ಪೊಲೀಸ್ ಬಾತ್ಮೀ ನಿಗೂಢ ನಾಪತ್ತೆ

Posted on March 25, 2011

0


ಮುಲ್ಕಿ: ಮುಲ್ಕಿ ಪೊಲೀಸರಿಗೆ ಮಾಹಿತಿದಾರನಾಗಿದ್ದ ವ್ಯಕ್ತಿಯೋರ್ವ ಗೋಲ್‌ಮಾಲ್ ನಡೆಸಿ ನಾಪತ್ತೆ ಆಗಿದ್ದು ಆತನಿಂದ ವಂಚನೆಗೆ ಒಳಗಾದವರು ಶೋಧನೆ ನಡೆಸುತ್ತಿದ್ದಾರೆ. ಕುತೂಹಲ ಎಂದರೆ ಪೊಲೀಸ್ ಬಾತ್ಮೀದಾರನ ಹುಡುಕಾಟದಲ್ಲಿ ಪೊಲೀಸರು ಸಹ ಸೇರಿದ್ದಾರೆ.
ನಾಪತ್ತೆಯಾದ ಬಾತ್ಮೀದಾರ ಕೆಂಚನಕೆರೆ ಬಳಿಯ ಅಂಗರಗುಡ್ಡೆಯ ನಿವಾಸಿಯಾಗಿದ್ದು ಕಾರ್ನಾಡುವಿನಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ. ಏಕಾಏಕಿ ಸಿರಿವಂತನಾಗಿ ಬೆಳೆದದ್ದು ಹಲವರ ಸಂಶಯಕ್ಕೆ ಕಾರಣವಾಗಿತ್ತು. ರಿಕ್ಷಾ ವೃತ್ತಿಯಲ್ಲಿದ್ದಾಗ ಕುರಿಫಂಡ್ ಮೂಲಕ ಶ್ರೀಮಂತನಾದ ಈತ ಮೂಲ್ಕಿ ಪೊಲೀಸರ ಸ್ನೇಹವನ್ನು ಪಡೆದುಕೊಂಡು ಅವರಿಗೆ ಮಾಹಿತಿ ದಾರನಾಗಿ ಬೆಳೆದಿದ್ದ. ರಿಕ್ಷಾ ಚಾಲಕ ವೃತ್ತಿಗೆ ಸಲಾಂ ಹೊಡೆದು ಅಲ್ಲೇ ಫ್ಯಾನ್ಸಿ ಅಂಗಡಿ ಮಾಡಿಕೊಂಡು ಅದನ್ನೇ ತನ್ನ ವಹಿವಾಟಿನ ಮುಖ್ಯ ಕಚೇರಿ ಮಾಡಿಕೊಂಡಿದ್ದ.
ಲಕ್ಷಾಂತರ ಮೊತ್ತದ ಕುರಿ ಫಂಡ್‌ನ್ನು ನಡೆಸಿಕೊಂಡು ಅದರಲ್ಲಿ ಪೊಲೀಸರನ್ನೂ ಸೇರಿಸಿಕೊಂಡಿದ್ದ. ಇದರಿಂದ ಪೊಲೀಸರೊಂದಿಗಿನ ಸಂಬಂಧ ಮತ್ತಷ್ಟು ಆಪ್ತವಾಗಿ ಅವರಿಗೆ ಅಗತ್ಯ ಸಂದರ್ಭದಲ್ಲಿ ಫೈನಾನ್ಸ್ ವ್ಯವಸ್ಥೆ ಮಾಡುತ್ತಿದ್ದ. ಪೊಲೀಸ್ ಠಾಣೆ ಮೆಟ್ಟಿಲು ಹತ್ತದ ಕೆಲ ಕೇಸುಗಳನ್ನು ತಾನೆ ಠಾಣೆಯ ಮೆಟ್ಟಿಲು ಹತ್ತಿಸುವುದು, ರಾಜಿ ಕಬೂಲಿ ನಡೆಸುವುದು ಇದಕ್ಕಾಗಿ ಕಾಸು ವಸೂಲಿ ಮಾಡುವ ದಂಧೆ ನಡೆಸುತ್ತಿದ್ದ. ಠಾಣೆಯಲ್ಲಿ ಈತ ವಶೀಲಿ ಬಾಜಿ ನಡೆಸುತ್ತಿದ್ದರಿಂದ ಈತನ ಕುರಿ ಫಂಡಿಗೆ ಸ್ಥಳೀಯ ಕೆಲವು ಉದ್ಯಮಿಗಳೂ ಸದಸ್ಯರಾಗಿದ್ದರು. ಇದೀಗ ಸ್ಥಳೀಯ ಉದ್ಯಮಿಗಳು ಆಕಾಶ ನೋಡುತ್ತಿದ್ದಾರೆ. ಪೊಲೀಸರಿಗೆ ದೂರು ಕೊಡೋಣ ಎಂದರೆ ಖುದ್ದು ಪೊಲೀಸರೇ ಈತನ ಫಂಡ್‌ನಿಂದಾಗಿ ಕುರಿಗಳಾಗಿದ್ದಾರೆ.
ಪ್ರಸ್ತುತ ಈಗ ಈತನ ಕುರಿ ಫಂಡ್ ಮುಳುಗಿದ್ದು ಅದರಲ್ಲಿ ತೊಡಗಿಸಿದ್ದ ಹಣವನ್ನು ಕೆಲವರು ವಸೂಲಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈತನ ಕುರಿಫಂಡಿನಲ್ಲಿ ಸದಸ್ಯರಾಗಿದ್ದ ಪೊಲೀಸರು ಸಹ ತಮ್ಮ ‘ಬಾತ್ಮೀದಾರ’ನನ್ನು ಹುಡುಕುತ್ತಿದ್ದು ಯಾರಲ್ಲೂ ಹೇಳಲಾಗದ ಸ್ಥಿತಿಯಲ್ಲಿದ್ದಾರೆ. ಅತ್ತ ಈತ ಹೊಂದಿದ್ದ ಅಂಗಡಿಯನ್ನು ಮಾಲೀಕರು ಬಿಡಿಸಿದ್ದು ಅದರಲ್ಲಿದ್ದ ವಸ್ತುಗಳನ್ನು ಫಂಡಿನಲ್ಲಿ ಸದಸ್ಯರಾಗಿದ್ದ ಸ್ಥಳಿಯ ಜನಪ್ರತಿನಿಧಿಯೊಬ್ಬರು ಕೊಂಡೊಯ್ದಿದ್ದಾರೆ. ಪೊಲೀಸರ ಮಾಹಿತಿ ದಾರನಾದ ಈತನ ಕುರಿತ ಮಾಹಿತಿ ಯಾರಲ್ಲಿ ಸಿಗಬಹುದು ಎಂದು ಪೊಲೀಸರೇ ಕಾಯುತ್ತಿದ್ದಾರೆ. ಈತನ ಆಪ್ತರ ಪ್ರಕಾರ ಪೊಲೀಸ್ ಬಾತ್ಮೀ ವಿದೇಶಕ್ಕೆ ಹಾರಿರಬಹುದು ಎಂದು ಹೇಳಲಾಗುತ್ತಿದೆ.
ಹಲ್ಲೆ ಆರೋಪಿಯಾಗಿದ್ದ!
ಹಿಂದೊಮ್ಮೆ ಲವ್‌ಜಿಹಾದ್‌ನ ಅಬ್ಬರ ಜಿಲ್ಲೆಯಲ್ಲಿ ಹೆಚ್ಚಾಗಿದ್ದಾಗ ಬಜರಂಗದಳದವರು ಕ್ರೈಸ್ತರ ಒಡೆತನದ ಸರ್ವಿಸ್ ಬಸ್ಸೊಂದಕ್ಕೆ ಮುಸ್ಲಿಮ್ ಹುಡುಗರು ಹಿಂದೂ ಹುಡುಗಿಯರನ್ನು ಹೇಗೆಲ್ಲಾ ಪಟಾಯಿಸುತ್ತಾರೆ ಎಂದೆಲ್ಲಾ ಎಚ್ಚರಿಕೆ ನೀಡುವ ಕರಪತ್ರವನ್ನು ಅಂಟಿಸಿದ್ದರು. ಇದನ್ನು ನೋಡಿ ಕ್ರೋಧಗೊಂಡಿದ್ದ ಸಂಘಟನೆಯೊಂದರ ಕಾರ‍್ಯಕರ್ತರು ಕಾರ್ನಾಡ್‌ನಲ್ಲಿ ಬಸ್ಸನ್ನು ನಿಲ್ಲಿಸಿ ಹಾನಿ ಮಾಡಿದ್ದರು. ಚಾಲಕ-ಕಂಡಕ್ಟರ್‌ಗೆ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಪೊಲೀಸ್ ಬಾತ್ಮೀದಾರ ಎಂದು ಕರೆಯಲ್ಪಡುವಾತ ಮೊದಲ ಆರೋಪಿಯಾಗಿದ್ದ. ಮಾತ್ರವಲ್ಲ ಆಗಿನ ಸರ್ಕಲ್ ಇನ್ಸ್‌ಪೆಕ್ಟರ್ ಈತನ ಕಪಾಳಕ್ಕೆ ಬಾರಿಸಿ ಕೇಸು ಜಡಿಯುವಂತೆ ಆದೇಶ ನೀಡಿದ್ದರು. ಆದರೆ ಆಗಿನ ಎಸ್ಸೈ ಸುದರ್ಶನ್ ಈತ ನಮ್ಮ ಬಾತ್ಮೀದಾರ ಎಂದು ಹೇಳಿ ಪ್ರಕರಣದಿಂದ ಪಾರು ಮಾಡಿದ್ದರು. ಅಲ್ಲಿಂದೀಚೆಗೆ ಬೆಳೆದು ಬಿಟ್ಟಿದ್ದ ಈತ ಪೊಲೀಸ್ ಠಾಣೆಯನ್ನೇ ತನ್ನ ಎರಡನೇ ಕಚೇರಿಯನ್ನಾಗಿ ಮಾಡಿದ್ದ. ಅಲ್ಲಿಂದಲೇ ಕಳ್ಳರಿಗೆ ಮಾಹಿತಿ ರವಾನಿಸಿ ಪೊಲೀಸರಿಂದ ಬಚಾವು ಮಾಡುತ್ತಿದ್ದ. ಈಗ ಲಕ್ಷಾಂತರ ರೂಪಾಯಿಯ ಕುರಿ ಫಂಡ್ ಇಟ್ಟು ಕೆಲ ಪೊಲೀಸರನ್ನೇ ಕುರಿ ಮಾಡಿ ಪರಾರಿಯಾಗಿದ್ದಾನೆ.

Advertisements
Posted in: Crime News