ಕಲಿ ಯೋಗೀಶನ ತಮ್ಮ ಪೊಲೀಸ್ ವಶಕ್ಕೆ!

Posted on March 25, 2011

0


ಮುಲ್ಕಿ: ಭೂಗತ ಪಾತಕಿ ರವಿ ಪೂಜಾರಿಯ ಸಹಚರ, ಸದ್ಯ ಭೂಗತನಾಗಿರುವ ಕಲಿ ಯೋಗೀಶನ ಸೋದರ ಗಣೇಶ್ ಬಂಗೇರಾ ಎಂಬಾತನನ್ನು ನಿನ್ನೆ ಕಾರ್ಕಳದ ನಂದಳಿಕೆ ಎಂಬಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗಣೇಶನನ್ನು ಬಂಧಿಸಿದ ಪೊಲೀಸರು ಸಿಸಿಬಿಯವರು ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಬೆಂಗಳೂರು ಸಿಸಿಬಿ ಪೊಲೀಸರು ಮುಕ್ಕದಲ್ಲಿ ರವಿ ಪೂಜಾರಿ ಸಹಚರ ಎಂಬ ನೆಪದಲ್ಲಿ ಮುಕ್ಕ ಭಾಸ್ಕರ ಯಾನೆ ಬಾಚು ಎಂಬಾತನನ್ನು ಆತನ ಸ್ನೇಹಿತನ ಸಹಿತ ಬಂಧಿಸಲಾಗಿತ್ತು. ನಂಬರ್ ಇಲ್ಲದ ಬಿಳಿ ಬಣ್ಣದ ಟವೇರಾ ವಾಹನದಲ್ಲಿ ಬಾಚುವನ್ನು ಕರೆದುಕೊಂಡು ಹೋಗಲಾಗಿತ್ತು. ಸ್ಥಳೀಯವಾಗಿ ಬಾಚುವನ್ನು ಆತನ ಹಿತಶತ್ರುಗಳ್ಯಾರೋ ಅಪಹರಿಸಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಪತ್ರಿಕೆ ಈ ವಿಷಯವನ್ನು ಬರೆದು ಸಿಸಿಬಿ ಪೊಲೀಸರ ಮೇಲೆ ಸಂಶಯ ವ್ಯಕ್ತಪಡಿಸಿತ್ತು. ಈ ಘಟನೆ ನಡೆದ ಮೂರು ದಿನದ ನಂತರ ಬೆಂಗಳೂರು ಸಿಸಿಬಿ ಪೊಲೀಸರು ಮುಕ್ಕದಿಂದ ಕರೆದುಕೊಂಡು ಹೋಗಿದ್ದ ಬಾಚು ಹಾಗೂ ಆನಂದ ಶೆಟ್ಟಿ ಎಂಬವರನ್ನು ಬೆಂಗಳೂರಿನಲ್ಲಿ ಅಪರಾಧ ಕೃತ್ಯಕ್ಕೆ ಸಿದ್ದನಾಗಿರುವ ಸಂದರ್ಭದಲ್ಲಿ ಬಂಧಿಸಿದ್ದೇವೆ ಎಂದು ಪತ್ರಿಕೆಗೆ ಹೇಳಿಕೆ ನೀಡಿ ಮಾರ್ಚ್‌ನಲ್ಲೇ ಎಪ್ರಿಲ್ ಫೂಲ್ ಮಾಡಿದ್ದರು. ಮಾತ್ರವಲ್ಲ ಬಾಚು ಜೊತೆ ಇದ್ದ ಗಣೇಶ ಬಂಗೇರಾ ಹಾಗೂ ವೇಣು ಎಂಬವರು ಪರಾರಿಯಾಗಿದ್ದಾರೆ ಎಂದೂ ತಿಳಿಸಿದ್ದರು. ಪೊಲೀಸರು ಹೇಳಿದ್ದ ‘ಪರಾರಿಯಾಗಿದ್ದ ಗಣೇಶ್ ಬಂಗೇರಾ ಕಲಿ ಯೋಗೀಶನ ಸೋದರ. ಕಲಿಯೋಗೀಶನ ಪಾತಕ ಜಗತ್ತಿಗೂ, ಗಣೇಶ್ ಬಂಗೇರಾನಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಪೊಲೀಸರು ಜಿಲ್ಲೆಯಲ್ಲಿ ರವಿಪೂಜಾರಿಯ ಬೆದರಿಕೆ ಕೇಳಿ ಬಂದಾಗಲೆಲ್ಲಾ ಗಣೇಶನನ್ನು ಹಿಡಿದು ಆನಂತರ ಬಿಡುಗಡೆ ಮಾಡುವುದು ಮಾಮೂಲಿಯಾಗಿತ್ತು. ಇಂಟರ್‌ಲಾಕ್‌ನ ಕಾಂಟ್ರಾಕ್ಟ್ ಮಾಡಿಕೊಂಡು ಬರುತ್ತಿರುವ ಗಣೇಶ ಊರಲ್ಲಿಯೇ ತಿರುಗಾಡುತ್ತಿದ್ದ. ಇದೇ ಸಂದರ್ಭದಲ್ಲಿ ಬಾಚುವಿನೊಂದಿಗೆ ತನ್ನ ಹೆಸರು ಕೇಳಿ ಬಂದಾಗ ಕಂಗಾಲಾಗಿದ್ದ. ತಾನು ಯಾವುದೇ ಪಾತಕ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಮೊನ್ನೆ ಮುಲ್ಕಿ ಸರ್ಕಲ್ ಇನ್ಸ್‌ಪೆಕ್ಟರ್ ಅವರಲ್ಲಿ ಹೇಳಲು ಹೋದಾಗ ಅವರೂ ವಿಷಯ ತಿಳಿದು ಲಿಖಿತವಾಗಿ ದೂರು ಕೊಡುವುದೇನೂ ಬೇಡ ಎಂದು ವಾಪಾಸು ಕಳಿಸಿದ್ದರು.
ಆದರೆ ನಿನ್ನೆ ನಡೆದಿದ್ದೇ ಬೇರೆ, ನಂದಳಿಕೆಯ ಮನೆಯೊಂದರಲ್ಲಿ ಇಂಟರ್‌ಲಾಕ್ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬಿಳಿ ಟವೇರಾದಲ್ಲಿ ಬಂದ ಪೊಲೀಸರು ಹಿಡಿದುಕೊಂಡು ಹೋಗಿದ್ದಾರೆ. ಅಣ್ಣ ಮಾಡಿದ ಅಪರಾಧಕ್ಕಾಗಿ ತಮ್ಮನನ್ನು ಕಾಡುತ್ತಿರುವ ಪೊಲೀಸರಿಗೆ ಬೆಂಗಳೂರಿನಲ್ಲಿ ‘ಪರಾರಿಯಾದ ಗಣೇಶ ಬಂಗೇರನ ಜಾಗಕ್ಕೆ ಫಿಟ್ ಮಾಡುವ ಕಾತರ. ಕೊನೆಗೂ ಈ ಗಣೇಶ ಸಿಕ್ಕಿದ್ದಾನೆ. ಮಾಡದ ಅಪರಾಧಕ್ಕಾಗಿ ನಾಳೆ ಗಣೇಶನನ್ನು ಎನ್‌ಕೌಂಟರ್ ಮಾಡಿ ‘ಪೂಜಾರಿ ಸಹಚರನ ಎನ್‌ಕೌಂಟರ್ ಎಂದು ಪೊಲೀಸರು ಮೀಸೆ ತಿರುವಿದರೂ ತಿರುವಬಹುದು. ಒಬ್ಬಾತ ಪೊಲೀಸರ ಕಿರಿಕಿರಿಗೆ ಹೆದರಿ ಊರು ಬಿಟ್ಟು ರವಿಪೂಜಾರಿ ಜೊತೆ ಸೇರಿ ಪಾತಕಿಯಾಗಿ ಬೆಳೆದಿದ್ದರೆ, ಮತ್ತೊಬ್ಬಾತನನ್ನೂ ಪೊಲೀಸರು ಭೂಗತಲೋಕಕ್ಕೆ ತಳ್ಳುವ ಆತುರದಲ್ಲಿ ಇದ್ದಾರೆಯೇ ಎನ್ನುವ ಪ್ರಶ್ನೆ ಗಣೇಶ ಬಂಗೇರನ ಆಪ್ತರದ್ದು. ಗಣೇಶನ ಮನೆಯವರು ಆತ ನಾಪತ್ತೆಯಾಗಿದ್ದಾನೆಂದು ದೂರು ಕೊಡಲು ಸಿದ್ದತೆ ನಡೆಸಿದ್ದಾರೆ.

Advertisements
Posted in: Crime News