ಪತ್ನಿಯ ಶವ ಮನೆಯಲ್ಲಿರಿಸಿ ನಾಮಪತ್ರ ಸಲ್ಲಿಸಿದ ಪತಿ!

Posted on April 7, 2011

0


ರಾಣಾಘಾಟ್: ಕಿಡ್ನಿ ವೈಫಲ್ಯದಿಂದ ಮೃತಪಟ್ಟ ಪತ್ನಿಯ ಹೆಣವನ್ನು ಮನೆಯಲ್ಲೇ ಇರಿಸಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿರುವ ಘಟನೆ ಪಶ್ಚಿಮ ಬಂಗಾಳದ ರಾಣಾಘಾಟ್ ನಲ್ಲಿ ನಡೆದಿರುವ ಬಗ್ಗೆ ತಿಳಿದುಬಂದಿದೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣವು ರಂಗೇರುತ್ತಿದ್ದು, ಇದು ಮಂಗಳವಾರ ನಡೆದ ಘಟನೆ. ರಾಣಾಘಾಟ್ ಮುನಿಸಿಪಾಲಿಟಿ ಅಧ್ಯಕ್ಷರೂ ಆಗಿರುವ, ನಾಡಿಯಾ ವಾಯುವ್ಯ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಪಾರ್ಥ ಸಾರಥಿ ಚಟರ್ಜಿ ಈ ಮಹಾನ್ ಕೆಲಸ ಮಾಡಿದವರು. ಅವರ ಪತ್ನಿ, ೫೦ರ ಹರೆಯದ ಸ್ಮೃತಿಕನಾ ಚಟರ್ಜಿ ಕಳೆದ ಎರಡು ವರ್ಷ ಗಳಿಂದ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು. ಮಂಗಳವಾರ ಬೆಳಗ್ಗೆ ಆಕೆಯ ದೇಹಸ್ಥಿತಿ ವಿಷಮಿಸಿದಾಗ, ಆಸ್ಪತ್ರೆಗೆ ಸೇರಿಸಲಾಯಿತಾದರೂ, ಬೆಳಗ್ಗೆಯೇ ಆಕೆಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಪತ್ನಿ ಸಾವನ್ನಪ್ಪಿರುವಾಗಲೇ ನಾಮಪತ್ರ ಸಲ್ಲಿಸಿರುವ ಬಗ್ಗೆ ಪಾರ್ಥಸಾರಥಿ ಸಮರ್ಥಿಸಿಕೊಳ್ಳುವುದು ಹೀಗೆ: ನಾನು ಯಾವತ್ತಿದ್ದರೂ ಜನರಿಗಾಗಿ ಕೆಲಸ ಮಾಡುವವ. ಅವರ ಮೇಲೆ ನನಗೆ ಜವಾಬ್ದಾರಿಯಿದೆ. ನಾಮಪತ್ರ ಸಲ್ಲಿಸಿದ ತಕ್ಷಣ ನೇರವಾಗಿ ಇಲ್ಲಿಂದ ಸ್ಮಶಾನಕ್ಕೆ ತೆರಳಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತೇನೆ. ಇನ್ನು ಮುಂದೆಯೂ ಜನ ರೊಂದಿಗೆ ಇರುತ್ತೇನೆ!

ಅಧಿಕಾರ ಎಂಬುದು ಮನುಷ್ಯನನ್ನು ಯಾವ ಹಂತಕ್ಕೆ ತಲುಪಿಸುತ್ತದೆ ಮತ್ತು ಒಮ್ಮೆ ಶಾಸಕ ಸ್ಥಾನ ಪಡೆಯುವುದು ಜೀವಮಾನವಿಡೀ ಸಾಕಾಗುವಷ್ಟು ದೊಡ್ಡ ಅದೃಷ್ಟವನ್ನು ತಂದುಕೊಡುತ್ತದೆಂಬ ನಂಬಿಕೆಗೆ ಇದೊಂದು ಉದಾಹರಣೆಯಷ್ಟೆ.

Advertisements
Posted in: National News