ವಿವಾದ ಸೃಷ್ಟಿಸಿದ ಕ್ರೈಸ್ತ ಹಾರ: ಊರಿಗೆ ತೆರಳು ತ್ತಿದ್ದ ಮಕ್ಕಳು ಸಿಡಬ್ಲ್ಯುಸಿ ವಶಕ್ಕೆ!

Posted on April 7, 2011

0


ಮಂಗಳೂರು: ಶಾಲೆಗೆ ರಜೆ ಸಿಕ್ಕಿದ ಖುಷಿಯಲ್ಲಿ ಊರಿಗೆ ತೆರಳಲು ಸಿದ್ಧವಾ ಗಿದ್ದ ಮಕ್ಕಳ ಕೊರಳಲ್ಲಿದ್ದ ಕ್ರೈಸ್ತರು ಧರಿ ಸುವ ಮಾಲೆಯನ್ನು ಕಂಡ ಬಜರಂಗ ದಳದ ಸದಸ್ಯರು ಮತಾಂತರ ನಡೆಸ ಲಾಗಿದೆ ಎಂದು ಆರೋಪಿಸಿದ ಕಾರಣ ಸೃಷ್ಟಿಯಾದ ವಿವಾದದ ಪರಿಣಾಮವಾಗಿ ಸ್ಥಳಕ್ಕೆ ಧಾವಿಸಿದ ಇಲಾಖೆ ಅಧಿಕಾರಿಗಳು ಮಕ್ಕಳನ್ನು ಸಿಡಬ್ಲ್ಯುಸಿ ವಶಕ್ಕೆ ಒಪ್ಪಿಸಲಾ ಗಿದ್ದು, ನಂತರ ಕುತ್ತಾರಿನಲ್ಲಿರುವ ಬಾಲ ಸಂರಕ್ಷಣಾ ಕೇಂದ್ರಕ್ಕೆ ಸೇರಿಸಲಾಗಿ ದೆಯೆಂದು ತಿಳಿದು ಬಂದಿದೆ.

ಮಂಗಳೂರಿನ ಬಿಜೈ ಆನೆಗುಂಡಿಯಲ್ಲಿ ಕಳೆದ ಎಂಟು ವರ್ಷಗಳಿಂದ ಕಾರ್ಪೊ ರೇಟರ್ ಲ್ಯಾನ್ಸ್‌ಲಾಟ್‌ಪಿಂಟೋ ಅವರ ಕುಟುಂಬಕ್ಕೆ ಸೇರಿದ ಆಶ್ರಯ ಎಂಬ ಹೆಸರಿನ ಅನಾಥಾಲಯ ಕಾರ್ಯಾಚರಿ ಸುತ್ತಿದ್ದು ಯೂತ್ ಸೋಶಿಯಲ್ ಸರ್ವೀಸ್ ಚಾರಿಟೇಬಲ್ ಟ್ರಸ್ಟ್ ಹೆಸರಲ್ಲಿ ಅನಾಥ ಮತ್ತು ಬಡ ಮಕ್ಕಳನ್ನು ಸ್ವೀಕರಿಸಿ ಅವರಿಗೆ ಉಚಿತ ವಿದ್ಯಾಭ್ಯಾಸ ನೀಡಲಾಗು ತ್ತಿದೆ. ಇಲ್ಲಿ ಮೂರರಿಂದ ಹತ್ತನೇ ತರಗತಿ ಮತ್ತು ಪಿಯುಸಿಯ ಇಬ್ಬರು ವಿದ್ಯಾರ್ಥಿ ನಿಯರು ಇದ್ದಾರೆ. ಹತ್ತನೇ ತರಗತಿ ಹೊರತುಪಡಿಸಿ ಇತರ ತರಗತಿಗಳ ಪರೀಕ್ಷೆ ಮುಗಿದಿದ್ದು ಪ್ರತೀ ವರ್ಷದಂತೆ ಈ ವರ್ಷವೂ ಮಕ್ಕಳು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಅದೇ ರೀತಿ ಬೀದರ್ ಜಿಲ್ಲೆಯ ರೋಮಾ, ಪ್ರಿಯಾಂಕ, ಶ್ವೇತಾ, ಶೃತಿ, ಕನಿಕರ, ಹನ್ನಾಳು, ಸುಸಾನ, ಸುವಾಸಿನಿ ಎಂಬ ಹೆಸರಿನ ಎಂಟು ಮಕ್ಕಳು ನಿನ್ನೆ ಅದೇ ಜಿಲ್ಲೆಯ ಅರ್ಜುನ್ ಎಂಬವರ ಜೊತೆ ಊರಿಗೆ ತೆರಳಲೆಂದು ಪಿವಿಎಸ್‌ನಲ್ಲಿರುವ ವಿಆರ್‌ಎಲ್ ಕಚೇರಿಗೆ ಬಂದಿದ್ದರು. ಈ ಸಂದರ್ಭ ಮಕ್ಕಳ ಕೊರಳಲ್ಲಿ ಕ್ರೈಸ್ತರು ಧರಿಸುವ ಮಣಿಯ ಮಾಲೆಯಿದ್ದು ಅದನ್ನು ಗಮನಿಸಿದ ಬಜರಂಗದಳದ ಸದಸ್ಯರು ಅರ್ಜುನ್ ಅವರಲ್ಲಿ ವಿಚಾರಿಸಿದ್ದರು. ಈ ಸಂದರ್ಭ ಅನಾಥಾಲಯದಲ್ಲಿದ್ದ ಮಕ್ಕಳ ಹೆತ್ತವರು ಇಲ್ಲಿಗೆ ಬರುವುದಾದರೆ ಸಾವಿರ ರೂ. ಖರ್ಚಾಗುತ್ತದೆ. ತಾನು ತನ್ನ ಮಗಳನ್ನು ಕರೆದೊಯ್ಯಲು ಬರುವ ವೇಳೆ ಇತರರನ್ನೂ ಕರೆತರುವಂತೆ ಪಾಲಕರು ತಿಳಿಸಿದ್ದ ಕಾರಣ ಅವರನ್ನು ಊರಿಗೆ ಕರೆದೊಯ್ಯುತ್ತಿದ್ದೇನೆ ಎಂದು ತಿಳಿಸಿದರು. ಆದರೆ ಇದರಿಂದ ಸಮಾಧಾನಗೊಳ್ಳದ ಬಜರಂಗದಳದ ಸದಸ್ಯರು ಅವರ ಬಗ್ಗೆ ವಿಚಾರಿಸಿದಾಗ ತಾನು ಮಾತ್ರವಲ್ಲದೆ ತನ್ನ ಕುಟುಂಬವೂ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದೆ ಎಂದು ಹೇಳಿದ್ದು ಬಜರಂಗಿಗಳ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿತ್ತು.

ಈ ವಿಷಯ ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೂ ತಲುಪಿತ್ತು. ಇದೇ ವೇಳೆ ಅನಾಥಾಲಯದ ವಾರ್ಡನ್ ಶೋಭಾ ದೇವಾಡಿಗ ಅವರು ಸ್ಥಳಕ್ಕೆ ಆಗಮಿಸಿದ್ದು ಆ ಸಂದರ್ಭ ಬಜರಂಗದಳದ ಸದಸ್ಯರು ನೀವೂ ಕೂಡ ಮತಾಂತರ ಆಗಿದ್ದೀರಾ ಎಂದು ಪ್ರಶ್ನಿಸಿದಾಗ, ಆಕ್ರೋಶಗೊಂಡ ವಾರ್ಡನ್ ನಾನು ಕಳೆದ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದು ಈಗಲೂ ಹಿಂದೂವಾಗಿಯೇ ಇದ್ದು ಎಲ್ಲಾ ಮಕ್ಕಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದೇನೆ. ನನ್ನ ಮೇಲೆಯೇ ಮತಾಂತರದ ಆರೋಪ ಹೊರಿಸಲು ನೀವ್ಯಾರು ಎಂದು ಮರು ಪ್ರಶ್ನೆ ಹಾಕಿದಾಗ ಅವರ ಮಧ್ಯೆ ವಾಗ್ವಾದವೂ ನಡೆಯಿತು. ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿ ಕಾರಿ ಸ್ಥಳಕ್ಕೆ ಬಂದು ಊರಿಗೆ ತೆರಳಬೇಕಿದ್ದ ಮಕ್ಕಳನ್ನುಮತ್ತೆ ಅನಾಥಾಲಯಕ್ಕೆ ಕರೆದೊಯ್ದು ವಿಚಾರಣೆ ನಡೆಸಿದರು. ಈ ಸಂದರ್ಭ ತಾವು ಒಂದೆರಡು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದು ಶಾಲೆಗೆ ಹೋಗುತ್ತಿದ್ದೇವೆ. ನಮ್ಮನ್ನು ಮನೆಯವರ ಜೊತೆ ಮಾತನಾಡಿ ಸ್ಥಳೀಯ ಚರ್ಚಿನ ಧರ್ಮಗುರು ಇಲ್ಲಿಗೆ ಕಳುಹಿಸಿದ್ದಾರೆ ಎಂದು ತಿಳಿಸಿದರು.

ಆದರೆ ಕಚೇರಿಯಲ್ಲಿ ಮಕ್ಕಳ ವಿವರವುಳ್ಳ ಸೂಕ್ತವಾದ ದಾಖಲೆಗಳು ಇರಲಿಲ್ಲ. ಅದನ್ನು ಟ್ರಸ್ಟಿಯೊಬ್ಬರು ಕಪಾಟಿನಲ್ಲಿಟ್ಟು ಹೋಗಿದ್ದಾರೆ. ನಾಳೆ ಬೆಳಿಗ್ಗೆ ಇಲಾಖೆಗೆ ತಲುಪಿಸುವುದಾಗಿ ಪಿಂಟೋ ಹೇಳಿದ್ದು, ಅಧಿಕಾರಿ ಒಪ್ಪಿದರೂ ಬಜರಂಗದಳದ ಸದಸ್ಯರು ದಾಖಲೆ ನೀಡದಿದ್ದರೆ ಪಿಂಟೋ ಅವರನ್ನು ಬಂಧಿಸುವಂತೆ ಪಟ್ಟು ಹಿಡಿದರು. ಪೊಲೀಸರು ವಿಚಾರಣೆಗಾಗಿ ಲ್ಯಾನ್ಸ್ ಲಾಟ್ ಪಿಂಟೋ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊನೆಗೆ ಎಸಿಪಿ ಗಡದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶಕುಂತಲಾ ಆಗಮಿಸಿದ್ದು ಪ್ರಕರಣವನ್ನು ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಗೆ ಹಸ್ತಾಂತರಿಸಲಾಯಿತು.

ಶಿಕ್ಷಣ, ಆಹಾರ ಮುಖ್ಯ ಗುರಿ: ಪಿಂಟೋ

ತಾನು ಮತ್ತು ಕುಟುಂಬಸ್ಥರು ಸೇರಿ ಎಂಟು ವರ್ಷಗಳ ಹಿಂದೆ ಅನಾಥಾಲಯವನ್ನು ತೆರೆದಿದ್ದೇವೆ. ಎಲ್ಲಾ ವರ್ಗದ ಬಡವರು ಮತ್ತು ಅನಾಥರಿಗೆ ಶಿಕ್ಷಣ ಮತ್ತು ಆಹಾರ ನೀಡುವುದೇ ಮೂಲ ಉದ್ದೇಶವಾಗಿದ್ದು, ಮೂರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ನೀಡಲಾಗುತ್ತದೆ. ಈಗಾಗಲೇ ಹಲವಾರು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಇಲ್ಲಿ ಹಿಂದೂ ಮತ್ತು ಕ್ರೈಸ್ತ ದೇವರ ಫೋಟೋಗಳಿದು, ಆಯಾಯ ಧರ್ಮಕ್ಕೆ ತಕ್ಕಂತೆ ಪ್ರಾರ್ಥಿಸುವ ಅವಕಾಶ ಕಲ್ಪಿಸಲಾಗಿದೆ. ಅದು ಬಿಟ್ಟರೆ ಯಾವುದೇ ಪ್ರಾರ್ಥನೆಗಳು ಇಲ್ಲಿ ನಡೆಯುತ್ತಿಲ್ಲ. ಮಕ್ಕಳು ಸೇರುವ ಸಂದರ್ಭ ಅವರ ಫೋಟೋವುಳ್ಳ ಅರ್ಜಿಯನ್ನೂ ಪಡೆಯಲಾಗುತ್ತದೆ. ಮಕ್ಕಳ ಪೋಷಕರು ಆಗಾಗ ಬಂದು ಹೋಗುತ್ತಾರೆ. ಇದೀಗ ಪರೀಕ್ಷೆ ಮುಗಿದ ಕಾರಣ ಮಕ್ಕಳನ್ನು ಕಳುಹಿಸಿಕೊಡುವಂತೆ ಪೋಷಕರು ಕರೆ ಮಾಡಿದ ಕಾರಣ ನಾನೇ ಬಸ್ಸಿಗೆ ಹಣ ನೀಡಿ ಕಳುಹಿಸಿದ್ದೆ ಎಂದು ಅನಾಥಾಲಯದ ಆಡಳಿತ ಟ್ರಸ್ಟಿ ಹಾಗೂ ಕಾರ್ಪೊರೇಟರ್ ಲ್ಯಾನ್ಸ್‌ಲಾಟ್‌ಪಿಂಟೋ ಪತ್ರಿಕೆಗೆ ತಿಳಿಸಿದ್ದಾರೆ.

Advertisements
Posted in: Crime News