ಬಸ್‌ಗಳ ಮುಖಾಮುಖಿ ಡಿಕ್ಕಿ: ೧೫ಮಂದಿಗೆ ಗಾಯ

Posted on April 1, 2011

0


ಮಂಗಳೂರು: ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದು ೧೫ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಬೆಟ್ಟಿ ಕ್ರಾಸ್‌ನಲ್ಲಿ ಸಂಭವಿಸಿದೆ.

ಶೇಖರ, ಜ್ಯೋತಿ, ಕೃಷ್ಣ, ಸಂತೋಷ, ಜಯಲಕ್ಷ್ಮಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರೆ, ಉಳಿದವರು ಸಾಮಾನ್ಯ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಬ್ರಿಯಿಂದ ಕೊಕ್ಕಣೆಯತ್ತ ಹೋಗುತ್ತಿದ್ದ ಖಾಸಗಿ ಬಸ್ ಚಂರಡಿಗೆ ಉರುಳಿ ಸಂಪೂರ್ಣ ಜಖಂಗೊಂಡಿದೆ. ಎದುರಿನಿಂದ ಬಂದ ಬಸ್ ಕೊಕ್ಕಣೆಯಿಂದ ಹೆಬ್ರಿ ಕಡೆಗೆ ತೆರಳುತ್ತಿತ್ತೆನ್ನಲಾಗಿದೆ.

ಅಪಘಾತ ನಡೆದ ಸ್ಥಳ ತಿರುವಿನಿಂದ ಕೂಡಿದ್ದು, ಇತ್ತೀಚೆಗಷ್ಟೇ ಇಲ್ಲಿ ಡಾಮರು ಹಾಕಲಾಗಿತ್ತು. ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪತಿ ಅಸ್ವಸ್ಥ: ಪತ್ನಿಯ ಆತ್ಮಹತ್ಯೆ; ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಲ್ಕಿ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯ ಕಾಡು ಶುಭಗಿರಿ ಕಾಲನಿಯಲ್ಲಿ ನಡೆದಿದೆ.

ಮೃತರನ್ನು ಶುಭಗಿರಿ ನಿವಾಸಿ ದೇಜಮ್ಮ(೭೫)ಎಂದು ಗುರುತಿಸಲಾಗಿದೆ. ಇವರ ಪತಿ ಅಸ್ವಸ್ಥತೆಯಿಂದ ಬಳಲುತ್ತಿದ್ದರೆನ್ನಲಾಗಿದ್ದು ಅದನ್ನು ನೋಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇವರಿಗೆ ನಾಲ್ಕು ಮಕ್ಕಳಿದ್ದು ಅವರೆಲ್ಲ ಬೇರೆಬೇರೆ ಮನೆ ಮಾಡಿಕೊಂಡಿದ್ದಾರೆ. ತಮ್ಮನ್ನು ನೋಡುವವರು ಯಾರೂ ಇಲ್ಲ ಎಂಬ ಬೇಸರದಲ್ಲಿ ಆತ್ಯಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಗುರುವಾರ ಮುಂಜಾನೆ ಬಾವಿಯ ಹಗ್ಗದ ಕುಣಿಕೆಯನ್ನು ಕೊರಳಿಗೆ ಬಿಗಿದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾವಿಗೆ ಬಿದ್ದು ಮೃತ್ಯು: ಕೊಂಕಣ ರೈಲ್ವೆ ವಸತಿ ಗೃಹದ ಬಳಿಯ ನಿವಾಸಿ ವಿಶ್ವನಾಥ ಶೆಟ್ಟಿ ಎಂಬವರು ತನ್ನ ಮನೆಯ ಬಾವಿಯಿಂದ ನೀರು ಸೇದುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎರಡು ಶವ ಪತ್ತೆ: ತಡಂಬೈಲ್ ಮತ್ತು ಮುಕ್ಕದಲ್ಲಿ ಗುರುವಾರ ಎರಡು ಅಪರಿಚಿತ ಶವಗಳು ಪತ್ತೆಯಾಗಿವೆ.

ತಡಂಬೈಲ್ ಗರುಡ ಬಾರ್ ಬಳಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಸುಮಾರು ೫೦ವರ್ಷ ಪ್ರಾಯದ ವ್ಯಕ್ತಿಯ ಶವ ಪತ್ತೆಯಾಗಿದೆ.

ಮುಕ್ಕ ಕಡಲ ಕಿನಾರೆಯಲ್ಲಿ ಕೊಳೆತ ಸ್ಥಿಯಲ್ಲಿ ಇನ್ನೊಂದು ಶವ ಪತ್ತೆಯಾಗಿದೆ. ೧೫ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಹಲ್ಲೆ, ಜೀವಬೆದರಿಕೆ :ಕುಂದಾಪುರ ತಾಲೂಕಿನ ಶಿರೂರು ಸಂತೆ ಮಾರ್ಕೆಟ್ ಬಳಿಯ ಎಂಜಿಎಂ ಮೆಡಿಕಲ್‌ನಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ರಾಜೇಶ್ ಶೆಟ್ಟಿ ಮತ್ತು ರಾಘವೇಂದ್ರ ಶೆಟ್ಟಿ ಎಂಬವರು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಚಂದ್ರಕಾಂತ ಪ್ರಭು ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.

Advertisements
Posted in: Crime News