ದವರು ಬದುಕಿನ ಕಟ್ಟ ಕಡೆಯ ತನಕ ಇರುತ್ತಾರಾ ಎನ್ನುವುದನ್ನು ಅರ್ಥ ಮಾಡಿಕೊಳ್ಳದೆ ಆದ ತಪ್ಪಿಗೆ ಕಂದಾಯ ಕಟ್ಟಬೇಕಾದವರು ಯಾರು ಎನ್ನುವುದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ.

Advertisements