ಕೊಲೆಯತ್ನ ಆರೋಪಿಗೆ ಕಠಿಣ ಶಿಕ್ಷೆ

Posted on April 7, 2011

0


ಮಂಜೇಶ್ವರ: ಅಕ್ರಮವಾಗಿ ಹಿತ್ತಿಲಿಗೆ ನುಗ್ಗಿ ಕಾರ್ಮಿಕರ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ (ಪ್ರಥಮ) ಎರಡು ಸೆಕ್ಷನ್‌ಗಳಲ್ಲಿ ಒಟ್ಟು ೧೨ ವರ್ಷ ಕಠಿಣ ಸಜೆ ಮತ್ತು ೫೦೦೦ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಮಂಜೇಶ್ವರ ಪಾವೂರು ಮುಡಿ ಯ್ಯಾಕ್ ಸಕರಿಯಾ ಮಂಜಿಲ್‌ನ ಹಸನ್ ಕುಂಞ (೫೦)ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.

ಮಾರಕಾಯುಧದಿಂದ ಆಕ್ರಮಿಸಿ ಗಂಭೀರವಾಗಿ ಗಾಯಗೊಳಿಸಿದ ಆರೋಪದಲ್ಲಿ ಐದು ವರ್ಷ ಕಠಿಣ ಸಜೆ ಮತ್ತು ೨೦೦೦ ರೂ. ದಂಡ, ಅದು ಪಾವತಿಸದಿದ್ದಲ್ಲಿ ಆರು ತಿಂಗಳ ಹೆಚ್ಚುವರಿ ಸಜೆ ಮತ್ತು ಕೊಲೆ ಯತ್ನ ಆರೋಪದಂತೆ ಏಳು ವರ್ಷ ಕಠಿಣ ಸಜೆ ಮತ್ತು ೩೦೦೦ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಎರಡು ತಿಂಗಳ ಹೆಚ್ಚುವರಿ ಸಜೆ ಎಂಬಂತೆ ಆರೋಪಿಗೆ ಒಟ್ಟು ೧೩ ವರ್ಷ ಸಜೆ ಮತ್ತು ೫೦೦೦ ರೂ. ದಂಡ ವಿಧಿಸಲಾಗಿದೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

೨೦೦೪ ಡಿಸೆಂಬರ್ ೧೧ರಂದು ಪಾವೂರು ಮುಡಿಮಾರಿನ ಪಿ.ಕೆ. ಅಬೂಬಕ್ಕರ್ ಸಿದ್ದಿಕ್ ಎಂಬವರ ಹಿತ್ತಿಲಿನ ಮರದ ರೆಂಬೆಗಳನ್ನು ಕಡಿಯುವ ಕೆಲಸಕ್ಕಾಗಿ ಆಗಮಿಸಿದ ಕಾರ್ಮಿಕರಾದ ಬಂಟ್ವಾಳ ಕೈರಪದವು ಬಿಕಾ ಹೌಸಿನ ಬಿ. ದಾವೂದ್ (೩೮) ಮತ್ತು ಬೆಳ್ತಂಗಡಿ ಮುರುಗೋಳು ನಿವಾಸಿ ಲಿಂಗಪ್ಪ ಪೂಜಾರಿ (೬೦) ಎಂಬವರಿಗೆ ಕಡಿದು ಗಂಭೀರ ಗಾಯಗೊಳಿಸಲಾಗಿತ್ತು.

ಗಾಯಾಳುಗಳು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದರು. ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಪಾವೂರು ಅಬ್ದುಲ್ಲ (೩೬) ಮತ್ತು ಪಾವೂರು ಮುಡಿಮಾರಿನ ಸುಹರಾ (೩೬) ಎಂಬವರ ಮೇಲಿನ ಆರೋಪ ವಿಚಾರಣೆ ವೇಳೆ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿ ಬ್ಬರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಆಕ್ರಮಣದಲ್ಲಿ ಗಾಯಗೊಂಡ ಕಾರ್ಮಿಕರು ದುಡಿಯುತ್ತಿದ್ದ ಹಿತ್ತಲ ಮಾಲಕ ಮತ್ತು ಆರೋಪಿಗಳ ನಡುವಿನ ಆಸ್ತಿ ವಿವಾದವೇ ಆಕ್ರಮಣಕ್ಕೆ ಕಾರಣವೆಂದು ಮಂಜೇಶ್ವರ ಪೊಲೀ ಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

Advertisements
Posted in: Crime News