ಅಕ್ರಮ ಮರಳುಗಾರಿಕೆ ಮೇಲೆ ತಹಶೀಲ್ದಾರ್ ದಾಳಿ

Posted on April 1, 2011

0


ಬಂಟ್ವಾಳ: ಪುದು ಗ್ರಾಮದ ಸುಜೀರು ಎಂಬಲ್ಲಿ ನೇತ್ರಾವತಿ ನದಿಗೆ ಜೆಸಿಬಿ ಇಳಿಸಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸಂದರ್ಭ ದಾಳಿ ನಡೆಸಿದ ತಹಶೀಲ್ದಾರ್ ನೇತೃತ್ವದ ತಂಡ ಇಟೇಜ್, ಲಾರಿ ಹಾಗೂ ಮರಳನ್ನು ವಶ ಪಡಿಸಿಕೊಂಡ ಘಟನೆ ನಿನ್ನೆ ನಡೆದಿದೆ.

ಫರಂಗಿಪೇಟೆ ಪೆಟ್ರೋಲ್ ಪಂಪ್ ಬಳಿ ಅನಧಿಕೃತವಾಗಿ ದಾರಿ ನಿರ್ಮಿಸಿ ನೇತ್ರಾವತಿ ನದಿಯಿಂದ ಮರಳು ಸಾಗಿಸಿದ್ದರೆಂದು ಇಲ್ಲಿನ ನಿವಾಸಿಗಳು ಹಲವು ಬಾರಿ ದೂರು ನೀಡಿದ್ದರು. ಆದರೂ ತಾಲೂಕು ಕಚೇರಿಯ ಅಧಿಕಾರಿಗಳು ಕ್ರಮ ಜರುಗಿಸಿರಲಿಲ್ಲ. ಇದ ರಿಂದ ಅಸಮಾಧಾನಗೊಂಡ ಸಾರ್ವಜನಿಕರು ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಬಂಟ್ವಾಳ ತಹಶೀಲ್ದಾರ್ ರವಿಚಂದ್ರ ನಾಕ್ ಹಾಗೂ ಸಿಬ್ಬಂದಿ ಮರಳು ನೀತಿಯನ್ನು ಉಲ್ಲಂಘಿಸಿದ ಆರೋಪದಲ್ಲಿ ಇಟೇಜ್, ಲಾರಿ ಹಾಗೂ ಮರಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಸ್ಥಳೀಯ ನಿವಾಸಿ ಲತೀಫ್ ಎಂಬವರಿಗೆ ಮರಳು ಉದ್ಧಿಮೆಗೆ ಪರವಾನಿಗೆ ನೀಡ ಲಾಗಿತ್ತು. ಇಲಾಖೆ ನೀಡಿದ ಪರವಾನಿಗೆಯನ್ನು ಉಲ್ಲಂಘಿಸಿದ ಪರವಾನಿಗೆದಾರರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರೆನ್ನಲಾಗಿದೆ. ಮರಳುಗಾರಿಕೆಯ ಪರವಾನಿಗೆಯನ್ನು ರದ್ದು ಪಡಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಶಿಫಾರಸ್ಸು ಮಾಡಲಾಗುವುದಾಗಿ ತಹಶೀಲ್ದಾರ್ ರವಿಚಂದ್ರ ನಾಕ್ ಅವರು ತಿಳಿಸಿದ್ದಾರೆ. ಹಲವು ವರ್ಷಗಳಿಂದ ನಡೆಸ ಲಾಗುತ್ತಿದ್ದ ಇಲ್ಲಿನ ಭಾರೀ ಪ್ರಮಾಣದ ಮರಳುಗಾರಿಕೆಯ ಬಗ್ಗೆ ಜಯಕಿರಣ ವರದಿ ಪ್ರಕಟಿಸಿ, ಜಿಲ್ಲಾಡಳಿತದ ಗಮನ ಸೆಳೆದಿತ್ತು. ಅಕ್ರಮ ಮರಳುಗಾರಿಕೆ ತಡೆಗೆ ಕ್ರಮ ಜರುಗಿಸದ ಕಂದಾಯ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ಗರಂ ಆಗಿದ್ದರು. ಈ ಹಿನ್ನಲೆಯಲ್ಲಿ ನಡೆಸಿ ತಹಶೀಲ್ದಾರ್ ಕಾರ್ಯಾಚರಣೆ ಸ್ಥಳೀಯ ನಾಗರಿಕರನ್ನು ಸಮಾಧಾನಗೊಳಿಸಿದೆ. ಮರಳು ಉದ್ದಿಮೆದಾರರೊಂದಿಗೆ ಕಚೇರಿಯ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಆರೋಪವೂ ಕೇಳಿಬರುತ್ತಿದೆ.

Advertisements
Posted in: Crime News