ಉಪಚುನಾವಣೆ: ಬಿಜೆಪಿ ಭಿನ್ನರ ಕಾಟಾಚಾರದ ಪ್ರಚಾರ

Posted on April 2, 2011

0


ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಪಕ್ಷದಲ್ಲಿ ಬಂಡಾಯ ಎದ್ದಿರುವ ಮುಖಂಡರುಗಳು ಉಪಚುನಾವಣೆ ಯಲ್ಲೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಕೆಲವು ಸಚಿವರು ಸೇರಿದಂತೆ ಮುಖಂಡರುಗಳು ಉಪಚುನಾವಣೆಯನ್ನು ಕಾಟಾಚಾರಕ್ಕೆ ತೆಗೆದುಕೊಂಡಂತಿದೆ.

ಉಪಚುನಾವಣೆಯಲ್ಲಿ ಗೆದ್ದರೆ ಯಡಿಯೂರಪ್ಪ ಬಲಿಷ್ಠ ಗೊಳ್ಳುತ್ತಾರೆ. ಅಲ್ಲದೆ ಸರಕಾರ ಮತ್ತು ಪಕ್ಷದಲ್ಲಿ ಮತ್ತಷ್ಟು ಬಿಗಿಯಾಗುತ್ತಾರೆ ಎಂಬ ಹಿನ್ನಲೆಯಲ್ಲಿ ಮುಖ್ಯಮಂತ್ರಿಯವರಿಗೆ ಮುಖಭಂಗ ಉಂಟುಮಾಡಲು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ದ ಕೆಲಸ ಮಾಡುತ್ತಿದ್ದಾರೆ. ಪಕ್ಷ ವಹಿಸಿರುವ ಹೊಣೆಗಾರಿಕೆಯಿಂದ ದೂರ ಉಳಿದು ಸಹಕಾರ ನೀಡುತ್ತಿಲ್ಲ. ಮುಖ್ಯ ಮಂತ್ರಿಯವರ ಆಪ್ತ ಸಚಿವರು ಮುಖಂಡರುಗಳು ಮಾತ್ರ ಅಭ್ಯರ್ಥಿಗಳ ಗೆಲುವಿಗೆ ಹೋರಾಟ ನಡೆಸಿದ್ದಾರೆ.

ಆದರೆ ವಿರೋಧಿ ಬಣದವರು ಪ್ರತಿಪಕ್ಷದ ಅಭ್ಯರ್ಥಿಗಳಿಗೆ ಸಹಕಾರಿಯಾಗುವಂತೆ ನಡೆದು ಕೊಳ್ಳುತ್ತಿರುವುದಲ್ಲದೆ ಅವರ ಅಭ್ಯರ್ಥಿಗಳಿಗೆ ಪರೋಕ್ಷವಾಗಿ ಸಂಪನ್ಮೂಲವನ್ನು ಒದಗಿಸಿದ್ದಾರೆ. ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಅನಂತಕುಮಾರ್ ಉಪಚುನಾವಣೆ ಯತ್ತ ಗಮನವೇ ಹರಿಸಿಲ್ಲ.

ರಾಜ್ಯಾಧ್ಯಕ್ಷ ಈಶ್ವರಪ್ಪ ನಿನ್ನೆಯಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅದು ಕೇವಲ ಬಹಿರಂಗ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಇನ್ನುಳಿದಂತೆ ಸಚಿವರಾದ ಜಗದೀಶ್ ಶೆಟ್ಟರ್, ಅಶೋಕ್ ಸೇರಿದಂತೆ ಬಹುತೇಕ ಸಚಿವರು ಚುನಾವಣಾ ಕ್ಷೇತ್ರಗಳತ್ತ ತೆರಳಿ ಸುತ್ತಾಡಿ ಬರುತ್ತಿದ್ದಾರೆ. ಆದರೆ ಮನಪೂರ್ವಕವಾಗಿ ಪಕ್ಷಕ್ಕೆ ಮತಯಾಚಿಸುತ್ತಿಲ್ಲ.

ಇದು ಮುಖ್ಯಮಂತ್ರಿಯವರಿಗೂ ತಿಳಿದಿದೆ. ಹೀಗಾಗಿ ತಮ್ಮ ಬೆಂಬಲಿಗರ ಮೂಲಕ ಈ ಕ್ಷೇತ್ರಗಳನ್ನು ಕಸಿಯಲು ಭಾರೀ ಪ್ರಯತ್ನ ಮಾಡಿದ್ದಾರೆ.

Posted in: State News