‘ಕಾಂಗ್ರೆಸ್ ಆಡಳಿತದಲ್ಲೇ ಬಾರ್‌ಗೆ ಲೈಸನ್ಸ್!’

Posted on April 7, 2011

0


ಮಂಗಳೂರು: ನಿಶಾಂತ್ ಬಾರ್‌ಗೆ ಪರವಾನಿಗೆ ನವೀಕರಣ ವಿಷಯದಲ್ಲಿ ಜಟಾಪಟಿಯಾಗಲೀ, ಲಾಬಿಯಾಗಲೀ ನಡೆಯುತ್ತಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಈ ಬಾರ್‌ಗೆ ಲೈಸನ್ಸ್ ನೀಡಲಾಗಿದೆ ಎಂದು ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷರು ಪತ್ರಿಕೆಗೆ ತಿಳಿಸಿದ್ದಾರೆ.

ನಿಶಾಂತ್ ಬಾರ್ ನವೀಕರಣ ಮಾಡಬಾರದೆಂದು ವೈಯಕ್ತಿಕ ದ್ವೇಷದ ರಾಜಕೀಯ ನಡೆಯುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಇದೇ ಬಾರ್ ಯುಬಿಎಂಸಿ ಶಾಲೆಯ ಪಕ್ಕದಲ್ಲೇ ಇತ್ತು. ಆಗ ತೊಂದರೆಯಾಗಿಲ್ಲವೇ ಎಂದು ಪ್ರಶ್ನಿಸಿರುವ ಮಹಾಬಲ ಸಾಲ್ಯಾನ್ ಈಗ ಬಾರನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಹೀಗೆ ಸ್ಥಳಾಂತರವಾದ ಸಂದರ್ಭದಲ್ಲಿ ಅಬಕಾರಿ ಆಯುಕ್ತರು ಖುದ್ದು ಬಂದು ಪರಿಶೀಲನೆ ನಡೆಸಿ ಬಾರ್ ಕಾನೂನು ಪ್ರಕಾರವೇ ಇದೆ ಎಂದು ಸ್ಪಷ್ಟ ಪಡಿಸಿ ಅನುಮತಿ ಕೊಟ್ಟಿದ್ದರು ಎಂದಿರುವ ಮಹಾಬಲ ಸಾಲ್ಯಾನ್ ಎಲ್ಲವನ್ನೂ ಸಾಮಾನ್ಯ ಸಭೆಯಲ್ಲಿ ಮುಂದಿಡುವುದಾದರೆ ಹಳೆಯಂಗಡಿಯಲ್ಲಿರುವ ಇತರ ಬಾರ್‌ಗಳ ಪರವಾನಿಗೆಯ ಬಗ್ಗೆಯೂ ಚರ್ಚೆ ನಡೆಸಬೇಕಾಗುತ್ತದೆ ಎಂದಿದ್ದಾರೆ.

ನಿಶಾಂತ್ ಬಾರ್ ನಿಯಮಾವಳಿ ಮೀರಿದೆಯೇ ಎಂದು ಪರೀಕ್ಷಿಸಲು ಜಿಲ್ಲಾ ಪಂಚಾಯತ್‌ನಿಂದ ಸರ್ವೇಕ್ಷಣೆ ನಡೆಸಲು ತಂಡವೂ ಬಂದಿತ್ತು. ಈ ತಂಡ ಬಾರ್ ಸ್ಥಾಪನೆಯಲ್ಲಿ ನಿಯಮಾವಳಿಯನ್ನು ಮುರಿದಿಲ್ಲ ಎಂದು ಸ್ಪಷ್ಟ ಪಡಿಸಿದೆ ಎಂದಿರುವ ಗ್ರಾ. ಪಂ ಅಧ್ಯಕ್ಷ ಕಾರ‍್ಯದರ್ಶಿ ಯಾವುದೇ ಮಾತುಕತೆ ನಡೆದಿಲ್ಲ. ನಿಶಾಂತ್ ಬಾರನ್ನು ನಿಲ್ಲಿಸಲು ಹರಸಾಹಸ ಪಡುತ್ತಿರುವ ಮಂದಿ ಹುಟ್ಟು ಹಾಕುತ್ತಿರುವ ಗೊಂದಲ ಇದಾಗಿದೆ ಎಂದು ಸಾಲ್ಯಾನ್ ಹೇಳಿದ್ದಾರೆ.

ನಿಶಾಂತ್ ಬಾರ್ ಬಗ್ಗೆ ಸಾರ್ವಜನಿಕರಿಂದ ನೈಜ ದೂರು ಬಂದಿಲ್ಲ. ತಳ್ಳಿ ಅರ್ಜಿಯನ್ನು ಯಾರೂ ಬೇಕಾದರೂ ಹಾಕಬಹುದು. ಬಾರ್ ಸ್ಥಾಪನೆ ಆರಂಭದಲ್ಲೇ ಸ್ಥಳೀಯ ಸಂಘಸಂಸ್ಥೆಗಳು ಹಾಗೂ ಶಾಲಾಡಳಿತ ತನ್ನ ಆಕ್ಷೇ ಪಣೆ ಏನಿಲ್ಲ ಎಂಬ ಲಿಖಿತ ಪತ್ರವನ್ನು ಪಂಚಾಯತ್‌ಗೆ ಕೊಟ್ಟಿದೆ. ಯಾರೋ ಅರ್ಜಿ ಕೊಟ್ಟರೆಂದು ಅನಾಮಧೇಯ ಪತ್ರವನ್ನು ಹಿಡಿದುಕೊಂಡು ಬಾರ್ ನಿಲ್ಲಿಸಿದರೆ ನಾಳೆ ಹೆಚ್ಚಿನ ಅಂಗಡಿ, ಬಾರ್, ಹೊಟೇಲ್‌ಗಳನ್ನು ಮುಚ್ಚಬೇಕಾದೀತು ಎಂದು ಪಂಚಾಯತ್ ಅಧ್ಯಕ್ಷರು ತಿಳಿಸಿದ್ದಾರೆ.

Advertisements