ಉಪ್ಪಿನಂಗಡಿ: ನಾಪತ್ತೆಯಾದ ಮಗು ಪತ್ತೆ

Posted on April 11, 2011

0


ಮಂಗಳೂರು: ಜ್ಯೂಸ್ ಸೆಂಟರಿನಲ್ಲಿ ಜ್ಯೂಸ್ ಕುಡಿಯಲು ಹೋಗಿದ್ದ ಮಹಿಳೆಯ ನಾಲ್ಕರ ಹರೆಯದ ಮಗು ನಾಪತ್ತೆಯಾಗಿ ಆನಂತರ ಮಗು ತಾಯಿಗೆ ಸಿಕ್ಕಿ ಆತಂಕ ನಿವಾರಣೆಯಾದ ಘಟನೆ ಉಪ್ಪಿನಂಗಡಿ ಬಸ್‌ನಿಲ್ದಾಣದ ಬಳಿ ನಡೆದಿದೆ.

ಇಲ್ಲಿನ ನೆಲ್ಯಾಡಿ ಸಮೀಪದ ಕೋಲ್ಪೆ ನಿವಾಸಿಯ ಮಹಿಳೆಯೊಬ್ಬರು ತನ್ನ ನಾಲ್ಕರ ಹರೆಯದ ಮಗನ ಜೊತೆ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ತಂಪು ಪಾನೀಯ ಕುಡಿದು ಬಿಲ್ ಪಾವತಿಸುವ ಸಂದರ್ಭ ಹಠಾತ್ತನೇ ಮಗು ಕಾಣೆಯಾಗಿದೆ. ಇದರಿಂದ ಕಂಗಾಲಾದ ತಾಯಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿ ಬಳಿಕ ಅವರ ಸಹ ಕಾರದಲ್ಲಿ ಹುಡುಕಾಟ ನಡೆಸಿದರು. ಹುಡುಕಾಟಕ್ಕೆ ವೇಗ ಸಿಕ್ಕೊಡನೇ ಪುತ್ತೂರಿನಲ್ಲಿ ಬಸ್ಸೊಂದರಲ್ಲಿ ಮಗುವೊಂದು ಪತ್ತೆಯಾದ ಮಾಹಿತಿ ಲಭಿಸಿತು. ಉಪ್ಪಿನಂಗಡಿಯಲ್ಲಿ ನಾಪತ್ತೆಯಾದ ಮಗು ಅದೇ ಆಗಿತ್ತು. ಆದರೆ ನಡೆದ ಘಟನೆಯೆಂದರೆ ಮಗುವಿನ ತಾಯಿ ಜ್ಯೂಸ್‌ನ ಬಿಲ್ ಪಾವತಿ ಮಾಡುವ ಸಂದರ್ಭ ಇನ್ನೊಂದು ಮಹಿಳೆಯು ಸೆಂಟರಿನಿಂದ ನಿರ್ಗಮಿಸಿದ್ದಳು. ಇದನ್ನು ಕಂಡ ಮಗು ಇದುವೇ ತನ್ನ ತಾಯಿ ಎಂದು ಭ್ರಮಿಸಿ ಆಕೆಯೊಂದಿಗೆ ಹೆಜ್ಜೆ ಹಾಕಿದ್ದಾನೆ. ಆಕೆಯ ಜೊತೆಯೇ ಪುತ್ತೂರಿನ ಬಸ್‌ಗೆ ಏರಿದ್ದಾನೆ. ಆದರೆ ಬಸ್ ಪುತ್ತೂರು ತಲುಪಿದ್ದಂತೆ ಆಕೆಯ ಮುಖ ನೋಡಿದ ಮಗು ಇದು ತನ್ನ ತಾಯಿ ಅಲ್ಲ ಎಂದು ಗೊತ್ತಾಗಿ ಅಳಲು ಶುರುಮಾಡಿದೆ. ಈ ವೇಳೆ ಬಸ್‌ನ ನಿರ್ವಾಹಕರು ಅನಾಥ ಮಗುವಿನ ಬಗ್ಗೆ ತನ್ನ ಮೇಲಧಿಕಾರಿಗಳಿಗೆ ತಿಳಿಸಿ ಬಳಿಕ ಪುತ್ತೂರು ಪೊಲೀಸರ ವಶಕ್ಕೆ ನೀಡಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣೆಯಿಂದ ಪ್ರಸಾರವಾದ ಮಗು ಕಣ್ಮರೆ ವಿಚಾರ ಅರಿತ ಪುತ್ತೂರು ಪೊಲೀಸರು ಉಪ್ಪಿನಂಗಡಿ ಠಾಣೆಗೆ ಮಾಹಿತಿ ನೀಡಿ ಮಗುವಿನ ಹೆತ್ತವರನ್ನು ಕರೆಯಿಸಿ ಮಗುವನ್ನು ಅವರಿಗೆ ಒಪ್ಪಿಸಲಾಯಿತು.

ಕೊನೆಗೂ ಮಗುವಿನ ತಾಯಿ ಮಗು ದೊರಕಿದ ಖುಷಿಯಲ್ಲಿ ನೆಮ್ಮದಿಯ ಉಸಿರು ಬಿಟ್ಟರು. ಅಷ್ಟಾಗುವಾಗ ಈ ಸುದ್ದಿ ಕೊಯ್ಲ ದಾಟಿಯಾಗಿತ್ತು.

Advertisements
Posted in: Crime News