ಅಕ್ರಮ ಮರಳು ಅಡ್ಡೆಗೆ ಡಿ.ಸಿ. ದಾಳಿ

Posted on April 6, 2011

0


ಮಂಗಳೂರು: ಹಲವು ವರ್ಷಗಳಿಂದ ಅಧಿಕಾರಿಗಳು ಮತ್ತು ಕೆಲವು ಪೊಲೀಸರನ್ನು ಬಳಸಿಕೊಂಡು ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಹರೇಕಳ ನದಿ ತೀರಕ್ಕೆ ನಿನ್ನೆ ಸ್ವತಃ ಜಿಲ್ಲಾಧಿಕಾರಿಯವರೇ ದಾಳಿ ನಡೆಸಿದ್ದಾರೆ.

ಹರೇಕಳದಲ್ಲಿ ಕೆಲವು ವರ್ಷಗಳ ಹಿಂದೆ ಮರಳುಗಾರಿಕೆ ಆರಂ ಭಿಸಲಾಗಿತ್ತು. ಇದರಿಂದಾಗಿ ಸ್ಥಳೀಯರ ಕೃಷಿ ಭೂಮಿ ನದಿ ಪಾಲಾಗಿದ್ದಲ್ಲದೆ, ಮರಳು ಲಾರಿಗಳ ಅರ್ಭಟಕ್ಕೆ ಸಾರ್ವಜನಿಕರೂ ತೊಂದರೆ ಅನುಭವಿಸಿದ್ದರು. ಇದರ ವಿರುದ್ಧ ಈಗಾಗಲೇ ಸ್ಥಳೀಯರು ಪ್ರತಿಭಟನೆಗಳನ್ನು ನಡೆಸಿ ಹಿಂದಿನ ಜಿಲ್ಲಾಧಿಕಾರಿಯವರಿಗೂ, ಪೊಲೀಸ್ ಮತ್ತು ಗಣಿ ಇಲಾಖೆಗೂ ಮನವಿ ಸಲ್ಲಿಸಿದ್ದರು. ಆದರೂ ಇದು ಯಾವುದೇ ರೀತಿಯ ಪರಿಣಾಮವನ್ನೂ ಉಂಟು ಮಾಡಿರಲಿಲ್ಲ.

ಏಕೆಂದರೆ ಇಲ್ಲಿ ಮರಳುಗಾರಿಕೆಯಲ್ಲಿ ನಿರತರಾಗಿದ್ದವರು ಹೆಚ್ಚು-ಕಮ್ಮಿ ಬಿ.ಜೆ.ಪಿ.ಯವರೇ ಆಗಿದ್ದರು. ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಕಡಿವಾಣ ಹಾಕಲು ಜಿ.ಪಿ.ಎಸ್. ಪದ್ದತಿ ಜಾರಿಗೆ ತಂದ ಬಳಿಕ ಇಲ್ಲಿ ಅದೇ ಹೆಸರಲ್ಲಿ ಮರಳುಗಾರಿಕೆ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಕಣ್ಮುಚ್ಚಿ ಕುಳಿತಿದ್ದವು. ಆದರೆ ಇತ್ತೀಚೆಗೆ ಸರಕಾರ ಏಕರೂಪ ಮರಳು ನೀತಿಯನ್ನು ಜಾರಿಗೆ ತಂದ ಬಳಿಕವೂ ಹರೇಕಳದಲ್ಲಿ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿತ್ತು. ಇದರ ಬಗ್ಗೆ ಅರಿತ ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ನಿನ್ನೆ ಎಸಿ ಪ್ರಭುಲಿಂಗ ಕಾವಳಿಕಟ್ಟೆ, ಕಮೀಷನರ್ ಸೀಮಂತ್ ಕುಮಾರ್ ಮತ್ತಿತರ ಅಧಿಕಾರಿಗಳ ಜೊತೆ ಹರೇಕಳಕ್ಕೆ ಧಾವಿಸಿದ್ದರು. ಇದೇ ವೇಳೆ ಮರಳು ಸಾಗಿಸುತ್ತಿದ್ದ ಒಂಬತ್ತು ಲಾರಿಗಳನ್ನು, ಒಂದು ಬೈಕ್ ಮತ್ತು ಅದರ ಚಾಲಕರನ್ನು ವಶಕ್ಕೆ ತೆಗೆದುಕೊಂಡಿದ್ದು, ಸಂಜೆ ವೇಳೆ ಧಕ್ಕೆಗಳನ್ನು ನಾಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Advertisements