ಬಜ್ಪೆ: ತಲೆ ಒಡೆದ ಟೈಂ ಕೀಪರ್

Posted on April 2, 2011

0


ಮಂಗಳೂರು: ಬಜ್ಪೆ ಬಸ್ ತಂಗುದಾಣ ದಲ್ಲಿ ಕ್ಷುಲ್ಲಕ ಕಾರಣಕ್ಕೆ ಟೈಂ ಕೀಪರ್ ಒಬ್ಬ ಇನ್ನೊಬ್ಬ ಟೈಂ ಕೀಪರ್ ಮೇಲೆ ಮರದ ರೀಪಿನಿಂದ ಹಲ್ಲೆ ನಡೆಸಿ ತಲೆ ಒಡೆದ ಘಟನೆ ನಿನ್ನೆ ಸಂಜೆ ನಡೆದಿದೆ.

ಗಂಜಿಮಠ ನಿವಾಸಿ ಪ್ರದೀಪ್ ಎಂಬಾತ ಪ್ರಕರಣದ ಆರೋಪಿಯಾಗಿದ್ದು, ಈತ ಬಜ್ಪೆ ಬಸ್ ತಂಗುದಾಣದಲ್ಲಿ ಟೈಂ ಕೀಪರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಎರಡು ತಿಂಗಳ ಹಿಂದೆ ಗಂಜಿಮಠ ಐಟಿ ಪಾರ್ಕ್ ಬಳಿ ಕೃಷ್ಣಾಪುರದ ಯುವಕರ ಮೇಲಿನ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಈತ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ. ಕಳೆದ ಮೂರು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಈತ ಬಜ್ಪೆ ಪರಿಸರದಲ್ಲಿ ಪುಂಡಾಟಿಕೆ ಮಾಡಿಕೊಂಡು ಕಾಲ ಕಳೆಯುತ್ತಿದ್ದ ಎನ್ನಲಾಗಿದೆ. ನಿನ್ನೆ ಸಂಜೆಯ ವೇಳೆಯೂ ಬಸ್ ನಿಲ್ದಾಣದಲ್ಲಿ ಪ್ರದೀಪ ಕುಡಿದ ಮತ್ತಿನಲ್ಲಿ, ತಾನು ಜೈಲಿನಿಂದ ಹೊರಬಂದವನು ಎಂಬ ಗತ್ತಿನಿಂದ ಮೆರೆಯುತ್ತಿದ್ದ. ಈ ವೇಳೆ ಇಲ್ಲಿಯೇ ಕರ್ತವ್ಯ ನಿರತನಾಗಿದ್ದ ಅಂಬಿಕಾನಗರ ನಿವಾಸಿ ಸಂತೋಷ್ ಬಂಗೇರಾ ಎಂಬಾತನ ಜತೆ ಜಗಳಕ್ಕೆ ಮುಂದಾಗಿದ್ದು, ಮರದ ರೀಪ್‌ನಿಂದ ಸಂತೋಷನ ತಲೆ ಒಡೆದು ಪರಾರಿಯಾಗಿ ದ್ದಾನೆ ಎನ್ನಲಾಗಿದೆ. ತಲೆಯ ಭಾಗಕ್ಕೆ ಗಾಯಗೊಂಡಿರುವ ಸಂತೋಷ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಬಂಧನಕ್ಕೆ ಶ್ರಮಿಸುತ್ತಿದ್ದಾರೆ.

Advertisements
Posted in: Special Report