ಮನಪಾದಲ್ಲಿ ತೆರಿಗೆ ಗದ್ದಲ: ಕಾಂಗ್ರೆಸ್ ಪಟ್ಟು; ಮೇಯರ್ ತತ್ತರ

Posted on April 6, 2011

0


ಮಂಗಳೂರು: ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಏರಿಸುವುದಿಲ್ಲ ಎಂದು ಹಿಂದಿನ ಸಭೆಯಲ್ಲಿ ಹೇಳಿಕೆ ನೀಡಿದ್ದ ಮಾಜಿ ಮೇಯರ್ ರಜನಿ ದುಗ್ಗಣ್ಣ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಸದಸ್ಯರು ಏಕಪಕ್ಷೀಯವಾಗಿ ತೆರಿಗೆ ಏರಿಕೆ ಮಾಡಿದ್ದಕ್ಕೆ ಸ್ಪಷ್ಟ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದ ಕಾರಣ ಮೇಯರ್ ಅವರು ಅಕ್ಷರಶಃ ತತ್ತರಿಸಿದ ಘಟನೆ ಮನಪಾದಲ್ಲಿ ನಡೆದಿದೆ.

ನಿನ್ನೆ ಬಜೆಟ್ ಮಂಡನೆಗಾಗಿ ಸಭೆ ಕರೆಯಲಾಗಿತ್ತು. ಬಜೆಟ್ ಮಂಡನೆಯ ಬಳಿಕ ಕಾಂಗ್ರೆಸ್ ಸದಸ್ಯರು ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಆಡಳಿತಗಾರರು ಏಕಪಕ್ಷೀಯವಾಗಿ ಏರಿಸಿರುವ ವಿರುದ್ಧ ತಗಾದೆ ಎತ್ತಿದರು. ಈ ಸಂದರ್ಭ ಅವರಿಗೆ ಪಕ್ಷೇತರ ಸದಸ್ಯೆ ಮರಿಯಮ್ಮ ಥಾಮಸ್ ಮತ್ತು ಸಿಪಿಐಎಂ ಸದಸ್ಯೆ ಜಯಂತಿ ಶೆಟ್ಟಿ ಸಾಥ್ ನೀಡಿದರು. ತೆರಿಗೆ ಏರಿಕೆಯಿಂದ ಜನರಿಗೆ ತೊಂದರೆಯಾಗುತ್ತಿದ್ದು ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂದು ಹೇಳಿದ ವಿಪಕ್ಷ ನಾಯಕ ಲ್ಯಾನ್ಸ್‌ಲಾಟ್‌ಪಿಂಟೋ ಮೇಯರ್ ಅವರೇ ಸ್ಪಷ್ಟ ಉತ್ತರ ನೀಡಬೇಕು ಎಂದು ಪಟ್ಟುಹಿಡಿದರು.

ಇದಕ್ಕೆ ಧ್ವನಿಗೂಡಿಸಿದ ಶಶಿಧರ್ ಹೆಗ್ಡೆ ತಾವು ಆಡಳಿತದಲ್ಲಿದ್ದಾಗ ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿಗೆ ಬಂದಿದ್ದರೂ ಅದರ ಬಗ್ಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಂದಿಗೆ ಚರ್ಚಿಸಿ ತೆರಿಗೆಯನ್ನು ಜಾರಿಗೆ ತಂದಿರಲಿಲ್ಲ. ಈಗ ಬಿಜೆಪಿ ಆಡಳಿತಲ್ಲಿದ್ದು ಪಾಲಿಕೆ ಆಡಳಿತಗಾರರು ಆ ಕೆಲಸ ಮಾಡಬೇಕು ಎಂದು ನೆನಪಿಸಿದರು. ಈ ಸಂದರ್ಭ ತಮ್ಮ ಪಕ್ಷ ಮಾಡಿದ ಘನಂಧಾರಿ ಕೆಲಸವನ್ನು ಮರೆಮಾಚಲು ಯತ್ನಿಸಿದ ಮಾಜಿ ಮೇಯರ್ ಶಂಕರ್ ಭಟ್ ಕಾಂಗ್ರೆಸ್ ಆಡಳಿತದಲ್ಲಿ ಜನರ ಮೇಲೆ ತೆರಿಗೆ ಹೇರದ ಕಾರಣ ನಗರ ಅಭಿವೃದ್ಧಿ ಆಗಿಲ್ಲ. ಅಲ್ಲದೆ ಕಳೆದ ಏಳು ವರ್ಷಗಳಲ್ಲಿ ಸುಮಾರು ೮೦ ಕೋಟಿ ಹಣವನ್ನು ಎಡಿಬಿಗೆ ಕಟ್ಟಲಾಗಿದ್ದು ಇದಕ್ಕೆ ಕಾಂಗ್ರೆಸ್ ಕಾರಣ. ಈಗಿನ ಸರಕಾರ ನೂರು ಕೋಟಿ ಅನುದಾನವನ್ನು ನೀಡುತ್ತಿದ್ದು ತೆರಿಗೆ ಏರಿಸದಿದ್ದರೆ ಅನುದಾನ ಕೇಳುವುದಾದರೂ ಹೇಗೆ ಎಂದು ಪ್ರಶ್ನಿಸಿದಾಗ, ಬಿಜೆಪಿ ಸದಸ್ಯ ಜೇಮ್ಸ್ ಡಿಸೋಜ ಒಗ್ಗರಣೆ ಹಾಕಿದರು.

ಇದರಿಂದಾಗಿ ವಿಪಕ್ಷ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಬಿಸಿಬಿಸಿ ಚರ್ಚೆಯೂ ನಡೆಯಿತು. ಆದರೂ ಪಟ್ಟು ಸಡಿಲಿಸದ ಕಾಂಗ್ರೆಸ್ ಮೇಯರ್ ಅವರೇ ಸ್ಪಷ್ಟ ಉತ್ತರ ನೀಡಲಿ. ಏಕೆಂದರೆ ಈ ವಿಷಯದಲ್ಲಿ ಮೇಯರ್ ಅವರನ್ನು ಬಲಿಪಶು ಮಾಡಿರಬಹುದು ಎಂದು ಕಟಕಿಯಾಡಿದರು. ಇದರಿಂದ ಕಂಗಾಲಾದ ಆಡಳಿತ ಪಕ್ಷದ ಸದಸ್ಯರು ಕಮೀಷನರ್ ಉತ್ತರಿಸಲಿ ಎಂದಾಗ ಪತ್ರಿಕೆಗಳಿಗೆ ಮೇಯರ್ ಅವರು ಹೇಳಿಕೆ ನೀಡಿದ್ದು ಅವರೇ ಉತ್ತರಿಸಲಿ ಎಂದು ಕಾಂಗ್ರೆಸ್ ಸದಸ್ಯರು ತಿರುಗೇಟು ನೀಡಿದರು. ತಾನೇ ಉತ್ತರಿಸಬೇಕಾದ ಅನಿವಾರ್ಯತೆ ಬಂದಾಗ ಕಮೀಷನರ್ ಜೊತೆ ಸುಮಾರು ಹತ್ತು ನಿಮಿಷ ಚರ್ಚಿಸಿದ ಮೇಯರ್ ತೆರಿಗೆ ಏರಿಕೆ ಅನಿವಾರ್ಯ ಎಂದು ಹೇಳಿದ್ದು ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಸದನದಿಂದ ಹೊರನಡೆದರು.

ಎಪ್ರಿಲ್‌ನಲ್ಲಿ ಬಜೆಟ್ !

ಸ್ಥಳೀಯಾಡಳಿತಗಳು ವರ್ಷದ ಬಜೆಟ್ಟನ್ನು ಜನವರಿ ಅಥವಾ ಫೆಬ್ರವರಿಯಲ್ಲಿ ಮಂಡಿಸಿ ಸರಕಾರಕ್ಕೆ ಸಲ್ಲಿಸುತ್ತದೆ. ಆದರೆ ಮನಪಾ ಆಡಳಿತಗಾರರು ನಿನ್ನೆ ಬಜೆಟ್ ಮಂಡಿಸಿದ್ದು ಇದರಲ್ಲಿ ಅಭಿವೃದ್ಧಿಯ ಮಂತ್ರವನ್ನು ಜಪಿಸಿ ಬೀಗಿದೆ. ಆದರೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಜೆಟ್ ಮುಗಿದಿದ್ದು ಪಾಲಿಕೆಯ ಬಜೆಟ್‌ನಿಂದ ಯಾವುದೇ ಪ್ರಯೋಜನವೂ ಇಲ್ಲದ ಕಾರಣ ಇದು ಕೇವಲ ಹೆಸರಿಗೆ ಎನ್ನುವಂತಾಗಿದೆ. ಇದರ ಬಗ್ಗೆಯೂ ವಿಪಕ್ಷ ಸದಸ್ಯರು ಆಡಳಿತಗಾರರನ್ನು ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲದೆ ಕಾಂಗ್ರೆಸ್ ಸದಸ್ಯರು ಸಭೆಗೆ ಆಗಮಿಸುವಾಗ ಕಪ್ಪು ಪಟ್ಟಿ ಧರಿಸಿದ್ದರೆ, ಮರಿಯಮ್ಮ ಅವರೂ ಕಾಂಗ್ರೆಸ್ ಸದಸ್ಯರ ಕ್ರಮವನ್ನು ಅನುಸರಿಸಿದ್ದು ಕಂಡು ಬಂತು. ಸ್ವಯಂಘೋಷಿತ ಆಸ್ತಿ ತೆರಿಗೆ ಏರಿಕೆಯ ವಿರುದ್ಧದ ಪ್ರತಿಭಟನೆಯಾಗಿ ಕಪ್ಪುಪಟ್ಟಿ ಮೂಡಿ ಬಂತು.

Advertisements