ಸೈನಿಕನ ಮೃತದೇಹಕ್ಕಾಗಿ ಕಾಯುತ್ತಿರುವ ಕುಟುಂಬ

Posted on April 6, 2011

0


ಮಂಗಳೂರು : ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಯುವಕನೊಬ್ಬ, ಸಿಕ್ಕಿಂನಲ್ಲಿ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದು ಕಳೆದ ನಾಲ್ಕು ದಿನಗಳಿಂದ ಮನೆಮಂದಿ ಶವಕ್ಕಾಗಿ ಕಾಯುತ್ತಿದ್ದಾರೆ.

ಮೂಲತಃ ಕೇರಳ ನಿವಾಸಿಯಾದರೂ ಕಳೆದ ಇಪ್ಪತ್ತು ವರುಷಗಳಿಂದ ಮಂಗಳೂರಿನಲ್ಲಿ ನೆಲೆಸಿರುವ ಗಿರೀಶ್ (೩೮) ಎಂಬವರೇ ಮೃತಪಟ್ಟವರಾಗಿದ್ದಾರೆ.

೧೭ ವರುಷಗಳ ಹಿಂದೆ ಮಿಲಿಟರಿ ಸೇರಿದ್ದ ಗಿರೀಶ್ ಪಂಜಾಬ್, ಜಮ್ಮು, ಸಹಿತ ದೇಶದ ನಾನಾ ಭಾಗದಲ್ಲಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಸಿಕ್ಕಿಂ ರಾಜ್ಯದಲ್ಲಿ ಕರ್ತವ್ಯದಲ್ಲಿದ್ದ ಗಿರೀಶ್ ಕಳೆದ ಶನಿವಾರ ರಾತ್ರಿ ಹೃದಯಾಘಾತಕ್ಕೀಡಾಗಿದ್ದರು ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಶನಿವಾರ ನಡೆದಿದ್ದ ಭಾರತ- ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯವನ್ನು ವೀಕ್ಷಿಸುತ್ತಿದ್ದ ಗಿರೀಶ್ ೮.೩೦ ಸುಮಾರಿಗೆ ರೂಮ್‌ನಿಂದ ಎದ್ದು ಹೊರ ಬಂದಿದ್ದರು. ಇವರು ಹೊರಗಿರಬೇಕು ಎಂದುಕೊಂಡಿದ್ದ ಸಹೊದ್ಯೋಗಿಗಳು ತಮ್ಮ ಪಾಡಿಗೆ ತಾವಿದ್ದರು ಆದರೆ ರಾತ್ರಿ ೧೧ ಗಂಟೆಗೆ ಕರ್ತವ್ಯದ ಹಿನ್ನೆಲೆಯಲ್ಲಿ ಸಹಿ ಹಾಕಲೂ ಗಿರೀಶ್ ಬರದ ಕಾರಣ ಶಂಕೆಗೊಂಡ ಸಹೊದ್ಯೋಗಿಗಳು ಇವರನ್ನು ಹುಡುಕಾಡಿದ್ದರು. ಆದರೂ ಗಿರೀಶ್ ಪತ್ತೆಯಾಗಿರಲಿಲ್ಲ. ಆ ಕೂಡಲೇ ಮನೆಗೆ ಕರೆ ಮಾಡಿ ನಾಪತ್ತೆ ವಿಚಾರವನ್ನು ಗಿರೀಶ್ ಮನೆಗೆ ತಿಳಿಸಿದ್ದರು. ಮುಂಜಾನೆಯಾದರೂ ಗಿರೀಶ್ ಬಾರದಾಗ ಮತ್ತಷ್ಟು ಹುಡುಕಾಟ ನಡೆಸಲಾಗಿದ್ದು ಈ ವೇಳೆ ತನ್ನ ರೂಮ್‌ನ ಹಿಂಭಾಗದಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಗಿರೀಶ್ ಪತ್ತೆಯಾಗಿದ್ದರು. ಶವ ಪರೀಕ್ಷೆ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಮಿಲಿಟರಿ ವೈದ್ಯರು ತಿಳಿಸಿದ್ದಾರೆ. ಸಿಕ್ಕಿಂನಲ್ಲಿ ಚಳಿ ಅಧಿಕವಾಗಿದ್ದು ಇದೇ ಹೃದಯಾಘಾತಕ್ಕೆ ಕಾರಣ ವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಗಿರೀಶ್ ಮೃತಪಟ್ಟು ನಾಲ್ಕು ದಿನ ಕಳೆದರೂ ಶವ ಇನ್ನೂ ಮನೆಗೆ ಬಂದಿಲ್ಲ ಇಂದು ಬರಬಹುದು ನಾಳೆ ಬರುಬಹುದು ಎಂದು ಮನೆಮಂದಿ ಅನ್ನ ನಿರು ಬಿಟ್ಟು ಕಾಯುತ್ತಲೇ ಇದ್ದಾರೆ. ಆದರೆ ಶವ ಇನ್ನೂ ಬಂದಿಲ್ಲ. ಮನೆಯಲ್ಲಿ ಜನ ತುಂಬಿರುವುದನ್ನು ನೋಡಿ ಗಿರೀಶ್ ಅವರ ಮಕ್ಕಳು ‘ಅಮ್ಮ ನಮ್ಮ ಮನೆಯಲ್ಲಿ ಜಾತ್ರೆ ಇದೆಯೇ ಯಾಕಿಷ್ಟು ಮಂದಿ ಸೇರಿದ್ದಾರೆ ಎಂದು ಕೇಳುತ್ತಿರುವುದು ಹೃದಯ ವಿದ್ರಾವಕವಾಗಿದೆ. ಗಿರೀಶ್ ಮೃತಪಟ್ಟಿರುವ ಸುದ್ದಿ ತಿಳಿದಿದ್ದರೂ ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಯಾರೂ ಗಿರೀಶ್ ಮನೆಯ ಹತ್ತಿರವೂ ಸುಳಿದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಗಿರೀಶ್ ಶವವನ್ನು ಕ್ಲಪ್ತವಾಗಿ ತರಿಸುವಲ್ಲಿ ಯಾರೂ ಶ್ರಮಿಸುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

ಕುಂಜತ್ತಬೈಲ್ ದೇವಿನಗರದಲ್ಲಿ ಸ್ವಂತ ಮನೆಯನ್ನು ಹೊಂದಿದ್ದರೂ ಮದುವೆಯಾಗಿ ಮಕ್ಕಳಾದ ಬಳಿಕ ಗಿರೀಶ್ ಹೆಂಡತಿ ಮನೆಯಲ್ಲೇ ಇದ್ದ ಕಾರಣ ಇಂದು ಗಿರೀಶ್ ಶವ ಕೃಷ್ಣಾಪುರದಲ್ಲಿರುವ ಅವರ ಹೆಂಡತಿ ಮನೆಗೆ ಬರಲಿದೆ ಎಂದು ತಿಳಿದು ಬಂದಿದೆ.

Advertisements