ಕಬ್ಬಿನಾಲೆಯಲ್ಲಿ ಪ್ರತ್ಯಕ್ಷವಾದ ನಕ್ಸಲರು!

Posted on April 7, 2011

0


ಮಂಗಳೂರು: ಹೆಬ್ರಿ ಸಮೀಪದ ಕಬ್ಬಿನಾಲೆ ಗ್ರಾಮದ ಮೆಲ್‌ಮದಿಪು ಎಂಬಲ್ಲಿನ ಮನೆಯೊಂದಕ್ಕೆ ಮಂಗಳವಾರ ರಾತ್ರಿ ನಕ್ಸಲರ ತಂಡ ಭೇಟಿ ಕೊಟ್ಟಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಉಡುಪಿ ಎಸ್‌ಪಿ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಂಬಿಂಗ್ ಬಿಗಿಗೊಳಿಸಿರುವುದಾಗಿ ತಿಳಿದುಬಂದಿದೆ. ಶಸ್ತ್ರಸಜ್ಜಿತ ನಕ್ಸಲರ ತಂಡದಲ್ಲಿ ಯುವತಿಯರೂ ಇದ್ದು, ಒಟ್ಟು ಎಂಟು ಮಂದಿ ಇದ್ದರು ಎನ್ನಲಾಗಿದೆ. ರಬ್ಬರ್ ತೋಟ ಹೊಂದಿರುವ ಮನೆಯಲ್ಲಿ ಕೆಲಸದಾಳು ಗಳು ಮಾತ್ರ ಇದ್ದು, ಹಣವಿಲ್ಲ ಎಂದಾಗ ತಂಡದಲ್ಲಿ ದ್ದವರು ಗದರಿಸಿದ್ದು, ಬಳಿಕ ಅವರನ್ನು ಮನೆಯಿಂದ ಹೊರಗೋಡಿಸಿ ಮನೆಯಲ್ಲಿ ಬೆಳಗ್ಗಿನ ತನಕ ಉಳಿದು ಆಹಾರ ತಯಾರಿಸಿ ಉಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಬ್ರಾಹ್ಮಣರ ತೋಟವನ್ನು ಕೇರಳದ ವ್ಯಕ್ತಿಯೊಬ್ಬರಿಗೆ ಮಾರಿದ್ದು. ಇಲ್ಲಿಗೆ ನಕ್ಸಲರು ಭೇಟಿ ನೀಡಿರುವುದು ಕುತೂಹಲ ಮತ್ತು ಸ್ಥಳೀಯರಲ್ಲಿ ಭಯಕ್ಕೆ ಕಾರಣವಾಗಿದೆ. ಗ್ರಾಮಸ್ಥರಲ್ಲಿ ವಿಚಾರಿಸಿದಾಗ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಮನೆಯ ಕೆಲಸದಾಳುಗಳು ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು, ಎಎನ್‌ಎಫ್ ಪಡೆ ಸ್ಥಳಕ್ಕೆ ಭೇಡಿ ನೀಡಿದ್ದು, ಹೆಬ್ರಿಯಲ್ಲಿ ಈ ಬಗ್ಗೆ ಸಭೆ ಕರೆದು ಚರ್ಚಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ತಂಡದಲ್ಲಿ ಮೂರು ಮಂದಿ ಯುವತಿಯರಿದ್ದು, ಕೆಲವು ದಿನಗಳ ಹಿಂದೆ ಇಲ್ಲಿಗೆ ಸಮೀಪದ ನಾಡ್ಪಾಲು, ತಿಂಗಳಮಕ್ಕಿ, ತೆಂಗಮಾರು, ಪೀತಬೈಲು ಪರಿಸರಕ್ಕೂ ಭೇಟಿ ನೀಡಿದೆ ಎಂಬ ಬಗ್ಗೆ ಮಾಹಿತಿ ದೊರೆತಿದೆ. ಪೊಲೀಸರು ನಕ್ಸಲ್ ಚಲನವನಲದ ಕುರಿತು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ. ತಂಡದಲ್ಲಿ ನಕ್ಸಲ್ ರಾಜ್ಯ ನಾಯಕ ಹೆಬ್ರಿ ಬಳೀಯ ಕೂಡ್ಲು ನಿವಾಸಿ ವಿಕ್ರಂ ಗೌಡ ಕೂಡಾ ತಂಡದಲ್ಲಿದ್ದ ಎಂದು ಹೇಳಲಾಗುತ್ತಿದೆ. ಕೆಲವು ಸಮಯದ ಹಿಂದೆ ಈತ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಎಂದು ನಂಬಲಾಗಿತ್ತು.

Advertisements