ಪೆಟ್ರೋಲ್ ಬಂಕ್ ತೆರವು

Posted on April 1, 2011

0


ಮಂಗಳೂರು: ಹಲವಾರು ವರ್ಷ ಗಳಿಂದ ಕದ್ರಿ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಕಾರ್ಯಾಚರಿಸುತ್ತಿದ್ದ ಪೆಟ್ರೋಲ್ ಬಂಕನ್ನು ಅನಧಿಕೃತವೆಂದು ನ್ಯಾಯಾಲಯ ಘೋಷಿ ಸಿದ ಬಳಿಕ ನಿನ್ನೆ ಎಸಿಯವರ ಸಮ್ಮುಖದಲ್ಲಿ ತೆರವುಗೊಳಿಸಲಾಗಿದೆ.

೧೯೮೬ರಲ್ಲಿ ದುಲ್ಸಿನ್ ಡಿಸೋಜ ಮತ್ತು ಕ್ಯಾನೂಟ್ ಡಿಸೋಜ ಅವರಿಗೆ ಅಲ್ಪ ಸಂಖ್ಯಾತರ ಖೋಟಾದಡಿ ಸರಕಾರದ ನಿಯಮದಂತೆ ೧೦ ಸೆಂಟ್ಸ್ ಜಾಗವನ್ನು ಉದ್ಯಮಕ್ಕಾಗಿ ನೀಡಲಾಗಿತ್ತು. ಇದರಲ್ಲಿ ಮನೆ, ಸರ್ವೀಸ್ ಸೆಂಟರ್ ಕಟ್ಟಲಾಗಿತ್ತು. ಎದುರು ಭಾಗದಲ್ಲಿ ೪೨ ಸೆಂಟ್ಸ್ ಸರಕಾರಿ ಭೂಮಿಯಿದ್ದು ಅದರಲ್ಲಿ ಪೆಟ್ರೋಲ್ ಬಂಕ್ ಮತ್ತು ಪೆಟ್ರೋಲ್ ಟ್ಯಾಂಕ್ ತೆರೆಯಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಳೆದ ೧೫ ವರ್ಷ ಗಳಿಂದ ಜಿಲ್ಲಾಡಳಿತ ಮತ್ತು ಕ್ಯಾನೂಟ್ ಅವರ ನಡುವೆ ಹೈಕೋರ್ಟ್‌ನಲ್ಲಿ ದಾವೆ ನಡೆಯುತ್ತಿತ್ತು. ಮೊನ್ನೆ ಪೆಟ್ರೋಲ್ ಬಂಕ್ ಮತ್ತು ಪೆಟ್ರೋಲ್ ಟ್ಯಾಂಕ್ ಇರುವ ಜಾಗವು ಸರಕಾರದ್ದಾಗಿದ್ದು ಅದನ್ನು ತೆರವುಗೊಳಿಸುವಂತೆ ನ್ಯಾಯಾಲಯದಿಂದ ಆದೇಶ ಬಂದಿದ್ದು ಜಿಲ್ಲಾಧಿಕಾರಿಯವರ ಸೂಚನೆಯಂತೆ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಹಾಯಕ ಆಯುಕ್ತರಾದ ಪ್ರಭುಲಿಂಗ ಕಾವಳಿಕಟ್ಟೆ ಅವರು ತಿಳಿಸಿದ್ದಾರೆ.

೧೯೮೬ರಲ್ಲಿ ಸರಕಾರದ ಕೋಟಾದಡಿ ೧೦ ಸೆಂಟ್ಸ್ ಜಾಗವನ್ನು ಉದ್ಯಮಕ್ಕಾಗಿ ನೀಡಲಾಗಿದ್ದರೂ ಅದರ ಮುಂದೆ ಇರುವ ೨೫ ಸೆಂಟ್ಸ್ ಜಾಗವನ್ನು ಉದ್ಯಮಕ್ಕಾಗಿ ಉಪಯೋಗಿಸಿಕೊಳ್ಳಬಹುದು ಎಂದು ಅಂದಿನ ಜಿಲ್ಲಾಧಿಕಾರಿ ಮೌಖಿಕವಾಗಿ ತಿಳಿಸಿದ್ದರು. ಅದರಂತೆ ೨೫ ಸೆಂಟ್ಸ್ ಜಾಗದಲ್ಲಿ ಪೆಟ್ರೋಲ್ ಬಂಕ್ ಮತ್ತು ಟ್ಯಾಂಕ್ ನಿರ್ಮಿಸಲಾಗಿತ್ತು ಎಂದು ತಿಳಿಸಿರುವ ಕ್ಯಾನ್ಯೂಟ್ ಡಿಸೋಜ ಅವರು ಇಲ್ಲಿರುವುದು ೪೨ ಸೆಂಟ್ಸ್ ಅಲ್ಲ, ೨೫ ಸೆಂಟ್ಸ್ ಜಾಗ ಎಂದು ಪ್ರತಿಪಾದಿಸಿದ್ದಾರೆ. ೧೯೮೬ ರಲ್ಲಿ ಜಾಗವನ್ನು ನೀಡುವ ವೇಳೆ ಅಂದಿನ ಜಿಲ್ಲಾಧಿಕಾರಿಯವರು ಎದುರು ಇರುವ ಜಾಗವನ್ನು ಉಪಯೋಗಿಸಿಕೊಳ್ಳಬಹುದು ಎಂದು ಅಗ್ರಿ ಮೆಂಟ್‌ನಲ್ಲಿ ತಿಳಿಸಿ ನಕ್ಷೆಯನ್ನೂ ನೀಡಿದ್ದಾರೆ. ಅದರ ಪರಿಧಿಯೊಳಗೆ ನಮ್ಮ ಉದ್ಯಮ ಇದೆ. ಇದೇ ವಿಷಯಕ್ಕೆ ಸಂಬಂಧಿಸಿ ಹೈಕೋರ್ಟ್ ಮೂರು ಬಾರಿ ತಡೆಯಾಜ್ಞೆಯನ್ನೂ ನೀಡಿತ್ತು. ಆದರೂ ನಮಗೆ ಸಮಯಾವಕಾಶವನ್ನೂ ನೀಡದ ಜಿಲ್ಲಾಧಿಕಾರಿ ನಿನ್ನೆ ಏಕಾಏಕಿ ಸಾಮಗ್ರಿಗಳನ್ನು ತೆರವುಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯಕ್ಕೆ ಮೊರೆ ಹೋಗಲಾಗುವುದು ಎಂದು ಕ್ಯಾನೂಟ್ ಅವರ ತಮ್ಮ ವಿಕ್ಟರ್ ಡಿ’ಸೋಜ ಪತ್ರಿಕೆಗೆ ತಿಳಿಸಿದ್ದಾರೆ.

Advertisements