ಬೆಂಕಿ ನಂದಿಸುವ ಭರದಲ್ಲಿ ಕಾರನ್ನೇ ಪುಡಿ ಮಾಡಿದ ರು!

Posted on April 1, 2011

0


ಮಂಗಳೂರು : ಕಾರಿಗೆ ಆಕಸ್ಮಿಕವಾಗಿ ಹತ್ತಿರುವ ಬೆಂಕಿಯನ್ನು ನಂದಿಸುವ ಭರದಲ್ಲಿ ಸ್ಥಳೀಯರು ಕಾರನ್ನೇ ಒಡೆದು ಹಾಕಿದ ಘಟನೆ ನಿನ್ನೆ ಅಡ್ಯಾರ್ ಬಳಿ ಸಂಭವಿಸಿದೆ.

ನಿನ್ನೆ ಸಂಜೆ ಬಿ.ಸಿ ರೋಡ್‌ನಿಂದ ಮಂಗಳೂರು ಕಡೆ ಬರುತ್ತಿದ್ದ ಮಾರುತಿ ಝೆನ್ ಕಾರಿಗೆ, ಅಡ್ಯಾರ್ ಬಳಿ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು, ಇದನ್ನು ಗಮನಿಸಿದ ಚಾಲಕ ಕಾರನ್ನು ನಡುರಸ್ತೆಯಲ್ಲೇ ಬಿಟ್ಟು ಇಳಿದು ಬಂದಿದ್ದ. ಇದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ನೀರು, ಮಣ್ಣು, ಮರದ ಗೆಲ್ಲು ಹೀಗೆ ಬೇರೆ ಬೇರೆ ವಸ್ತುಗಳನ್ನು ಬಳಸಿ ಕಾರಿಗೆ ಹತ್ತಿರುವ ಬೆಂಕಿಯನ್ನು ದೂರದಿಂದಲೇ ನಂದಿಸಲಾಯಿತಾದರೂ, ಕಾರಿಗೆ ಗ್ಯಾಸ್ ಅಳವಡಿಸಿಕೊಂಡಿರುವ ಕಾರಣ ಅದು ಸ್ಪೋಟಗೊಳ್ಳುವ ಭಯದಿಂದ ಯಾರೂ ಕಾರಿನ ಹತ್ತಿರ ಹೋಗಲು ಮುಂದಾಗಿಲ್ಲ. ಕೊನೆಗೆ ಯಾರೋ ಒಬ್ಬರು ಕಾರಿನ ಗ್ಯಾಸ್ ಕನೆಕ್ಟರ್ ತಪ್ಪಿಸಿದರು. ಇಷ್ಟಾಗುವಾಗ ದೂರದಲ್ಲಿದ್ದವರು ಹತ್ತಿರ ಬಂದು ಕಾರಿನ ಎಲ್ಲಾ ಬಾಗಿಲನ್ನು ಬಲವಂತದಿಂದ ತೆಗೆದರಲ್ಲದೆ ಕಾರಿನ ಬಾನೆಟನ್ನು ಕಬ್ಬಿಣದ ಸರಳು ಬಳಸಿ ತೆರೆಯಲು ಯತ್ನಿಸಿದರು. ಆದರೆ ಅದು ಸಾಧ್ಯವಾಗದಾಗ ನಾಲ್ಕೈದು ಮಂದಿ ಸೇರಿ ಅದನ್ನು ಒಡೆದೇ ಬಿಟ್ಟರು. ಇದೆಲ್ಲವನ್ನೂ ದೂರದಲ್ಲಿ ನಿಂತು ನೋಡುತ್ತಿದ್ದ ಕಾರಿನ ಮಾಲಕ, ಜನ ತನ್ನ ಕಾರನ್ನು ಈ ರೀತಿ ಮಾಡುವುದಕ್ಕಿಂತ ಅದು ಸುಟ್ಟೇ ಹೋಗಿದ್ದರೆ ಸ್ವಲ್ಪವಾದರೂ ಉಳಿಯುವ ಸಾಧ್ಯತೆ ಇತ್ತು ಎನ್ನುತ್ತಿದ್ದ. ಜನರ ಹೊಡೆತಕ್ಕೆ ಸಿಲುಕಿದ್ದ ಕಾರು ಅಪಘಾತಕ್ಕೀಡಾದಂತೆ ಕಂಡು ಬಂದಿತ್ತು. ಏನು? ಯಾಕೆ? ಹೇಗೆ ? ಎಂಬ ಯಾವ ಯೋಚನೆಯೂ ಇಲ್ಲದಂತೆ ಸಿಕ್ಕ ಸಿಕ್ಕವರು ಬಂದು ಕಾರನ್ನು ನಜ್ಜು ಗುಜ್ಜು ಮಾಡಿ ಬಳಿಕ ರಸ್ತೆ ಬದಿಗೆ ತಳ್ಳಿ ಬಿಟ್ಟಿದ್ದರು. ಇದಾದ ಅರ್ಧ ತಾಸಿನ ಬಳಿಕ ಪೊಲೀಸ್ ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ತಮ್ಮ ಕಾರ್ಯಾ ಚರಣೆ ನಡೆಸಿದರು. ಇಷ್ಟೊತ್ತಿಗೆ ಕಾರು ಗುಜರಿಯಾತನ ನಿರೀಕ್ಷೆಯಲ್ಲಿತ್ತು!

Posted in: Crime News