ಫಂಡ್‌ರಹಿತ ಚುನಾವಣೆ: ಎಚ್.ಡಿ. ಕುಮಾರ

Posted on March 25, 2011

0ಮಂಗಳೂರು: ಮುಂದಿನ ಚುನಾವಣೆಗಳಲ್ಲಿ ಜೆ.ಡಿ. ಎಸ್.ನಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಫಂಡ್ ನೀಡದೆ ಸ್ಪರ್ಧೆಗಿಳಿಸುವ ಮೂಲಕ ನೂತನ ಪ್ರಯೋಗಕ್ಕೆ ಚಿಂತನೆ ನಡೆಸಲಾಗಿದೆ. ಇದು ಜೆ.ಡಿ.ಎಸ್. ರಾಜ್ಯಾಧ್ಯಕ್ಷರೂ ಮಾಜಿ ಮುಖ್ಯಮಂತ್ರಿಯೂ ಆಗಿರುವ ಎಚ್.ಡಿ. ಕುಮಾರಸ್ವಾಮಿ ಅವರ ಮನದ ಇಂಗಿತ.
ನಿನ್ನೆ ಮಂಗಳೂರಿಗೆ ಬಂದಿದ್ದ ಅವರು ಬಳಿಕ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ದ.ಕ. ಜಿಲ್ಲೆಯಿಂದ ಸ್ಪರ್ದಿಸಿದ ಅಭ್ಯರ್ಥಿ ಗಳಿಗೆ ಪಕ್ಷದಿಂದ ಫಂಡ್ ಬಂದಿಲ್ಲ ಎನ್ನುವ ಆರೋಪದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಈ ವೇಳೆ ಉತ್ತರಿಸಿದ ಎಚ್‌ಡಿಕೆ ನಮ್ಮ ಪಕ್ಷದಲ್ಲಿ ಅಕ್ರಮವಾಗಿ ಗಳಿಸಿದ ಹಣ ಇಲ್ಲದ ಕಾರಣ ಅಭ್ಯರ್ಥಿಗಳಿಗೆ ಫಂಡ್ ನೀಡಿಲ್ಲ. ಇದರಿಂದ ಪಕ್ಷದ ಸ್ಥಿತಿಯ ಬಗ್ಗೆ ತಿಳಿಯಬಹುದು’ ಎಂದು ತಿಳಿಸಿದರು.
ರಾಮಕೃಷ್ಣ ಹೆಗ್ಡೆಯವರ ಕಾಲದಿಂದಲೂ ಕರಾವಳಿ ಭಾಗದಲ್ಲಿ ಜೆಡಿಎಸ್ ದುರ್ಬಲವಾಗಿದೆ. ಅಲ್ಲದೆ ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ತಾವು ಅಲ್ಪಸಂಖ್ಯಾತರ ರಕ್ಷಕರು ಎಂದು ಹೇಳಿಕೊಳ್ಳುತ್ತಾ ಬಂದಿದ್ದರೆ, ಬಿ.ಜೆ.ಪಿ, ತಾವು ಹಿಂದೂಗಳ ರಕ್ಷಕ ಎಂಬ ಭಾವನೆಯನ್ನು ಜನರಲ್ಲಿ ಮೂಡಿ ಸಿದೆ. ಇದೀಗ ಅಂತಹ ಭಾವನೆಯಿಂದ ಯುವಕರು ಹೊರ ಬರುತ್ತಿದ್ದು ಇದನ್ನೇ ಬಳಸಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಬೆಳೆಸುವ ಪ್ರಯತ್ನ ನಡೆಸಲಾಗುವುದು. ಆದರೆ ಅದಕ್ಕೆ ಸಾಕಷ್ಟು ಪ್ರಯತ್ನ ಅಗತ್ಯವಿದೆ ಎಂದರು. ಮಹೇಂದ್ರ ಕುಮಾರ್ ಅವರು ಹಿಂದೆ ಮಾಡಿದ ತಪ್ಪುಗಳನ್ನು ಅರಿತು ಮುಂದೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳುವ ಇಚ್ಛೆ ಹೊಂದಿದ್ದಾರೆ. ಚರ್ಚ್ ದಾಳಿಯ ಬಳಿಕ ಕ್ರೈಸ್ತ ಧರ್ಮಗುರುಗಳ ಬಳಿ ಕ್ಷಮೆ ಯಾಚಿಸಿದ್ದಾರೆ. ಇದನ್ನು ಗಮನದಲ್ಲಿರಿಸಿ ಅವರಿಗೆ ಜೆಡಿಎಸ್‌ಗೆ ಸೇರ್ಪಡೆಗೊಳಿಸಲಾಗಿದ್ದು ಇದು ಅವಕಾಶವಾದ ರಾಜಕಾರಣ ಅಲ್ಲ ಎಂದು ಕುಮಾರಸ್ವಾಮಿ ಸಮರ್ಥಿಸಿದರು. ಜೆ.ಡಿ.ಎಸ್. ಅಪ್ಪ ಮಕ್ಕಳ ಪಕ್ಷ ಎಂಬ ಅಪವಾದದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರು ನಿಯಂತ್ರಿಸುತ್ತಿದ್ದಾರೆಯೇ ಅಥವಾ ಏಕೈಕ ನಾಯಕಿ ನಿಯಂತ್ರಿಸುತ್ತಿದ್ದಾರೆಯೇ ? ಎಂದು ಮರು ಪ್ರಶ್ನಿಸಿದ ಅವರು ರಾಜ್ಯದಲ್ಲಿ ಬಿ.ಜೆ.ಪಿ.ಯನ್ನು ಯಡಿಯೂರಪ್ಪ ನಿಯಂತ್ರಿಸುತ್ತಿದ್ದಾರೆ. ಆದರೆ ಅದರ ಬಗ್ಗೆ ಪ್ರಶ್ನಿಸದೆ ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾತು ಉಳಿಸಿದ ಎಚ್‌ಡಿಕೆ

ಕಳೆದ ವರ್ಷ ನವೆಂಬರ್‌ನಲ್ಲಿ ಸುಳ್ಯ ತಾಲೂಕು ಧರ್ಮಡ್ಕ ಕಾಲನಿಯ ನಿವಾಸಿ ವಿಧವೆ ವಿಜಯಲಕ್ಷ್ಮಿ ರೈ ಎಂಬವರು ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಡುಬಡತನದಲ್ಲಿ ಬೆಂದಿದ್ದ ಅವರು ಹಾಗೂ ಮಕ್ಕಳ ದುಸ್ಥಿತಿಯ ಬಗ್ಗೆ ಮಾಧ್ಯಮದಲ್ಲಿ ವರದಿ ನೋಡಿದ ಕುಮಾರಸ್ವಾಮಿ ರಾಜಕೀಯ ಜಂಜಾಟದ ನಡುವೆಯೂ ಬೆಂಗಳೂರಿನಿಂದ ನೇರವಾಗಿ ಆಸ್ಪತ್ರೆಗೆ ದೌಡಾಯಿಸಿ ಮಹಿಳೆಯ ತಕ್ಷಣದ ಚಿಕಿತ್ಸೆಗಾಗಿ ಆಸ್ಪತ್ರೆಗೆ ೪೦ ಸಾವಿರ ಪಾವತಿಸಿದ್ದ ಅವರು ಚಿಕಿತ್ಸೆಯ ಸಂಪೂರ್ಣ ಖರ್ಚು-ವೆಚ್ಚಗಳನ್ನು ಭರಿಸುವ ಭರವಸೆ ನೀಡಿದ್ದರು. ಅಲ್ಲದೆ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ಅವರು ಅಂದು ನೀಡಿದ ಭರವಸೆಯನ್ನು ನೆನಪಿನಲ್ಲಿಟ್ಟುಕೊಂಡು ನಿನ್ನೆ ಮತ್ತೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯವನ್ನು ವಿಚಾರಿಸಿ ಇನ್ನುಳಿದ ೩೬ ಸಾವಿರ ಬಿಲ್ಲನ್ನು ಪಾವತಿಸಲು ಬಂದಿದ್ದರು. ಆದರೆ ಆಸ್ಪತ್ರೆ ಮಾಲಕ ಎಜೆ ಶೆಟ್ಟಿ ಅದನ್ನು ಮನ್ನಾ ಮಾಡಿದ್ದು ಕುಮಾರಸ್ವಾಮಿ ಶ್ಲಾಘಿಸಿದರು. ಮಹಿಳೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೂರು ಲಕ್ಷ ಡಿಪಾಸಿಟ್ ಇಟ್ಟಿರುವುದನ್ನು ಘೋಷಿಸಿದರು. ಈ ಮೂಲಕ ತಾನು ಬಡವರ ಪರ ಮತ್ತು ಮಾತು ತಪ್ಪುವ ನಾಯಕನಲ್ಲ ಎಂಬುದನ್ನು ಸಾಬೀತುಪಡಿಸಿದರು. ಇದೇ ವೇಳೆ ಅದೇ ಆಸ್ಪತ್ರೆಯಲ್ಲಿ ಸೀಳುದುಟಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಚಿತ್ರದುರ್ಗ ಹಾಸನಹಳ್ಳಿ ನಿವಾಸಿ ಚೈತ್ರಾ(೬) ಎಂಬಾಕೆಯ ಚಿಕಿತ್ಸೆಗೆ ಸಹಾಯ ಮಾಡುವಂತೆ ಆಕೆಯ ತಾಯಿ ರತ್ನಮ್ಮ ವಿನಂತಿಸಿದರು. ಅದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ ಬಾಲೆಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವ ಭರವಸೆ ನೀಡುವ ಮೂಲಕ ಇನ್ನೊಂದು ಜೀವಕ್ಕೆ ಆಸರೆಯಾದರು.
ಜೆಡಿಎಸ್ ಕಾರ್ಯಕ್ರಮದಲ್ಲಿ ಕುರ್ಚಿಗಾಗಿ ಹೋರಾಟ!

ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಕಾರ್ಯಕರ್ತರಿಗಿಂತಲೂ ಮುಖಂ ಡರೇ ಹೆಚ್ಚು ಎನ್ನುವ ಕುಹಕದ ಮಾತಿದೆ. ಯಾಕೆಂದರೆ ಇವರು ಜನರ ಮಧ್ಯೆ ಇರುವುದಕ್ಕಿಂತಲೂ ಹೆಚ್ಚಾಗಿ ವೇದಿಕೆ ಯಲ್ಲಿ ಹಾಗೂ ರಾಜ್ಯ-ರಾಷ್ಟ್ರಮಟ್ಟದ ನಾಯಕರ ಹಿಂದೆ-ಮುಂದೆ ನಿಂತು ಮಾಧ್ಯಮ ಮತ್ತು ಪತ್ರಿಕಾ ಛಾಯಾ ಗ್ರಾಹಕರಿಗೆ ಪೋಸ್ ನೀಡಲು ಬಯಸುತ್ತಿರುವುದು ಸಾಮಾನ್ಯವಾಗಿ ಕಂಡು ಬರುವ ವಿಷಯವಾಗಿದೆ.
ನಿನ್ನೆ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡ ಎಂ.ಜಿ.ಹೆಗ್ಡೆ ಮತ್ತಿತರರನ್ನು ಪಕ್ಷಕ್ಕೆ ಸೇರ್ಪಡೆ ಗೊಳಿಸುವ ಕಾರ್ಯಕ್ರಮವನ್ನು ಖಾಸಗಿ ಹೋಟೇಲಿನಲ್ಲಿ ಹಮ್ಮಿಕೊಳ್ಳ ಲಾಗಿತ್ತು. ನಾಯಕರು ಬಂದೊಡನೆ ಅವರ ಹಿಂದೆ-ಮುಂದೆ ನಿಂತು ಮಾಧ್ಯಮಗಳಲ್ಲಿ ಮುಖ ಗಿಟ್ಟಿಸಿ ಹೀರೋ ಆಗಲು ಯತ್ನಿಸುತ್ತಿರುವ ಸ್ವಯಂಘೋಷಿತ ನಾಯಕರ ಬಗ್ಗೆ ಅರಿತಿದ್ದ ಜಿಲ್ಲಾ ಮುಖಂಡರು ಈ ಬಾರಿಯಾದರೂ ಅದಕ್ಕೆ ಕಡಿವಾಣ ಹಾಕಿ ಕುಮಾರಸ್ವಾಮಿ ಮತ್ತು ಮಾಧ್ಯಮದವರ ಮುಂದೆ ಶಿಸ್ತನ್ನು ತೋರ್ಪಡಿಸಲು ಬಯಸಿದ್ದರೋ ಏನೋ ?
ವೇದಿಕೆಯಲ್ಲಿ ಕೇವಲ ಆರು ಕುರ್ಚಿಗಳನ್ನು ಮಾತ್ರವೇ ಇಡಲಾಗಿತ್ತು. ಆದರೆ ಕುಮಾರಸ್ವಾಮಿ ವೇದಿಕೆ ಏರಿದಾಗ ಅವರ ಜೊತೆ ಸಾಕಷ್ಟು ಮಂದಿಯೂ ಏರಿದರು. ಆಗ ಅಗತ್ಯವಿಲ್ಲದವರು ವೇದಿಕೆ ಬಿಡುವಂತೆ ಮೈಕ್ ಮೂಲಕ ತಿಳಿಸಲಾಯಿತು. ಈ ಸಂದರ್ಭದಲ್ಲಿ ಒಂದೆರಡು ಮಂದಿ ಸಮ್ಮತಿಸಿದರಾದರೂ ಇನ್ನುಳಿದವರು ವೇದಿಕೆಯ ಮೇಲೆಯೇ ಓಡಾಡ ತೊಡಗಿದರು. ಸ್ವಲ್ಪ ಹೊತ್ತಿನಲ್ಲಿ ಯೇ ಕುರ್ಚಿಗಳನ್ನು ತಂದು ಕುಳಿತೇ ಬಿಟ್ಟರು. ಆದರೆ ಕುರ್ಚಿ ಸಿಗದವರು ಕುಳಿತವರು (ಅದರಲ್ಲೂ ಕುಮಾರಸ್ವಾಮಿಯ) ಹಿಂಭಾಗದಲ್ಲಿ ನಿಂತೇ ಇದ್ದರು. ಪಕ್ಷ ಸೇರ್ಪಡೆಯ ಘೋಷಣೆ ಬರುತ್ತಿದ್ದಂತೆಯೇ ಇನ್ನಷ್ಟು ಪ್ರಚಾರಪ್ರಿಯರು ವೇದಿಕೆ ಏರಿ ಫೊಟೋ ಪೋಸ್‌ಗಾಗಿ ಪೈಪೋಟಿ ನಡೆಸಿದ್ದು ನೈಜ ಕಾರ್ಯಕರ್ತ ರಲ್ಲಿ ಅಸಹನೆಗೆ ಕಾರಣವಾಯಿತು.

Advertisements