ಮೆಡಿಕಲ್‌ಗೆ ನುಗ್ಗಿ ಹಲ್ಲೆ

Posted on April 1, 2011

0


ಮಂಗಳೂರು: ಮೆಡಿಕಲ್ ಸ್ಟೋರ್‌ಗೆ ನುಗ್ಗಿ ದಂಪತಿಗೆ ಹಲ್ಲೆ ನಡೆಸಿದ ಘಟನೆ ಬೈಂದೂರಿ ಶಿರೂರಿನ ಸಂತೆ ಮಾರುಕಟ್ಟೆ ಬಳಿ ನಡೆದಿದ್ದು ಈ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲ್ಲೆಗೊಳಗಾದವರನ್ನು ಶಿರೂರು ಗ್ರಾಮ ಚಂದ್ರಕಾತ್ ಪ್ರಭು ಹಾಗೂ ಪತ್ನಿ ರಾಜೇಶ್ವರಿ ಎಂದು ಗುರುತಿಸಲಾಗಿದ್ದು ಇವರಿಗೆ ಜೀವ ಬೆದರಿಕೆ ಕೂಡ ನೀಡಲಾಗಿದೆ. ಇವರಿಗೆ ರಾಜೇಶ್ ಶೆಟ್ಟಿ ಮತ್ತು ರಾಘವೇಂದ್ರ ಶೆಟ್ಟಿ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಾಡಿಗೆ ಅಂಗಡಿ ಕೋಣೆಯನ್ನು ಕರಾರಿನಂತೆ ಸತೀಶ ಶೆಟ್ಟಿ ಎಂಬವರಿಗೆ ಬಾಡಿಗೆಗೆ ವಹಿಸದಿದ್ದುದಕ್ಕೆ ಈ ಕೃತ್ಯ ನಡೆಸಿದ್ದಾರೆ ಎಂದು ಚಂದ್ರಕಾಂತ್ ಪ್ರಭು ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಕೆರೆಗೆ ಬಿದ್ದು ಯುವಕ ಮೃತ್ಯು: ಕಾಸರಗೋಡು ಸಮೀಪದ ಎಡನೀರು ಬಳಿ ನೀರು ಕೆರೆಗೆ ಇಳಿದ ಯುವಕ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕುಟ್ಟಿಪಾರ ನಿವಾಸಿ ಕುಞಂಬು ಆಚಾರಿ ಅವರ ಪುತ್ರ ಸತೀಶ್(೩೨) ಎಂಬಾತನೇ ಮೃತಪಟ್ಟ ದುರ್ಧೈವಿಯಾಗಿದ್ದಾನೆ.

ಗಂಗೊಳ್ಳಿ: ಅಕ್ಕ-ತಂಗಿ ನಾಪತ್ತೆ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋದರಿಯರು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಈ ಬಗ್ಗೆ ಗಂಗೊಳ್ಳಿ ಪೊಲೀಸರಿಗೆ ದೂರು ನೀಡಲಾಗಿದೆ. ಅಬ್ದುಲ್ ಸತ್ತಾರ್ ಅವರ ಪುತ್ರಿಯರಾದ ನಿಲೋಫರ್(೨೦) ಹಾಗೂ ಸುನೈನಾ(೧೪) ಎಂಬವರು ಮಾರ್ಚ್ ೨೮ರಂದು ಬೆಳಗ್ಗೆ ಮನೆಯಿಂದ ಹೊರಗೆ ಹೋದವರು ನಾಪತ್ತೆ ಯಾಗಿರುವುದಾಗಿ ತಿಳಿದುಬಂದಿದೆ. ಮನೆಯಿಂದ ಹೋಗುವಾಗ ಬಟ್ಟೆಬರೆ ಹಾಗೂ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದು, ಸಂಶಯಕ್ಕೆ ಕಾರಣವಾಗಿದೆ.

ಮನೆಗೆ ನುಗ್ಗಿ ಕಳವು : ನಗರದ ಜೆಪ್ಪುವಿನ ಅಪಾರ್ಟ್‌ಮೆಂಟ್ ಒಂದರ ಮನಗೆ ನುಗ್ಗಿದ ಕಳ್ಳರು ನಗದು ಹಣ ಕಳವು ಮಾಡಿರುವ ಬಗ್ಗೆ ಪಾಂಡೇಶ್ವರ ಪೊಲೀಸರಿಗೆ ದೂರಲಾಗಿದೆ. ೧೦,೦೦೦ ರೂ. ನಗದು ಕಳವುಗೈಯಲಾಗಿದ್ದು, ಮಾರ್ಚ್ ೧೪ರಿಂದ ೨೮ರೊಳಗೆ ಕಳ್ಳತನ ನಡೆದಿದೆ. ಶಾಹಿರಾ ಅವರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕೃತ್ಯವೆಸಗಿದ್ದಾರೆ.

Advertisements
Posted in: Crime News