ಅಂತಿಮ ಹೋರಾಟ

Posted on April 2, 2011

0


ವಾಂಖೆಡೆ ಸ್ಟೇಡಿಯಂ…..

ಹೇಳಿಕೇಳಿ ಇದು ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದ ಮೈದಾನ. ರನ್ ಪ್ರವಾಹ ಹರಿದರೆ ಸಿಂಹಗಳನ್ನು ಈಜಲಾರದೆ ಸೋಲಬಹುದು. ಕನಿಷ್ಠ ರನ್ ಗತಿ ೨೮೦ ರನ್ನು ದಾಟಿದರೆ ಲಂಕನ್ನರಿಗೆ ಭಾರತವನ್ನು ಗೆಲ್ಲುವುದು ಸುಲಭವಲ್ಲ. ಯಾಕೆಂದರೆ ಲಂಕನ್ನರಲ್ಲಿಯೂ ಕೆಲವೊಂದು ದೌರ್ಬಲ್ಯ ವಿದೆ. ಆದರೂ ಅದಕ್ಕಿಂತ ಹೆಚ್ಚಾಗಿ ಭಾರತ ತಂಡದಲ್ಲಿ ದೌರ್ಬಲ್ಯ ಎದ್ದು ಕಾಣುತ್ತಿದೆ. ಬೌಲಿಂಗ್ ದಾಳಿ ದುರ್ಬಲ ಎನ್ನುವ ಟೀಕೆ ಆರಂಭದಿಂದಲೂ ಭಾರತವನ್ನು ಕಾಡುತ್ತಿದೆ. ಆದರೂ ಈ ಎಲ್ಲಾ ದೌರ್ಬಲ್ಯಗಳನ್ನು ಬ್ಯಾಟಿಂಗ್ ಮರೆಸಬಹುದು. ಸಚಿನ್ ಎಂಬ ಅಸಾಮಾನ್ಯ ಕೊಡವಿ ನಿಂತರೆ ಮಾತ್ರ ಸಾಧ್ಯ. ಶ್ರೀಲಂಕಾ ತನ್ನೆಲ್ಲಾ ಬಲವನ್ನು ವಿಶ್ವಕಪ್ ಗೆಲ್ಲಲು ವಿನಿಯೋಗಿಸಲಿದೆ. ಅದರಲ್ಲೂ ಸಚಿನ್ ತೆಂಡುಲ್ಕರ್‌ಗೆ ಕಡಿವಾಣ ಹಾಕಲು ನಿರ್ಧರಿಸಿದೆ. ಸಚಿನ್ ತೆಂಡುಲ್ಕರ್‌ಗೆ ವಾಂಖೆಡೆ ಸ್ಟೇಡಿಯಂ ತವರು ನೆಲ. ಮಿಗಿಲಾಗಿ ತನ್ನ ಶತಕಗಳ ದಾಖಲೆಯನ್ನು ತನ್ನ ತವರಿನಲ್ಲೇ ಮಾಡುವ ಮೂಲಕ ಈ ವಿಶ್ವಕಪ್ ಫೈನಲನ್ನು ಅವಿಸ್ಮರಣೀಯವನ್ನಾಗಿಸಲು ಸಚಿನ್ ಪ್ರಯತ್ನಿಸುತ್ತಿದ್ದಾರೆ. ಎಲ್ಲರ ಕಣ್ಣಿರುವುದು ಸಚಿನ್ ಮೇಲೆ. ಕೊನೆಯ ವಿಶ್ವಕಪ್ ಆಟ ಆಡುತ್ತಿರುವ ಸಚಿನ್ ಕೊನೆಯಲ್ಲಿ ಉಳಿದ ಯೋಧನಂತೆ ಭಾರತವನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ.

ಪೂನಂ ಬೆತ್ತಲಾಗೋದೆಲ್ಲಿ?

ಮಾಡೆಲ್ ಪೂನಂ ಪಾಂಡೆ ಈಗಾಗಲೇ ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುವುದಾಗಿ ಹೇಳಿದ್ದಾಳೆ. ಹೀಗೆ ಹೇಳುವ ಮೂಲಕ ಪೂನಂ ಏಕಾಏಕಿ ಸುದ್ದಿಗೆ ಬಂದಿದ್ದಾಳೆ. ಪೂನಂ ಬೆತ್ತಲಾಗಲು ಸಿದ್ದಳಾಗು ಎಂದು ಆಕೆಗೆ ಸಾವಿರಾರು ಇಮೇಲ್ ಸಂದೇಶಗಳು ಬಂದಿವೆ. ತಾನು ಕೊಟ್ಟ ಮಾತಿಗೆ ತಪ್ಪೋದಿಲ್ಲ ಎಂದು ಪೂನಂ ಹೇಳುತ್ತಿದ್ದಾಳೆ. ಅಂದ ಹಾಗೆ ಆಕೆ ಬೆತ್ತಳಾಗುತ್ತೇವೆ ಅಂದಿದ್ದಾಳೆಯೇ ಹೊರತು ಎಲ್ಲಿ, ಹೇಗೆ ಎಂದಿಲ್ಲ. ಇದೀಗ ಅದಕ್ಕೂ ಆಕೆ ಉತ್ತರ ಕೊಟ್ಟಿದ್ದಾಳೆ. ತಾನು ಫೇಸ್ ಬುಕ್‌ನಲ್ಲಿ ಬೆತ್ತಲಾಗಬಹುದು, ಕ್ರಿಕೆಟಿಗರ ಡ್ರೆಸ್ಸಿಂಗ್ ರೂಮ್‌ನಲ್ಲಾದರೂ ಬೆತ್ತಲಾಗ ಬಹುದು ಎಂದು ಆಕೆ ಹೇಳಿದ್ದಾಳೆ. ಪೂನಂಳ ಬೆತ್ತಲೆ ಸೇವೆಗೆ ಆಕೆಯ ಹೆತ್ತವರೂ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿ ಕೊಂಡಿದ್ದಾಳೆ. ನಾನು ದೇಶಕ್ಕಾಗಿ ಬೆತ್ತಲಾಗುತ್ತಿದ್ದೇನೆ ಅದಕ್ಕಾಗಿ ಅವರ ಬೆಂಬಲ ಇದೆ ಎಂದಿದ್ದಾಳೆ.

ಗೂಗ್ಲ್ ಸರ್ಚ್‌ನಲ್ಲಿ ಅತೀ ಹೆಚ್ಚು ಬಾರಿ ಈಕೆಯನ್ನು ನೋಡಲಾಗಿತ್ತು ಎನ್ನುವ ಹೆಮ್ಮೆ ಪೂನಂಳದ್ದು. ಕ್ರೀಡೆಗಳಲ್ಲಿ ಬೆತ್ತಲಾಗುವ ಸುದ್ದಿ ಇದೇನು ಮಾದಲ ಬಾರಿಯೇನಲ್ಲ.

ಫುಟ್ಬಾಲ್ ವಿಶ್ವಕಪ್‌ನಲ್ಲಿ ಪೆರುಗ್ವೆಯ ಮಾಡೆಲ್ ಬೆತ್ತಲಾಗುತ್ತೇನೆ ಎಂದು ಹೇಳಿ ಗಮನ ಸೆಳೆದಿದ್ದಳು.

ಯಾರಿಗೆ ಹೆಚ್ಚು ಲಾಭ?

ವಾಂಖೆಡೆಯಲ್ಲಿ ೨೦೦೦ದ ನಂತರ ಪಂದ್ಯಗಳಲ್ಲಿ ವೇಗಿಗಳು ಅತೀ ಹೆಚ್ಚಿನ ವಿಕೆಟ್ (೫೭) ಪಡೆದಿದ್ದರೆ ಸ್ಪಿನ್ನರ್‌ಗಳು (೩೯) ಕೂಡ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಫೈನಲ್ ಬ್ಯಾಟಲ್‌ನಲ್ಲಿ: ಫೈನಲ್ ಪಂದ್ಯಗಳನ್ನು ಎದುರಿಸುವ ಕಲೆ ಭಾರತಕ್ಕಿಂತ ಶ್ರೀಲಂಕಾಗೆ ಹೆಚ್ಚಿದೆ ಎಂದು ದಾಖಲೆ ತಿಳಿಸುತ್ತದೆ. ಸರಣಿ ನಿರ್ಧರಿಸುವ ಫೈನಲ್‌ನಲ್ಲಿ ಮಾತ್ರ ಲಂಕಾ ತಂಡ ಭಾರತಕ್ಕಿಂತ ಮೇಲುಗೈ ಹೊಂದಿದೆ. ೨೦೦೦ರ ನಂತರ ಒಟ್ಟು ಹನ್ನೊಂದು ಬಾರಿ ನಡೆದ ಫೈನಲ್ ಪಂದ್ಯಗಳಲ್ಲಿ ಲಂಕಾ ಏಳು ಬಾರಿ ಜಯ ಕಂಡು ಕೇವಲ ಎರಡು ಬಾರಿ ಮಾತ್ರ ಸೋಲುಂಡು ಭಾರತಕ್ಕಿಂತ ಎಷ್ಟೋ ಮುಂದಿದೆ. ಇದರಲ್ಲಿ ಒಂಬತ್ತರಲ್ಲಿ ಎಂಟು ಬಾರಿ ಮೊದಲು ಬ್ಯಾಟಿಂಗ್ ನಡೆಸಿದ ದೇಶ ಯಶಸ್ಸು ಕಂಡಿದೆ. ಇದನ್ನು ಗಮನಿಸಿದರೆ ಟಾಸ್ ಗೆದ್ದ ತಂಡ ಬ್ಯಾಟಿಂಗ್ ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಿಶ್ವಕಪ್‌ನಲ್ಲಿ ಸಚಿನ್ ಸಾಧನೆ

ಇದು ಸಚಿನ್ ತೆಂಡುಲ್ಕರ್‌ರ ಬಹುಶಃ ಕೊನೆಯ ವಿಶ್ವಕಪ್ ಆಗಿದೆ. ತನ್ನ ಆರನೇ ಟೂರ್ನಿಯನ್ನು ಆಡುತ್ತಿದ್ದು ಈವರೆಗೆ ೨೪೯೯ ರನ್‌ಗಳನ್ನು ಕಳೆ ಹಾಕಿದ್ದಾರೆ. ಇದರಲ್ಲಿ ೧೪ ಅರ್ಧಶತಕ ಹಾಗೂ ಆರು ಶತಕಗಳೂ ಒಳಗೊಂಡಿವೆ. ೨೦೦೩ರ ಟೂರ್ನಿಯಲ್ಲಿ ೬೭೩ ರನ್ ಕಳೆಹಾಕಿದ್ದು ಗರಿಷ್ಟ ಸ್ಕೋರ್ ಕೂಡ ಆಗಿದೆ. ರಾಹುಲ್ ದ್ರಾವಿಡ್‌ರೊಂದಿಗೆ ಮೂರನೇ ವಿಕೆಟ್ ಗಳಿಸಿದ ೨೭೩ ರನ್ ಇಂದಿಗೂ ಅವರ ಶ್ರೇಷ್ಠ ಜತೆಯಾಟವಾಗಿದೆ.

ಟೂರ್ನಿಯಲ್ಲಿ ಪ್ರದರ್ಶನ

ಧೋನಿ ಪಡೆ ಐದು ಬಾರಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದು ಈ ಪೈಕಿ ಅದು ಮೂರು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಲು ಸಫಲವಾಗಿದ್ದರೆ ಒಂದು ಬಾರಿ ಸೋಲಿನ ರುಚಿ ಕಂಡಿದೆ. ಲಂಕಾ ಪಡೆ ನಾಲ್ಕು ಬಾರಿ ಮೊದಲು ಬ್ಯಾಟಿಂಗ್ ನಡೆಸಿದ್ದು ಮೂರರಲ್ಲಿ ಗೆಲುವ ಕಂಡಿದೆ. ಆದರೆ ಚೇಸ್ ಮಾಡಿ ಗೆಲುವು ಸಾಧಿಸಿದ ದಾಖಲೆಯಲ್ಲಿ ಧೋನಿ ಪಡೆ ಲಂಕಾಗಿಂತ ಮುಂದಿದ್ದು ಅದು ಮೂರು ಬಾರಿ ಎದುರಾಳಿಗಳ ಮೊತ್ತವನ್ನು ಬೆನ್ನಟ್ಟಿ ಸಫಲವಾಗಿದೆ. ಆದರೆ ಲಂಕಾ ಚೇಸ್ ಮಾಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಯಶಸ್ವಿಯಾಗಿದೆ. ಆದರೆ ಎರಡೂ ತಂಡಗಳು ಟೂರ್ನಿಯಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಆರರಲ್ಲಿ ಜಯ, ಒಂದು ಸೋಲು ಹಾಗೂ ಒಂದು ಪಂದ್ಯದಲ್ಲಿ ಫಲಿತಾಂಶ ಕಾಣಲು ವಿಫಲವಾಗಿದೆ.

ವಾಂಖೆಡೆಯಲ್ಲಿ ದಾಖಲೆ

ಮುಂಬೈ: ವಾಂಖೆಡೆ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ಶ್ರೀಲಂಕಾ ಮೇಲುಗೈ ಹೊಂದಿದೆ. ೧೯೯೭ರಲ್ಲಿ ಭಾರತದ ೨೨೫ ರನ್ ಅನ್ನು ಶ್ರೀಲಂಕಾ ಯಶಸ್ವಿಯಾಗಿ ಬೆನ್ನಟ್ಟಿದ ದಾಖಲೆ ಈಗಲೂ ಅದರ ಪರವಾಗಿಯೇ ಇದೆ. ಈವರೆಗೆ ನಡೆದ ಹತ್ತು ಅಹರ್ನಿಶಿ ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡ ನಾಲ್ಕು ಬಾರಿ ಜಯ ಸಾಧಿಸಿದ್ದರೆ ಅದರಲ್ಲಿ ಭಾರತದ ಕೊನೆಯ ಎರಡು ಪಂದ್ಯಗಳೂ ಸೇರಿವೆ. ಪ್ರಸ್ತುತ ಟೂರ್ನಿಯಲ್ಲಿ ಇಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಯಶ ಕಂಡಿದೆ.

ಅತೀ ಹೆಚ್ಚು ಮುಖಾಮುಖಿ: ಕಳೆದ ಮೂರು ವರ್ಷಗಳಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡ ೩೩ ಬಾರಿ ಪರಸ್ಪರ ಸೆಣಸಾಟ ನಡೆಸಿದೆ. ಈ ಮೂಲಕ ಅತೀ ಹೆಚ್ಚು ಬಾರಿ ಎದುರುಗೊಂಡ ಹೆಗ್ಗಳಿಕೆ ಕೂಡ ಇದೆ. ಈ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಮಾತ್ರ ನಿಚ್ಚಳ ಮುನ್ನಡೆಯನ್ನು ಕಾಯ್ದುಕೊಂಡಿದೆ. ೧೮ ಪಂದ್ಯಗಳಲ್ಲಿ ಗೆಲುವು ಸಾಧಿಸಿ ೧೩ರಲ್ಲಿ ಮಾತ್ರ ನಿರಾಸೆ ಅನುಭವಿಸಿದೆ. ಆದರೆ ೩೩ ಪಂದ್ಯದ ಪೈಕಿ ಕೇವಲ ಐದು ಹಣಾಹಣಿಗಳು ಮಾತ್ರ ಸ್ವದೇಶದಲ್ಲಿ ನಡೆದಿದ್ದು ಮೂರರ ಫಲಿತಾಂಶ ಭಾರತದ ಪರವಿದ್ದು ಒಂದನ್ನು ಎದುರಾಳಿಗೆ ಬಿಟ್ಟು ಕೊಟ್ಟಿದೆ. ಪರಸ್ಪರ ನಡೆದ ದಾಖಲೆಗಳನ್ನು ಗಮನಿಸಿದರೆ ಟೀಮ್ ಇಂಡಿಯಾ ಸಂಗಕ್ಕರ ಪಡೆಗಿಂತ ಹೆಚ್ಚಿನ ಯಶಸ್ವಿ ಪಡೆದಿದೆ.

ಬ್ಯಾಟಿಂಗ್ ಫಸ್ಟ್-ಸೆಕೆಂಡ್

ಕಳೆದ ೧೦ ವರ್ಷಗಳ ಅವಧಿಯಲ್ಲಿ ನಡೆದ ಪಂದ್ಯಗಳಲ್ಲಿ ಶ್ರೀಲಂಕಾ ೩-೧೧ರ ಗೆಲುವಿನ ದಾಖಲೆಯನ್ನು ಹೊಂದಿದೆ. ೧೪ ಪಂದ್ಯಗಳಲ್ಲಿ ಎರಡನೇ ಅವಧಿಗೆ ಬ್ಯಾಟಿಂಗ್ ನಡೆಸಿದ ತಂಡ ೧೧ ಬಾರಿ ಜಯ ಸಾಧಿಸಿದೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಟಾಸ್ ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂಬುದನ್ನು ತಿಳಿಯಬಹುದು.

ವಿಶ್ವಕಪ್ ದಾಖಲೆ…ಟಾಸ್ ಫ್ಯಾಕ್ಟರ್!

ಲಂಕಾ ವಿರುದ್ಧ ಈವರೆಗೆ ಆರು ಬಾರಿ ನಡೆದ ಮುಖಾಮುಖಿಯಲ್ಲಿ ನಾಲ್ಕರಲ್ಲಿ ಭಾರತ ಸೋಲುಂಡಿದೆ. ೧೯೯೬ರಲ್ಲಿ ಏಶ್ಯಾ ಉಪಖಂಡದಲ್ಲಿ ನಡೆದ ಎರಡೂ ಕಾಳಗದಲ್ಲಿ ಲಂಕಾ ಪಡೆ ಭಾರತವನ್ನು ಹೀನಾಯವಾಗಿ ಸೋಲಿಸಿದೆ. ಆದರೆ ೧೯೯೯-೨೦೦೩ ಇಂಗ್ಲೆಂಡ್ ಹಾಗೂ ದ.ಆಫ್ರಿಕಾದಲ್ಲಿ ನಡೆದ ಪಂದ್ಯದಲ್ಲಿ ಮಾತ್ರ ಭಾರತ ಮೇಲುಗೈ ಸಾಧಿಸಿದೆ. ೨೦೦೩ರ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿದ್ದನ್ನು ನಾವಿಲ್ಲಿ ಗಮನಿಸಬಹುದು. ಆದರೆ ಕೊನೆಯ ಬಾರಿಗೆ ಅಂದರೆ ೨೦೦೭ರಲ್ಲಿ ನಡೆದ ಕಾದಾಟದಲ್ಲಿ ಮಾತ್ರ ಇಂಡಿಯಾ ಸೋತು ಟೂರ್ನಿಯಿಂದಲೇ ನಿರ್ಗಮಿಸಿತ್ತು. ಆದರೆ ಕೊನೆಯ ನಾಲ್ಕು ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯ ಸಾಧಿಸಿದ್ದು ವಿಶೇಷವಾಗಿ ಗಮನಿಸುವ ಅಂಶವಾಗಿದೆ.

ಭಾರತ ಫೇವರಿಟ್, ನಾವೂ ಕಮ್ಮಿಯಿಲ್ಲ: ಸಂಗಕ್ಕರ

ಮುಂಬೈ: ಇಂದು ನಡೆಯ ಲಿರುವ ಫೈನಲ್‌ನಲ್ಲಿ ಭಾರತ ಗೆಲ್ಲುವ ಫೇವರಿಟ್ ಎಂದು ಸಂಗಕ್ಕರ ಅಭಿಪ್ರಾಯ ಪಟ್ಟರೂ ತನ್ನ ತಂಡ ಕೂಡ ಎದು ರಾಳಿಗಿಂತ ಕನಿಷ್ಠವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಲಿಷ್ಟ ಬ್ಯಾಟಿಂಗ್ ಹಾಗೂ ಸುಧಾರಿತ ಬೌಲಿಂಗ್ ವಿಭಾಗವನ್ನು ಹೊಂದಿರುವ ಭಾರತ ಸಹಜವಾಗಿಯೇ ಗೆಲ್ಲುವ ಫೇವರಿಟ್ ಆಗಿದೆ. ಆದರೆ ನಾವೂ ಕೂಡ ಕಮ್ಮಿಯಿಲ್ಲ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ಕಾಯ್ದುಕೊಂಡು ಬಂದಿದ್ದು ಸಾಧ್ಯವಾದಷ್ಟು ಮಟ್ಟಿಗೆ ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ ಸಂಗಕ್ಕರ ಇಡೀ ವಿಶ್ವವೇ ಭಾರತ ಗೆಲ್ಲಲು ಹಾರೈಸುತ್ತಿರುವುದು ಕೂಡ ಅದನ್ನು ಒತ್ತಡಕ್ಕೆ ಸಿಲುಕಿಸಲಿದೆ ಎಂದು ಹೇಳಿದರು. ದೇಶದ ಹೊರಗೆ ಆಡುವುದರಿಂದ ಹಿನ್ನೆಡೆ ಹಾಗೂ ಮುನ್ನಡೆ ಎರಡೂ ಇದೆ. ಸಚಿನ್‌ರ ನೂರನೇ ಶತಕದ ಬಗ್ಗೆ ಕೇಳಿದಾಗ, ನಾವು ಇಲ್ಲಿ ಕೆಲವರ ಕನಸನ್ನು ಭಗ್ನಗೊಳಿಸಲು ಬಂದಿದ್ದೇವೆ ಎಂದು ತಿಳಿಯಬಾರದು. ಭಾರತವನ್ನು ಆದಷ್ಟು ಕನಿಷ್ಟ ರನ್‌ಗೆ ಆಲೌಟ್ ಮಾಡುವುದೇ ನಮ್ಮ ಗುರಿ ಎಂದು ಅವರು ತಮ್ಮ ಗೇಮ್‌ಪ್ಲ್ಯಾನನ್ನು ವಿವರಿಸಿದರು.

ಉತ್ತುಂಗದಲ್ಲಿದ್ದೇವೆ: ಧೋನಿ

ಮುಂಬೈ: ನಾವೂ ಸರಿಯಾದ ಸಂದರ್ಭದಲ್ಲೇ ಯಶಸ್ಸನ್ನು ಪಡೆಯಲು ಸಫಲರಾಗಿದ್ದರೂ ತಂಡದ ಆಟಗಾರರು ತಮ್ಮ ನೈಜ ಸಾಮರ್ಥ್ಯವನ್ನು ಇನ್ನೂ ಪ್ರದರ್ಶಿಸಬೇಕಿದೆ ಎಂದು ಟೀಮ್ ಇಂಡಿಯಾ ಕಪ್ತಾನ ಧೋನಿ ತಿಳಿಸಿ ದರು.

ಸರಿಯಾದ ಪ್ರದರ್ಶನ ಬರಲು ನಮ್ಮಿಂದ ಇನ್ನೂ ಬಾಕಿಯಿದ್ದು ಮುಖ್ಯ ವಾಗಿ ಪಂದ್ಯದಿಂದ ಪಂದ್ಯಕ್ಕೆ ಸ್ಥಿರತೆ ಯನ್ನು ಕಾಯ್ದುಕೊಂಡು ಬಂದಿ ದ್ದೇವೆ. ಮೈದಾನದಲ್ಲಿ ಎರಡುವರೆ ಘಂಟೆಗಳ ಕಾಲ ಅಭ್ಯಾಸ ನಡೆಸಿದ್ದು ಪಿಚ್‌ನ ಗುಣದ ಬಗ್ಗೆ ನಮಗೆ ಅರಿವಿದೆ.

ಗೆದ್ದರೆ ಕಾರ್!

ಮುಂಬೈ: ವಿಶ್ವಕಪ್ ಜಯಿಸಲು ಭಾರತ ಸಫಲವಾದರೆ ತಂಡದ ಎಲ್ಲಾ ಸದಸ್ಯರಿಗೂ ಎಚ್‌ಎಮ್‌ಐಎಲ್ (ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್) ವತಿಯಿಂದ ಹುಂಡೈ ವರ್ನಾ ಕಾರ್ ಅನ್ನು ಉಡುಗೊರೆ ಯಾಗಿ ನೀಡುವುದಾಗಿ ಎಂ.ಡಿ ಹಾಗೂ ಸಿಇಒ ಹಾಂಗ್ ವೂ ಪಾರ್ಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬ್ಯಾಟ್ಸ್‌ಮೆನ್-ಬೌಲರ್‌ಗಳ ಮೆರೆದಾಟ

೨೦೦೮ರ ನಂತರ ನಡೆದ ಕಾಳಗದ ದಾಖಲೆಯಲ್ಲಿ ಲಂಕಾ ಬೌಲರ್‌ಗಳು ಬೌಲಿಂಗ್‌ನಲ್ಲಿ ಮೇಲುಗೈ ಸಾಧಿಸಿದ್ದರೆ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ಮೇಲುಗೈ ಸಾಧಿಸಿದನ್ನು ನಾವು ಗಮನಿಸಬಹುದು. ನುವಾನ್ ಕುಲಸೇಕರ (೩೩) ಹಾಗೂ ಅಜಂತಾ ಮೆಂಡಿಸ್ (೨೮) ವಿಕೆಟ್ ಪಡೆದು ಅಗ್ರಸ್ಥಾನಿಯಾದರೆ ಜಹೀರ್ ಹಾಗೂ ಹರ್ಭಜನ್ ತಲಾ ೨೬ ವಿಕೆಟ್‌ಗೆ ತೃಪ್ತಿಪಟ್ಟುಕೊಂಡಿದ್ದಾರೆ.

ನಾಯಕ ಧೋನಿ (೧೨೧೭) ಬ್ಯಾಟಿಂಗ್‌ನಲ್ಲಿ ತನ್ನ ಪರಾಕ್ರಮ ತೋರಿ ಅಗ್ರಸ್ಥಾನಿಯಾದರೆ ನಂತರದ ಸ್ಥಾನ ಪ್ರಸ್ತುತ ವಿಶ್ವಕಪ್‌ನಲ್ಲಿ ಗರಿಷ್ಟ ರನ್ ಸ್ಕೋರರ್ ದಿಲ್ಶಾನ್ (೧೧೬೦) ಪರವಾಗಿದೆ.

ಪಾಕ್‌ಗೆ ಭವ್ಯ ಸ್ವಾಗತ

ಲಾಹೋರ್: ಭಾರತದ ವಿರುದ್ದ ಸೋತು ಫೈನಲ್ ಪ್ರವೇಶಿಸಲು ವಿಫಲವಾಗಿದ್ದ ಪಾಕಿಸ್ತಾನ ತಂಡ ನಿನ್ನೆ ಕರಾಚಿ ತಲುಪಿದ್ದು ಜನರಿಂದ ಭವ್ಯ ಸ್ವಾಗತ ಸ್ವೀಕರಿಸಿದ್ದಾರೆ.

ಕರಾಚಿ ತಲುಪಿದ ಅಫ್ರಿದಿ, ಯೂನಿಸ್ ಹಾಗೂ ಅಸದ್ ಕರಾಚಿಗೆ ತಲುಪಿದರೆ ಉಳಿದ ಆಟಗಾರರು ಲಾಹೋರ್‌ಗೆ ಪ್ರಯಾಣಿಸಲಿದ್ದು ಅಲ್ಲಿ ಅವರು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಾಬಾಜ್ ಶರೀಫ್ ಹಾಗೂ ಪಿಸಿಬಿ ಅಧ್ಯಕ್ಷರು ಸ್ವಾಗತಿಸಿದ್ದಾರೆ.

ಮುಖ್ಯವಾಗಿ ಕರಾಚಿಗೆ ತಲುಪಿದ ತಕ್ಷಣ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಅಪಾರ ಜನಸ್ತೋಮ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಗಳಿಸಿದ ಅಫ್ರಿದಿ ಪರ ಘೋಷಣೆಗಳನ್ನು ಕೂಗಿದರು.

ಪರಸ್ಪರ ಮುಖಾಮುಖಿ

ಭಾರತ ಹಾಗೂ ಶ್ರೀಲಂಕಾ ತಂಡಗಳು ಈವರೆಗೆ ನಡೆದ ಮುಖಾಮುಖಿಯಲ್ಲಿ ಒಟ್ಟು ೧೨೮ ಬಾರಿ ಸೆಣಸಾಟ ನಡೆಸಿದೆ. ಲಂಕಾ ಕೇವಲ ೫೦ ಬಾರಿ ಮೇಲುಗೈ ಸಾಧಿಸಲು ಸಫಲವಾಗಿದ್ದರೆ ಭಾರತ ೬೭ ಪಂದ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ತೋರ್ಪಡಿಸಿದೆ. ೨೦೦೦ರ ನಂತರ ಪಂದ್ಯಗಳಲ್ಲೂ ಕೂಡ ಭಾರತ ತನ್ನ ಮುನ್ನಡೆ ಸಾಧಿಸಿದೆ. ಆಡಿದ ೬೬ ಪಂದ್ಯಗಳಲ್ಲಿ ೩೩ ಬಾರಿ ಸಿಹಿ ಉಂಡಿದ್ದರೆ ೨೭ ಪಂದ್ಯಗಳಲ್ಲಿ ಮಾತ್ರ ನೋವನ್ನು ಕಂಡಿದೆ. ಆದರೆ ವಿಶ್ವಕಪ್‌ನಲ್ಲಿ ಮಾತ್ರ ಭಾರತ ನೆರೆಯ ರಾಷ್ಟ್ರಕ್ಕಿಂತ ಹಿಂದಿದೆ. ಇದೆಲ್ಲಾವನ್ನು ಗಮನಿಸಿ ದರೆ ಪಂದ್ಯ ಹೆಚ್ಚಿನ ರೋಚಕತೆಯನ್ನು ಹೊಂದಿದೆ.

Advertisements
Posted in: Sports News