ಮೇಯರ್ ಅವರ ಅಧಿಕಾರ ದುರ್ಬಳಕೆಯಾಗುತ್ತಿದೆಯೇ?

Posted on April 2, 2011

0


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಪ್ರಮಾಣವನ್ನು ಎ.೧ರಿಂದಲೇ ಜಾರಿಗೆ ಬರುವಂತೆ ಶೇ.೧೫ರಷ್ಟು ಹೆಚ್ಚಿಸಲಾಗಿದೆ. ಇದು ಸಾಲದು ಎಂಬಂತೆ ಘನ ತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ತೆರಿಗೆ ವಿಧಿಸುವುದಾಗಿಯೂ ಮೇಯರ್ ಪ್ರವೀಣ್ ಹೇಳಿದ್ದಾರೆ. ತೆರಿಗೆ ಹೆಚ್ಚಿಸುವ ಅಧಿಕಾರ ಕಾನೂನುದತ್ತ ವಾಗಿ ತಮಗಿದೆ ಎಂದು ಇದಕ್ಕೆ ಸಮರ್ಥನೆಯನ್ನೂ ಅವರು ನೀಡಿದ್ದಾರೆ.

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ ಪಾಲಿಕೆಯಲ್ಲಿ ಅಧಿಕಾರ ನಡೆಸುತ್ತಿರುವವರು ಮತ್ತೊಂದಿಷ್ಟು ತೆರಿಗೆ ಹೊರೆಯನ್ನು ಹಾಕುತ್ತಿದ್ದಾರೆ. ಎಪ್ರಿಲ್ ಒಂದರಿಂದ ಜಾರಿಯಾಗುವ ಹೊರೆಯ ವಿಷಯವನ್ನು ಮೇಯರ್ ಪ್ರವೀಣ್ ತಿಳಿಸಿದ್ದು ಮಾ.೩೧ರ ಸಂಜೆಗೆ. ಅಂದರೆ ಇಷ್ಟು ಗಡಿಬಿಡಿಯಲ್ಲಿ ತೆರಿಗೆ ಏರಿಸುವ ನಿರ್ಧಾರ ಕೈಗೊಳ್ಳಲಾಯಿತೇ? ಅಥವಾ ಪ್ರವೀಣರನ್ನು ಇದಕ್ಕಾಗಿ ಬಳಸಿ ಕೊಳ್ಳಲಾಯಿತೆ?

ಇಲ್ಲಿ ಎರಡನೆ ಪ್ರಶ್ನೆಗೆ ಉತ್ತರ ಸಿಗುತ್ತಿದೆ. ತೆರಿಗೆ ಹೆಚ್ಚಿಸುವ ನಿರ್ಧಾರವನ್ನು ಹಿಂದಿನ ಮೇಯರ್ ಅವಧಿಯಲ್ಲಿಯೇ ಕೈಗೊಳ್ಳಲಾಗಿತ್ತು. ಆದರೆ ರಜನಿ ದುಗ್ಗಣ್ಣ ತಮ್ಮ ಅವಧಿಯಲ್ಲಿ ತೆರಿಗೆ ಹೆಚ್ಚಿಸುವ ಕಳಂಕ ಹೊತ್ತುಕೊಳ್ಳಲು ಸಿದ್ಧರಿರಲಿಲ್ಲ. ಇದೀಗ ಅದು ಪ್ರವೀಣರ ಪಾಲಾಗಿದೆ ಎನ್ನಲಾಗುತ್ತಿದೆ. ಇದು ಮಾತ್ರವಲ್ಲ ಜನರಿಗೆ ಹೊರೆಯಾಗಬಹುದಾದ ಇಂತಹ ಹಲವು ನಿರ್ಧಾರಗಳು ಪ್ರವೀಣರ ಅವಧಿಯಲ್ಲಿಯೇ ಪ್ರಕಟಗೊಂಡರೆ ಅದರಲ್ಲಿ ಅಚ್ಚರಿ ಪಡುವಂತ ಹದ್ದೇನೂ ಇಲ್ಲ ಎಂದು ಬಿಜೆಪಿಯ ನಾಯಕರೇ ಹೇಳುತ್ತಿದ್ದಾರೆ. ಪ್ರವೀಣರ ರಾಜಕೀಯ ದೌರ್ಬಲ್ಯದ ಲಾಭ ಪಡೆಯಲು ಮನಪಾದ ಅಧಿಕಾರಿ ವರ್ಗ ಪ್ರಯತ್ನಿಸುತ್ತಿದೆ.

Advertisements