ಸಣ್ಣ ಚುನಾವಣೆಗೂ ಸಿದ್ಧವಾಗದ ಕಾಂಗ್ರೆಸ್

Posted on April 1, 2011

0


ಮಂಗಳೂರು:ರಾಜಕೀಯದಲ್ಲಿ ಯಾವ ಚುನಾವಣೆಯನ್ನೂ ನಿರ್ಲಕ್ಷಿಸುವಂತಿಲ್ಲ. ಚುನಾವಣಾ ವಿಷಯವನ್ನು ಲಘುವಾಗಿ ಪರಿಗಣಿಸಿದರೆ ರಾಜಕೀಯ ಪಕ್ಷದ ಅಸ್ತಿತ್ವಕ್ಕೆ ಪೆಟ್ಟು ಬಿದ್ದಂತೆ ಎಂದು ಅನುಭವಿಗಳು ಹೇಳುತ್ತಾರೆ. ಸಣ್ಣದಾಗಲಿ ದೊಡ್ಡದಾಗಲಿ ಗೆಲುವು ಗುರಿಯಾಗಿಸಿಕೊಂಡ ಪಕ್ಷಕ್ಕೆ ಮಾತ್ರ ಅಸ್ತಿತ್ವ. ಆದರೆ ದ.ಕ. ಜಿಲ್ಲೆಯ ಕಾಂಗ್ರೆಸಿಗರಿಗೆ ಮಾತ್ರ ಈ ಸತ್ಯ ಮರೆತಂತೆ ಕಾಣುತ್ತಿದೆ. ಎಪಿಎಂಸಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದರೂ ಇನ್ನೂ ಕೂಡ ಅಭ್ಯರ್ಥಿಗಳ ಆಯ್ಕೆಯ ಮೂಲ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಚಾಲನೆ ನೀಡಿಲ್ಲ.

ದ.ಕ. ಜಿಲ್ಲೆಯ ಮಂಗಳೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಎ.೨೪ರಂದು ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಎ.೦೧ರಿಂದ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಆರಂಭವಾಗಿದೆ. ಈ ಚುನಾವಣೆಯ ಪ್ರಮುಖ ಪ್ರತಿಸ್ಪರ್ಧಿಗಳು ಎನಿಸುವ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಯಾವ ಪಕ್ಷ ಅಭ್ಯರ್ಥಿಗಳೂ ಇನ್ನೂ ನಾಮಪತ್ರ ಸಲ್ಲಿಸಲು ಮುಂದಾಗಿರುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಬಿಜೆಪಿಯವರು ನಮ್ಮ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ ಎಂದು ಧೈರ್ಯದಿಂದ ಹೇಳುತ್ತಿದ್ದಾರೆ.ಆದರೆ ಕಾಂಗ್ರೆಸ್‌ನಲ್ಲಿ ಇಂತಹ ಧೈರ್ಯ ಕಾಣುತ್ತಿಲ್ಲ. ಕಾಂಗ್ರೆಸಿಗರ ಪಟ್ಟಿ ಬಿಡುಗಡೆಗೆ ಎಂದಿನ ಸಂಪ್ರದಾಯದಂತೆ ಕೊನೆಯ ದಿನದವರೆಗೂ ಆಕಾಂಕ್ಷಿಗಳು ಕಾಯಬೇಕಾಗಿರುವುದು ಅನಿವಾರ್ಯ ಎನಿಸುತ್ತದೆ. ನಾಮಪತ್ರ ಸಲ್ಲಿಕೆಯ ಬಳಿಕ ಪ್ರಚಾರಕ್ಕೆ ಸಿಗುವುದು ಎರಡು ವಾರ ಮಾತ್ರ ಅದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಒಂದು ವಾರ ಟಿಕೆಟ್ ವಂಚಿತ ಹಾಗೂ ಅತೃಪ್ತರನ್ನು ತಣಿಸುವುದರಲ್ಲಿ ಕಳೆದು ಹೋಗುತ್ತದೆ. ಆ ಬಳಿಕದ ಒಂದು ವಾರದಲ್ಲಿ ಎಷ್ಟು ಮತದಾರರನ್ನು ತಲುಪಲು ಸಾಧ್ಯ ಎಂಬ ಆಕಾಂಕ್ಷಿಗಳ ಪ್ರಶ್ನೆಗೆ ಹಿರಿಯ ನಾಯಕರೆನಿಸಿದವರು ಉತ್ತರಿಸಬೇಕಾಗಿದೆ. ಆದರೆ ಇವರಿಂದ ಉತ್ತರ ಬರುತ್ತದೆ ಎಂಬ ನಿರೀಕ್ಷೆ ಕಾರ್ಯಕರ್ತರಲ್ಲಿ ಇಲ್ಲ.

ಕಳೆದ ಬಾರಿ ಈ ಮೂರು ಎಪಿಎಂಸಿಗಳು ಬಿಜೆಪಿಯ ತೆಕ್ಕೆಯಲ್ಲಿ ಇದ್ದವು. ಈ ಬಾರಿಯೂ ಅಂತಹದ್ದೇ ಸ್ಥಿತಿ ಪುನಾರಾವರ್ತನೆಯಾದರೆ ಅದಕ್ಕೆ ಹೊಣೆಗಾರರು ಕಾಂಗ್ರೆಸ್ ನಾಯಕರೇ ಹೊರತು ಪಕ್ಷದ ಅಭ್ಯರ್ಥಿಯಾಗಲಿ, ಕಾರ್ಯಕರ್ತರಾಗಿ ಅಥವಾ ಮತದಾರರಾಗಲಿ ಅಲ್ಲ ಎಂದು ಪಕ್ಷದ ಕಾರ್ಯಕರ್ತರು ಈಗಲೇ ಸ್ಪಷ್ಟಪಡಿಸಿದ್ದು, ಪಕ್ಷದ ನಾಯಕರ ಮೇಲೆ ಆಕ್ರೋಶ ಕಾರುತ್ತಿದ್ದಾರೆ. ಮಂಗಳೂರು ನಗರ ಹಾಗೂ ಉಳ್ಳಾಲ ಪುರಸಭೆಯನ್ನೊಳಗೊಂಡ ವಿಶಾಲ ವ್ಯಾಪ್ತಿಯಲ್ಲಿ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅವಕಾಶ ಇದೆ. ಇಲ್ಲಿ ಕಾಂಗ್ರೆಸ್‌ನಿಂದ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಡೆನಿಸ್ ಡಿಸೋಜಾರನ್ನು ಕಣಕ್ಕಿಳಿಸಲು ಬಹುಜನರ ಅಪೇಕ್ಷೆ ಇದೆ. ಏಕೆಂದರೆ ಇವರು ಕಳೆದ ಬಾರಿ ಕೇವಲ ೩೦ಮತಗಳ ಅಂತರದಿಂದ ಸೋತಿದ್ದರು. ಆದರೆ ಬಿಲ್ಲವರಿಗೆ ಪ್ರಾತಿನಿಧ್ಯ ಒದಗಿಸಿದರೆ ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಲಾಭ ಆಗಬಹುದು ಎಂಬ ಲೆಕ್ಕಾಚಾರವೂ ನಡೆದಿದೆ. ಇದರ ಮಧ್ಯೆ ನಾವೂ ಆಕಾಂಕ್ಷಿಗಳು ಎಂದು ಸುಧೀರ್ ಕಡೆಕಾರ್, ಉಮೇಶ್ಚಂದ್ರ ಸಂದೇಶ ನೀಡಿದ್ದಾರೆ. ಅಭ್ಯರ್ಥಿಯ ಆಯ್ಕೆಗಾಗಿಯೇ ಮಂಗಳೂರು ನಗರ ಹಾಗೂ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನಾಯಕರು ಐವನ್ ಡಿಸೋಜಾ ಹಾಗೂ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಎರಡು ಬಾರಿ ಸಭೆ ನಡೆಸಿದ್ದಾರೆ. ಆದರೆ ಅಭ್ಯರ್ಥಿಯ ಆಯ್ಕೆ ಅಂತಿಮಗೊಂಡಿಲ್ಲ. ಹೆಚ್ಚು ಕಡಿಮೆ ಇಂತಹದ್ದೇ ಸ್ಥಿತಿ ಎಲ್ಲಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಇದೆ.

Advertisements