ಮಾಜಿ ಮೇಯರ್ ಶಂಕರ್‌ಭಟ್ ಅತ್ತೆ ಈಗ ಬೀದಿಪಾಲು!

Posted on April 2, 2011

0


ಮಕ್ಕಳು ಡಾಕ್ಟರು, ಮೊಮ್ಮಗ ಐಪಿಎಸ್ ಆದರೆ ಜನ್ಮದಾತೆ ಮಾತ್ರ ಭಿಕ್ಷುಕಿ

ಮಂಗಳೂರು: ಒಂದು ಕಾಲದಲ್ಲಿ ತನ್ನ ಎಂಟು ಮಂದಿ ಮಕ್ಕಳಿಗಾಗಿ ಹಗಲಿರುಳು ದುಡಿದು ಅವರನ್ನು ಡಾಕ್ಟರ್ ಹಾಗೂ ಉದ್ಯಮಪತಿಗಳನ್ನಾಗಿ ರೂಪಿ ಸಿದ ಮಹಾತಾಯಿಯೊಬ್ಬಳು ಈಗ ತಾನು ಬದುಕಲು ಭಿಕ್ಷೆ ಎತ್ತುತ್ತಿರುವ ಹೃದಯವಿದ್ರಾವಕ ಕಥೆಯಿದು.

ಕಳೆದ ಮೂರು ವರುಷದಿಂದ ಮೈಸೂರಿನ ಅನಾಥಾಶ್ರಮದಲ್ಲಿದ್ದು ಬಳಿಕ ಅಲ್ಲಿಂದಲೂ ದೂರವಾಗಿ ಅವರಿವರ ಸಹಕಾರದಿಂದ ಆಸ್ಪತ್ರೆ ಸೇರಿರುವ ಈ ನತದೃಷ್ಟತಾಯಿ ಮಾಧ್ಯಮದೆದುರು ತನ್ನ ಕರುಣಾಜನಕ ಕಥೆಯನ್ನು ಹೇಳಿದಾಗ ಶ್ರೀಮಂತ ಮನೆತನದ ಹೃದಯಹೀನತೆ ಬೆಳಕಿಗೆ ಬಂತು.

ಇದು ಅವರಿವರ ಮನೆಯ ಕಥೆ ಯಲ್ಲ, ಸಮಾಜದ ರೋಗ ನಿವಾರಣೆ ಮಾಡುವ, ಊರಿಗೆ ಉಪಕಾರ ಮಾಡ ಹೊರಟಿರುವ ಸಾಮಾಜಿಕ ನೇತಾರನ, ಮತ್ತು ಐಪಿಎಸ್ ಅಧಿಕಾರಿ ಇರುವ ಸುಸಂಸ್ಕೃತ ಮನೆತನದ ಒಳ ತಿರುಳು. ಎಲ್ಲರೂ ಇದ್ದರೂ ಅನಾಥಾಶ್ರಮ ಸೇರಿ ಅಲ್ಲಿ ಇವರನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲು ಯತ್ನಿಸಿದಾಗ ಅದನ್ನು ಸಹಿ ಸದೆ ಓಡಿ ಬಂದಿರುವ ಮಹಾತಾಯಿ ಈಗ ಬಜರಂಗದಳದ ಆಶ್ರಯದಲ್ಲಿದ್ದಾರೆ.

ಆಕೆಯ ಹೆಸರು ಜಯಂತಿ ನಾರಾ ಯಣ ಬಂಗೇರ ಮಂಗಳೂರು ನಿವಾಸಿ, ಒಂದು ಕಾಲದಲ್ಲಿ ಕೊಟ್ಯಂತರ ಆಸ್ತಿಯ ಒಡತಿ, ಎಂಟು ಮಂದಿ ಮಕ್ಕಳಿದ್ದ ತುಂಬು ಕುಟುಂಬದ ತಾಯಿ, ೧೯೮೩ ರಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಈಕೆ ಹತ್ತಾರು ಮಂದಿಗೆ ಮನೆಯಲ್ಲಿ ಆಶ್ರಯ ನೀಡಿ ಬೆಳೆಸಿದಾಕೆ. ಆದರೆ ಈಗ ತಾನು ಬದುಕಲು ಭಿಕ್ಷೆ ಎತ್ತು ತ್ತಿರುವ ವೃದ್ದೆ. ಇರಲು ಮನೆಯಿಲ್ಲದ ಬೀದಿ ಪಾಲಾದ ಎಂಟು ಮಕ್ಕಳ ತಾಯಿ.

ಜಯಂತಿ ನಾರಾಯಣ ಬಂಗೇರ ಇವ ರಿಗೆ ಎಂಟು ಮಂದಿ ಮಕ್ಕಳು, ಮೂವರು ಗಂಡು ಮಕ್ಕಳಾದರೆ ಐವರು ಹೆಣ್ಮಕ್ಕಳು ಈ ಪೈಕಿ ಇಬ್ಬರು ವಿದೇಶದಲ್ಲಿ ವೈದ್ಯರು, ಒರ್ವಳು ಕಾಂಞಗಾಡಲ್ಲಿದ್ದು ಆಕೆಯ ಪತಿಯೂ ವೈದ್ಯ. ಮತ್ತೋರ್ವ ಮಗಳು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಂಕರ್ ಭಟ್ ಅವರ ಪತ್ನಿ.

ಉಳಿದವರು ಮಂಗಳೂರಿನಲ್ಲೇ ವ್ಯವಹಾ ರ ನೋಡಿಕೊಂಡಿದ್ದಾರೆ. ಈಚೆಗೆ ಮೂರು ವರುಷದ ಹಿಂದೆ ಜಯಂತಿ ಅವರ ಪತಿ ದೈವಾಧೀನರಾದಾಗ ಮನೆ ಮತ್ತು ಆಸ್ತಿಯನ್ನು ಪಾಲು ಮಾಡುವಂತೆ ಮಕ್ಕಳು ಒತ್ತಡ ಹೇರಿದ್ದರು. ಪರಿಣಾಮ ಜಯಂತಿ ನಾರಾಯಣ ಬಂಗೇರ ಇವರ ಆಸ್ತಿ ಎಂಟು ಪಾಲಾದವು. ಒಂದೊಂದು ಪಾಲನ್ನು ಹಿಡಿದುಕೊಂಡು ಪ್ರತಿಯೊಬ್ಬರು ದೂರ ದೂರ ನಡೆದರೇ ಹೊರತು ಜನ್ಮ ನೀಡಿದವಳನ್ನು ಯಾರೂ ಜೊತೆಗೊಯ್ಯಲಿಲ್ಲ. ಹೀಗಾಗಿ ಆಸ್ತಿ ಪಾಲಾ ಗುತ್ತಿರುವಂತೆ ಜಯಂತಿ ಬೀದಿಗೆ ಬಿದ್ದರು. ಕೊನೆಗೆ ಯಾರದ್ದೋ ಸಲಹೆಯಂತೆ ತನ್ನಲ್ಲಿದ್ದ ಒಂದು ಲಕ್ಷ ರುಪಾಯಿಯನ್ನು ಹಿಡಿದು ಮೈಸೂರಿಗೆ ತೆರಳಿ ಅಲ್ಲಿನ ಕ್ರೈಸ್ತ ಅನಾಥಾಲಯಕ್ಕೆ ಸೇರಿದರು. ಒಂದು ಲಕ್ಷ ಭದ್ರತಾ ಠೇವಣಿ, ಮಾಸಿಕ ಎರಡೂವರೆ ಸಾವಿರ ಊಟದ ಖರ್ಚು ನೀಡುವ ಹಾಗೂ ಸತ್ತರೂ ಸಂಬಂಧಿಕರಿಗೆ ಶವ ನೀಡದ ಷರತ್ತಿನ ಮೇಲೆ ಕ್ರೈಸ್ತ ಅನಾಥಾಲಯ ಜಯಂತಿ ಅವರನ್ನು ತನ್ನಲ್ಲಿಗೆ ಸೇರಿಸಿಕೊಂಡಿತು. ಇದ್ದ ಒಂದು ಲಕ್ಷವನ್ನು ಠೇವಣಿ ನೀಡಿದ್ದಾಯಿತು. ಇನ್ನು ಮಾಸಿಕ ಎರಡೂವರೆ ಸಾವಿರ ನೀಡುವುದು ಎಲ್ಲಿಂದ? ಎಂಬ ಪ್ರಶ್ನೆ ಬಂದಾಗ ಜಯಂತಿ ಅವರು ಆರಿಸಿ ಕೊಂಡದ್ದು ಭಿಕ್ಷಾಟನೆ. ಪ್ರತಿದಿನ ಮೈಸೂರಿನ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡಿ ಬಂದ ಹಣವನ್ನು ಅನಾಥಾಶ್ರಮಕ್ಕೆ ನೀಡುತ್ತಿದ್ದರು. ಹೀಗೆ ದಿನ ಸಾಗುತ್ತಿರುವಂತೆ ಜಯಂತಿ ಅವರನ್ನು ಮತಾಂತರ ಮಾಡುವ ಪ್ರಕ್ರಿಯೆ ಆರಂಭವಾಯಿತು. ಜಯಂತಿ ಅವರ ಹೆಸರು ಮೇರಿ ಜಯಂತಿ ನಾರಾಯಣ ಬಂಗೇರ ಎಂದಾಯಿತು, ಪೂಜೆ ಪುನಸ್ಕಾರದ ವಿಧಾನವೂ ಬದಲಾಯಿತು.

ಹೀಗಿದ್ದರೂ ಅನಾಥಾಲಯದಲ್ಲಿ ಇವರಿಗೆ ಆಶ್ರಯ ಮಾತ್ರ ಉತ್ತಮವಾಗೇ ಇದ್ದಿತು. ಆದರೆ ಮತಾಂತರಕ್ಕೆ ಮನಸ್ಸು ಒಗ್ಗದೆ ಅನಾರೋಗ್ಯದ ನೆಪದಲ್ಲಿ ಯಾರದ್ದೋ ಸಹಕಾರದಿಂದ ಮಂಗಳೂರಿಗೆ ಬಂದು ಕಂಕನಾಡಿ ಆಸ್ಪತ್ರೆಗೆ ದಾಖಲಾದರು. ತಾನು ಆಸ್ಪತ್ರೆಯಲ್ಲಿರುವ ಬಗ್ಗೆ ಎಲ್ಲಾ ಮಕ್ಕಳಿಗೂ ತಿಳಿಸಿದರು. ಹತ್ತು ದಿನ ಕಳೆದರೂ ಯಾರೂ ಬರಲೇ ಇಲ್ಲ. ಇತ್ತ ಆಸ್ಪತ್ರೆಯವರೂ ಡಿಸ್ಚಾರ್ಜ್ ಮಾಡಿ ಬಿಟ್ಟರು, ಆಗ ಮತ್ತೆ ಬೀದಿಗೆ ಬಂದ ಜಯಂತಿ ಅವರ ಕೈಯಲ್ಲಿ ಒಂದು ನಯಾ ಪೈಸೆ ಹಣವೂ ಇಲ್ಲ. ಮಕ್ಕಳ ಸುಳಿವಿಲ್ಲ, ಎತ್ತ ಏನು ಒಂದೂ ತಿಳಿಯದಾಗ ಯಾರೋ ಬಜರಂಗದಳಕ್ಕೆ ಹೇಳಿದರು. ಜಯಂತಿ ಸದ್ಯ ಬಜರಂಗದಳದ ರಕ್ಷಣೆಯಲ್ಲಿದ್ದಾರೆ. ಹಿಂದೂ ಸಂಘಟನೆ ಇವರ ಮಕ್ಕಳನ್ನು ಸಂಪರ್ಕಿಸಿದರೆ ಯಾರೂ ಇವರ ಬಗ್ಗೆ ಒಲವು ತೋರುತ್ತಿಲ್ಲ. ಬದಲಾಗಿ ತಾಯಿಯನ್ನೇ ಹಂಗಿಸುತ್ತಾರೆ. ಅದೂ ಎಲ್ಲರ ಮುಂದೆ ‘ಸತ್ತರೆ ಸಾಯಲಿ ಬಿಡಿ ಪರಿಚಯವೇ ಇಲ್ಲ ಎನ್ನುತ್ತಾರೆ. ಜಗತ್ತಲ್ಲಿ ಕೆಟ್ಟ ಮಕ್ಕಳಾದರೂ ಇರುತ್ತಾರೆ ಕೆಟ್ಟ ತಾಯಿ ಇರುವುದಿಲ್ಲ ಎನ್ನುವುದಕ್ಕೆ ಜಯಂತಿಯವರೇ ಸ್ಪಷ್ಟ ನಿದರ್ಶನ. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿದವಳೇ ಈಗ ಮಕ್ಕಳ ಕಾಲ ಕಸವಾಗಿ ಹೋಗಿರುವುದು ದುರಂತವೇ ಸರಿ. ಜಯಂತಿ ಅವರ ಒರ್ವ ಮೊಮ್ಮಗ ಐಪಿಎಸ್ ಅಧಿಕಾರಿ, ಮಗ, ಅಳಿಯ ವೈದ್ಯರಾದರೇನು ಮಾಡುವುದು, ಮಾನವೀಯತೆ ವಿದ್ಯೆ ಕಲಿತು ಬರುವಂಥದ್ದಲ್ಲ ತಾನೇ?

Advertisements